ಹಲ್ಲೆ ನಡೆಸಿದ ವಿಜಯಾನಂದ
ಆಗ ಭೈರತಿ, ಈಗ ವಿಜಯಾನಂದ...! ಇವರು ನಾವು ಕಾಯಾ ವಾಚಾ ಮನಸಾ ಜನರ ರಕ್ಷಣೆಗೆ ನಿಲ್ಲುತ್ತೇವೆ...
ಬೆಂಗಳೂರು: ಆಗ ಭೈರತಿ, ಈಗ ವಿಜಯಾನಂದ...! ಇವರು ನಾವು ಕಾಯಾ ವಾಚಾ ಮನಸಾ ಜನರ ರಕ್ಷಣೆಗೆ ನಿಲ್ಲುತ್ತೇವೆ, ಸಂವಿಧಾನಕ್ಕೆ ಯಾವುದೇ ಅಪಚಾರ ಬಾರದಂತೆ ನೋಡಿಕೊಳ್ಳುತ್ತೇವೆ ಎಂಬ ಶಪಥಗೈದವರು.
ತಾನು ಹೋಗುತ್ತಿದ್ದ ದಾರಿಯಲ್ಲಿ ಟ್ರಾಫಿಕ್ ಫ್ರೀ ಮಾಡಲಿಲ್ಲ ಎಂಬ ಕಾರಣಕ್ಕೆ ಪೇದೆ ಮೇಲೆ ಹಲ್ಲೆ ಮಾಡಿದ್ದ ಭೈರತಿ ಬಸವರಾಜು ಮತ್ತು ಗುಂಡು, ತುಂಡು ಮಸ್ತಿ ಪಾರ್ಟಿಗೆ ಅಡ್ಡಿ ಮಾಡಿದರು ಎಂಬ ಕಾರಣಕ್ಕಾಗಿ ಪೇದೆಗಳಿಬ್ಬರ ಮೇಲೆ ದಾಳಿ ನಡೆಸಿದ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ. ಹುಟ್ಟು ಹಬ್ಬ ಆಚರಣೆ ನೆಪದಲ್ಲಿ ತಡರಾತ್ರಿವರೆಗೂ ಮದ್ಯಪಾನ ಮಾಡಿ, ಸಂಗೀತ ಹಾಕಿ ನೃತ್ಯ ಮಾಡುವ ಮೂಲಕ ಶಾಂತಿ ಭಂಗ ಮಾಡಿದ್ದನ್ನು ಪ್ರಶ್ನಿಸಿದ ಇಬ್ಬರು ಪೊಲೀಸ್ ಪೇದೆಗಳ ಮೇಲೆ ಹಲ್ಲೆ ನಡೆಸಿ ಶಾಸಕ ವಿಜಯಾನಂದ ಹಾಗೂ ಬೆಂಬಲಿಗರು ಗೂಂಡಾಗಿರಿ ಪ್ರದರ್ಶಿಸಿದ್ದಾರೆ. ಕಬ್ಬನ್‌ಪಾರ್ಕ್ ಪೇದೆ ಕಿರಣ್ ಕುಮಾರ್, ಪ್ರಶಾಂತ ನಾಯ್ಕ ಹಲ್ಲೆಗೊಳಗಾದವರು.