ಅತ್ಯಾಚಾರ ಕಡಿವಾಣಕ್ಕೆ ತಜ್ಞರ ಸಮಿತಿ
ರಾಜ್ಯದಲ್ಲಿ ಅತ್ಯಾಚಾರ ಪ್ರಕರಣಗಳನ್ನು ತಡೆಯಲು ಕಠಿಣ ನೀತಿ ರೂಪಿಸುವುದಕ್ಕಾಗ..
ವಿಧಾನಪರಿಷತ್ತು: ರಾಜ್ಯದಲ್ಲಿ ಅತ್ಯಾಚಾರ ಪ್ರಕರಣಗಳನ್ನು ತಡೆಯಲು ಕಠಿಣ ನೀತಿ ರೂಪಿಸುವುದಕ್ಕಾಗಿ ಸದ್ಯದಲ್ಲೇ ಕಾನೂನು ತಜ್ಞರ ಸಮಿತಿ ರಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ನ ಮೋಟಮ್ಮ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಅಪ್ರಾಪ್ತ ಬಾಲಕಿಯರು ಮತ್ತು ಯುವತಿಯರ ಮೇಲಿನ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಲೇ ಇವೆ. ಆದರೆ ಶಿಕ್ಷೆಗೆ ಒಳಗಾಗುತ್ತಿರುವರು ಮಾತ್ರ ಕಡಿಮೆ. ಇದನ್ನು ಸರಿಪಡಿಸಲು ಸರ್ಕಾರ ಮುಂದಾಗಿದೆ ಎಂದರು.
ಅತ್ಯಾಚಾರ ಪ್ರಕರಣಗಳಲ್ಲಿ ಬಂಧಿತರಾದವರಿಗೆ ಸರಿಯಾದ ಶಿಕ್ಷೆಯಾಗುತ್ತಿಲ್ಲ. ಆದ್ದರಿಂದ ಅಂಥವರಲ್ಲಿ ಭಯ ಇಲ್ಲದಂತಾಗಿದೆ. ಆದ್ದರಿಂದ ಇನ್ನುಮುಂದೆ ಅತ್ಯಾಚಾರ ಪ್ರಕರಣಗಳನ್ನು ನಿಯಂತ್ರಿಸುವುದಕ್ಕಾಗಿ ಕಾನೂನು ತಜ್ಞರ ಸಮಿತಿ ರಚಿಸಲಾಗುವುದು. ಈ ಸಮಿತಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುವುದಕ್ಕೆ ಕಾರಣಗಳೇನು? ಆರೋಪಿಗಳ ಬಂಧನ ಮತ್ತು ಶಿಕ್ಷೆ ವಿಧಿಸುವುದಕ್ಕೆ ಆಗುತ್ತಿರುವ ತೊಡಕುಗಳೇನು ಮತ್ತು ಅತ್ಯಾಚಾರದ ನಂತರ ನೊಂದವರಿಗೆ ಹೇಗೆಲ್ಲಾ ಪುನರ್ವಸತಿ ನೀಡಬೇಕು. ಅವರ ಮಕ್ಕಳಿಗೆ ಶಿಕ್ಷಣ ಮತ್ತು ಇತರ ಸೌಲಭ್ಯಗಳನ್ನು ಹೇಗೆಲ್ಲಾ ಒದಗಿಸಬೇಕೆಂದು ಸಮಿತಿ ಅಧ್ಯಯನ ಮಾಡಿ ವರದಿ ಸಲ್ಲಿಸುತ್ತದೆ. ಅಲ್ಲದೆ, ಪ್ರಕರಣಗಳ ತ್ವರಿತ ವಿಲೇವಾರಿ ಮತ್ತು ಶಿಕ್ಷೆ ವಿಧಿಸಲು ಕೈಗೊಳ್ಳಬೇಕಾದ ಕಠಿಣ ಕ್ರಮಗಳ ಬಗ್ಗೆಯೂ ಶಿಫಾರಸುಗಳನ್ನು ನೀಡಲಿದೆ ಎಂದು ಅವರು ವಿವರಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಮೋಟಮ್ಮ, ಈ ವರ್ಷ ಜೂನ್ ವರೆಗೂ 814 ಅತ್ಯಾಚಾರ ಪ್ರಕರಣಗಳು ನಡೆದಿದ್ದು, 611 ಮಂದಿಯನ್ನು ಬಂಧಿಸಲಾಗಿದೆ. ಆದರೆ ಈವರೆಗೂ ಯಾವೊಬ್ಬರಿಗೂ ಶಿಕ್ಷೆ ವಿದಿಸಿಲ್ಲ. ಇದೇರೀತಿ ಹಿಂದಿನ ವರ್ಷಗಳಲ್ಲೂ ಶಿಕ್ಷೆಯಾಗಿರುವ ಪ್ರಮಾಣ ಕಡಿಮೆ ಎಂದು ವಿಷಾದಿಸಿದರು.
ಆಗ ಪ್ರತಿಪಕ್ಷ ನಾಯಕ ಈಶ್ವರಪ್ಪ ಈ ಬಗ್ಗೆ ಸೂಕ್ತ ಸಮಿತಿ ರಚಿಸಿ ಅಗತ್ಯ ಮಾರ್ಗಸೂಚಿ ಪಡೆಯಬೇಕು. ಕಠಿಣ ಕ್ರಮಗಳ ಮೂಲಕ ಅತ್ಯಾಚಾರ ಪ್ರಕರಣ ತಡೆಯಬೇಕು. ತ್ವರಿತವಾಗಿ ಅಪರಾಧಿಗಳನ್ನು ಪತ್ತೆ ಹಚ್ಚಿ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು. ಇದಕ್ಕೆ ಕಾಂಗ್ರೆಸ್ನ ಜಯಮಾಲ, ಉಗ್ರಪ್ಪ, ಬಿಜೆಪಿಯ ತಾರ ದನಿಗೂಡಿಸಿದರು.