ಸಚಿವರ ವಿಷಾದಯೋಗ ಶಸ್ತ್ರಸನ್ಯಾಸದ ಮಾತು
'ಕೈ' ಪಾಳಯದ ಚುನಾವಣೋತ್ತರ ರಾಜಕಾರಣದಲ್ಲಿ 'ಮೇಲುಗೈ' ಸಾಧಿಸಿ ಬೀಗುತ್ತಿದ್ದ...
ಬೆಂಗಳೂರು: 'ಕೈ' ಪಾಳಯದ ಚುನಾವಣೋತ್ತರ ರಾಜಕಾರಣದಲ್ಲಿ 'ಮೇಲುಗೈ' ಸಾಧಿಸಿ ಬೀಗುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಂಪುಟ ಬಳಗ ಸಹಿತ ಅಕಾಲಿಕ ವಿಷಾದಯೋಗಕ್ಕೆ ಪಕ್ಕಾಗಿದ್ದಾರೆಯೇ?
ರಾಜ್ಯ ವಿಧಾನಮಂಡಲ ಅಧಿವೇಶನ ಇತಿಹಾಸದಲ್ಲಿ ಹದಿನಾರು ವರ್ಷ ವನವಾಸ ಅನುಭವಿಸಿದ ನಂತರ ಮತ್ತೆ ಪ್ರತ್ಯಕ್ಷವಾಗಿರುವ ಇಲಾಖಾವಾರು ಬೇಡಿಕೆ ಚರ್ಚೆ ಎಂಬ ಮಹಾಯುದ್ಧದ ಹೊಸ್ತಿಲಲ್ಲಿ ಸಿಎಂ ಸಿದ್ದರಾಮಯ್ಯ 'ಶಸ್ತ್ರತ್ಯಾಗ'ದ ಮಾತನಾಡಿದ್ದಾರೆ. ಸಿಎಂ ಮಾತ್ರವಲ್ಲ ಅವರ ಸಂಪುಟದ ಹಲವು ಸದಸ್ಯರು ಶಾಸಕರ ಪ್ರಶ್ನೆಗೆ ಉತ್ತರ ನೀಡುವಾಗ ನಾವು ಅಧಿಕಾರದಲ್ಲಿರುವುದು ಎಷ್ಟು ದಿನ ಎಂಬುದು ಗೊತ್ತಿಲ್ಲ ಎಂಬ ರಾಗ ಎಳೆಯುತ್ತಿದ್ದಾರೆ.
ಕಾಂಗ್ರೆಸ್ ಪಡಸಾಲೆಯ ಒಳ ರಾಜಕಾರಣದಲ್ಲಿ ತಮ್ಮ ಹಿಡಿತ ಬಿಗಿಯಾಗಿದೆ ಎಂಬ ಭಾವ ಬಿತ್ತಿದ್ದ ಸಿದ್ದರಾಮಯ್ಯ, ಹಠಾತ್ ಆಗಿ ರಾಜಕೀಯ ಶಸ್ತ್ರಸನ್ಯಾಸ ದೀಕ್ಷೆಯ ಮಾತೆತ್ತಿರುವುದು ಹಾಗೂ ಸಂಪುಟ ಸಹೋದ್ಯೋಗಿಗಳು ಅದಕ್ಕೆ ಸಾಥ್ ನೀಡುತ್ತಿರುವುದು ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಭಾವನೆ ಮೂಡಲು ಕಾರಣವಾಗಿದೆ. ಪ್ರತಿಪಕ್ಷಗಳಿಂದ ಪರ್ಯಾಯ ನಾಯಕತ್ವದ ವ್ಯಂಗ್ಯ ಕೇಳಿ ಬರುತ್ತಿದ್ದರೆ ಸಿಎಂ ಸಿದ್ದರಾಮಯ್ಯ ಮತ್ತು ಅವರ ಸಚಿವ ಬಳಗ ಎದಿರೇಟು ನೀಡುವುದಿರಲಿ, ಅಲ್ಲಗಳೆಯುವ ಆಸಕ್ತಿಯನ್ನೂ ತೋರುತ್ತಿಲ್ಲ. ವಿಷಣ್ಣ ವದನದಲ್ಲಿ ಉತ್ತರದಲ್ಲಿ ಆತ್ಮವಿಶ್ವಾಸದ ಕೊರತೆ ಕಾಣುತ್ತಿದೆ.
ಈ ಎಲ್ಲ ಬೆಳವಣಿಗೆಗಳು ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ದಿನ ಆರಂಭವಾಗಿದೆ ಎಂಬುದರ ಮುನ್ಸೂಚನೆಯೇ ಎಂಬುದಕ್ಕೆ ಸ್ಪಷ್ಟ ಉತ್ತರ ಸಿಗುತ್ತಿಲ್ಲವಾದರೂ, ಬದಲಾವಣೆಯ ಗಾಳಿ ಬಲವಾಗಿಯೇ ಬೀಸುವ ಮುನ್ಸೂಚನೆ ದೊರೆಯುತ್ತಿದೆ. ಕಾಂಗ್ರೆಸ್‌ನ ಉನ್ನತ ಮೂಲಗಳ ಪ್ರಕಾರ, ವಿಧಾನ ಮಂಡಲ ಅಧಿವೇಶನದ ಬಳಿಕ ಉಸಿರೆತ್ತದೆ ಸಂಪುಟ ಪುನಾರಚನೆ ಮಾಡಬೇಕೆಂಬ ಹೈಕಮಾಂಡ್ ಕಟ್ಟಪ್ಪಣೆ ಈ ನಿರಾಸಕ್ತಿ ಕಾರಣ ಎನ್ನಲಾಗುತ್ತಿದೆ.
ಹುಸಿಯಾದ ನಿರೀಕ್ಷೆ; 9 ವರ್ಷಗಳ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಆಯಕಟ್ಟಿನ ಸ್ಥಾನಗಳನ್ನು ಮೂಲ-ವಲಸಿಗ ಕಾಂಗ್ರೆಸಿಗರ ನಡುವೆ ಸಮನಾಗಿ ಹಂಚಲಾಗುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿದ ನಂತರ ತಮ್ಮ ಆಪ್ತರಿಗೆ ಮಾತ್ರ ಆಯಕಟ್ಟಿನ ಸ್ಥಳ ಕಾಯುವ ಹೊಣೆಕಟ್ಟಿದರು. ಉಳಿದವರನ್ನು ವ್ಯವಸ್ಥಿತವಾಗಿ ಹೊರಗಿಡುವ ಪ್ರಯತ್ನ ನಡೆಸಿದರು.
ಇದರ ಫಲವಾಗಿಯೇ ಅವರು ಸಂಪೂರ್ಣ ಬಹುಮತ ಪಡೆದ ಕಾಂಗ್ರೆಸ್‌ನಲ್ಲಿ 'ಸಮ್ಮಿಶ್ರ ಸರ್ಕಾರ'ದ ನಾಯಕತ್ವ ವಹಿಸುವ ಸ್ಥಿತಿ ಸೃಷ್ಟಿಸಿದೆ. ಅಧಿಕಾರ ಸ್ವೀಕಾರದ ದಿನ ಘೋಷಿಸಿದ ಅನ್ನಭಾಗ್ಯ ಯೋಜನೆಯನ್ನು ಬಿಟ್ಟರೆ ಉಳಿದಿದ್ದಕ್ಕೆಲ್ಲ, ಸಂಪುಟ ಮತ್ತು ಪಕ್ಷದಿಂದ ಕೊಕ್ಕೆ ಬೀಳುತ್ತಿದೆ. ಈ ಪರಂಪರೆ ಈಗ ತಾರಕಕ್ಕೆ ತಲುಪಿರುವುದೇ ಸಿಎಂ ಸಿದ್ದರಾಮಯ್ಯ ಅವರ ವಿಷಾದ ಯೋಗದ ಹಿಂದಿನ ರಹಸ್ಯ ಎನ್ನಲಾಗುತ್ತಿದೆ.
ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯನವರಿಗೆ ಅರ್ಥವಾಗದ ಒಂದು ಪರಿಪಾಠವಿದೆ. ಯಾರೇ ಅಧಿಕಾರದಲ್ಲಿರಲಿ ಅವರ ಎದುರು ವಿರೋಧ ಪ್ರಕಟವಾಗುವುದಿಲ್ಲ. ಒಳಗಿಂದೊಳಗೆ ಮೂಗೇಟುಗಳು ಬೀಳುತ್ತವೆ. ಬಿದ್ದ ಪೆಟ್ಟು ಎಲ್ಲಿ ನೋವು ನೀಡುತ್ತದೆ ಎಂಬುದು ಗೊತ್ತಾಗುವಷ್ಟರಲ್ಲಿ ಪ್ರಪಾತ ಹತ್ತಿರ ಬಂದಿರುತ್ತದೆ. ಇಲ್ಲಿ ಎಡವಿ ಅಧಿಕಾರ ತ್ಯಜಿಸಿದವರನ್ನು ನಂತರ ಯಾರೂ ಮಾತನಾಡಿಸುವುದಿಲ್ಲ. ಮೊನ್ನೆ ನಡೆದ ಕಾಂಗ್ರೆಸ್ ಪ್ರತಿನಿಧಿ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯನವರಿಗೆ ಈ ಸೂಚನೆ ಸಿಕ್ಕಿರುವುದರಿಂದಲೇ ಈ ನಿರಾಸಕ್ತಿ ಪ್ರಕಟಣೆಗೆ ಕಾರಣ ಎನ್ನಲಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಮಾತ್ರವಲ್ಲ ಅವರ ಸಂಪುಟದಲ್ಲಿನ ಹಲವರ ಅಧಿಕಾರ ಮೊಟಕಾಗುವ ಸಾಧ್ಯತೆ ಇರುವುದರಿಂದ ಸಚಿವರ ಉತ್ಸಾಹ ಮಾಯವಾಗುತ್ತಿದೆ. ಅದಕ್ಕೆ ಪೂರಕವೆಂಬಂತೆ ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿಯಾಗಿ ಅಧಿಕಾರ ಪೂರೈಸುತ್ತಾರೆ ಎಂಬ ಮಾತನ್ನು ಮುಖಂಡರ ಮೂಲಕ ಅಲ್ಲಲ್ಲಿ ಹೇಳಿಸಲಾಗುತ್ತಿದೆ. ಇದರರ್ಥ ಕಾಂಗ್ರೆಸ್ ಹೈಕಮಾಂಡ್ ಇನ್ನು ಕೆಲವೇ ತಿಂಗಳಲ್ಲಿ ಪರ್ಯಾಯ ನಾಯಕತ್ವಕ್ಕೆ ಸೂಟು ಹೊಲಿಸಲು ಮುಂದಾಗಿದೆ ಎಂಬ ಅನುಮಾನ ಸೃಷ್ಟಿಸಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವಹಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್, ಸರ್ಕಾರಕ್ಕಿಂತ ಪಕ್ಷಕ್ಕೆ ಪ್ರಾಧಾನ್ಯ ನೀಡಬೇಕೆಂಬ ಸೂಚನೆ ನೀಡಿದ್ದಾರೆ. ಇದು ಸಿದ್ದರಾಮಯ್ಯ ಕೈಗೆ ಸಿಗದಂತೆ ಬೆಳೆಯುವುದನ್ನು ತಡೆಯುವ ಪ್ರಯತ್ನ ಎನ್ನಲಾಗುತ್ತಿದ್ದು, ಜೀವಮಾನದಲ್ಲೊಮ್ಮೆ ಮುಖ್ಯಮಂತ್ರಿಯಾಗಬೇಕೆಂಬ ಕನಸು ಸಾಕಾರ ಮಾಡಿಕೊಂಡ ಸಿದ್ದರಾಮಯ್ಯನವರನ್ನು ಹತಾಶೆಯ ಮಡುವಿಗೆನೂಕಿದೆ ಎನ್ನಲಾಗುತ್ತಿದೆ.
ಕಾಂಗ್ರೆಸ್ ಕಾರ್ಯಕರ್ತರು ಹತಾಶರಾಗಬೇಕಿಲ್ಲ. ಸರ್ಕಾರ ಐದು ವರ್ಷ ಪೂರ್ಣಗೊಳಿಸುತ್ತೆ. ಆದರೆ, ನಾನು ಇರುತ್ತೇನೋ ಇಲ್ಲವೋ ಗೊತ್ತಿಲ್ಲ.
- ಸಿದ್ದರಾಮಯ್ಯ,
ಮುಖ್ಯಮಂತ್ರಿ
(ಶನಿವಾರ ಅರಮನೆ ಮೈದಾನದಲ್ಲಿ ನಡೆದ ಕಾಂಗ್ರೆಸ್ ಪ್ರತಿನಿಧಿಗಳ ಸಭೆಯಲ್ಲಿ )
ಯಾರು ಏನೇ ಹೇಳಿದರೂ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಐದು ವರ್ಷ ಪೂರೈಸುತ್ತಾರೆ. ಯಾವ ಶಾಸಕರಿಗೂ ಅಸಮಾಧಾನ
ಇಲ್ಲ. ಎಲ್ಲ ವಿಚಾರದಲ್ಲೂ ಶಾಸಕಾಂಗ ಪಕ್ಷದ್ದೇ ಅಂತಿಮ ತೀರ್ಮಾನ.
- ಆರ್.ವಿ. ದೇಶಪಾಂಡೆ, ಸಚಿವ
ರಾಜ್ಯದ ಸಚಿವರು ಗೋಲ್ ಕೀಪರ್‌ಗಳಿದ್ದಂತೆ. 9 ಗೋಲು ತಡೆದು ಒಂದು ಗೋಲು ಬಿಟ್ಟರೂ ಅವನ ಮೇಲೇ ಎಲ್ಲ ತಪ್ಪು ಬಂದೆರಗುತ್ತವೆ. ಅವನ ಗ್ರಹಚಾರವೇ ನೆಟ್ಟಗಿರುವುದಿಲ್ಲ.
-ಯು.ಟಿ. ಖಾದರ್, ಸಚಿವ
-ರಾಘವೇಂದ್ರ ಭಟ್