ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಒತ್ತೆಯಾಳು ನರ್ಸ್ ಗಳ ಸ್ಥಳಾಂತರ; ತಿಕ್ರಿತ್ ನಿಂದ ರಹಸ್ಯ ಸ್ಥಳಕ್ಕೆ ರವಾನೆ

ತಿಕ್ರಿತ್ ಆಸ್ಪತ್ರೆಯಲ್ಲಿದ್ದ ಕೇರಳದ 46 ನರ್ಸ್ಗಳ ಭವಿಷ್ಯ ಆತಂಕಕ್ಕೆ ಸಿಲುಕಿದೆ. ಇದುವರೆಗೆ ಗಲಭೆಪೀಡಿತ ಪ್ರದೇಶದಲ್ಲಿ ...

Rashmi Kasaragodu
Updated On : 4 Jul 2014, 11:44 am

ಬಾಗ್ದಾದ್: ತಿಕ್ರಿತ್ ಆಸ್ಪತ್ರೆಯಲ್ಲಿದ್ದ ಕೇರಳದ 46 ನರ್ಸ್ಗಳ ಭವಿಷ್ಯ ಆತಂಕಕ್ಕೆ ಸಿಲುಕಿದೆ. ಇದುವರೆಗೆ ಗಲಭೆಪೀಡಿತ ಪ್ರದೇಶದಲ್ಲಿ 'ಸಿಲುಕಿಕೊಂಡಿದ್ದ' ಅವರು ಈಗ ಸುನ್ನಿ ಬಂಡುಕೋರರ ಅಧಿಕೃತ ಒತ್ತೆಯಾಳುಗಳು. ನಗರದಲ್ಲಿ ಸೇನಾ ದಾಳಿ ತೀವ್ರವಾಗಿರುವ ಹಿನ್ನೆಲೆಯಲ್ಲಿ ಅವರನ್ನು ಇಸಿಸ್ ಗುರುವಾರ 'ರಹಸ್ಯ' ತಾಣಕ್ಕೆ ಕರೆದೊಯ್ದಿದೆ.
ಅವರನ್ನು ಎಲ್ಲಿಗೆ ಕರೆದೊಯ್ಯಲಾಗಿದೆ ಎನ್ನುವುದು ತಿಳಿದಿಲ್ಲ. ನರ್ಸ್ಗಳು ತಮ್ಮನ್ನು ಸಾಗಿಸುವುದಕ್ಕೆ ಆರಂಭದಲ್ಲಿ ಸೌಮ್ಯ ಪ್ರತಿರೋಧ ತೋರಿದರು. ಬಂಡುಕೋರರ 'ಧ್ವನಿ' ಬದಲಾಗಿದ್ದನ್ನು ಗ್ರಹಿಸಿ ಹೇಳಿದಂತೆ ಕೇಳಿದರು. ಬಸ್ ಏರುವಾಗ ಆಸ್ಪತ್ರೆ ಬಳಿ ನಡೆದ ಸ್ಫೋಟದಲ್ಲಿ ಐವರು ನರ್ಸ್ಗಳು ಗಾಯಗೊಂಡಿದ್ದಾರೆ.

ಕೈ ಮೀರಿದೆ:  'ಪರಿಸ್ಥಿತಿ ಈಗ ನಮ್ಮ ಕೈ ಮೀರಿದೆ' ಎಂದಿರುವ ವಿದೇಶಾಂಗ ಸಚಿವಾಲಯ ವಕ್ತಾರ ಸೈಯ್ಯದ್ ಅಕ್ರಬುದ್ದೀನ್, 'ನರ್ಸ್ಗಳು ತಿಕ್ರಿತ್ಗಿಂತ ಮೊಸುಲ್ ಅಥವಾ ಬೇರೆಡೆ ಇರುವುದೇ ಸೂಕ್ತ' ಎಂದಿದ್ದಾರೆ.
ಇನ್ನೂ ಕಳವಳಕಾರಿ ಸಂಗತಿ ಎಂದರೆ ಭಾರತ ಮತ್ತು ಬಂಡುಕೋರರ ನಡುವಿನ ಸೇತುವೆಯಾಗಿದ್ದ ಇರಾಕ್ನ ಕೆಲ ಸರ್ಕಾರೇತರ ಸಂಸ್ಥೆಗಳಿಗೆ ಇಸಿಸ್ ಜತೆಗಿನ ಸಂಪರ್ಕವೂ ಕಡಿದಿದೆ. ಕೇರಳ ಸಿಎಂ ಉಮ್ಮನ್ ಚಾಂಡಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ರನ್ನು ಭೇಟಿ ಮಾಡಿ ನರ್ಸ್ಗಳ ಬಿಡುಗಡೆ ಕುರಿತು ಸಮಾಲೋಚಿಸಿದರು.

1000 ಮಂದಿಗೆ ಟಿಕೆಟ್
ವಿದೇಶಾಂಗ ಇಲಾಖೆ 1 ಸಾವಿರ ಭಾರತೀಯರಿಗೆ ಸ್ವದೇಶಕ್ಕೆ ಹಿಂದಿರುಗಲು ಟಿಕೆಟ್ ವ್ಯವಸ್ಥೆ ಮಾಡಿದೆ. 1,500 ಮಂದಿ ಯುದ್ಧಗ್ರಸ್ತ ರಾಷ್ಟ್ರ ತೊರೆಯಲು ಮುಂದಾಗಿದ್ದಾರೆ. ಇಬ್ರಿಲ್ ಎಂಬ ಸ್ಥಳದಿಂದಲೂ ಕೂಡ ಹಲವಾರು ಭಾರತೀಯರು ಸ್ವದೇಶಕ್ಕೆ ಹಿಂತಿರುಗಲು ಆಸಕ್ತಿ ವಹಿಸಿದ್ದಾರೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.

ಭಾರತೀಯರ ಬಿಡುಗಡೆ ವಿಚಾರವಾಗಿ ಭಾರತ ಏಕಾಂಗಿಯಾಗಿ ಕೆಲಸ ಮಾಡುತ್ತಿಲ್ಲ, ಇರಾಕ್ ಒಳಗೆ ಮತ್ತು ಹೊರಗೆ ನಮಗೆ ಸಹವರ್ತಿಗಳಿದ್ದಾರೆ.
- ಸೈಯ್ಯದ್ ಅಕ್ರಬುದ್ದೀನ್, ವಿದೇಶಾಂಗ ವ್ಯವಹಾರಗಳ ಇಲಾಖೆ ವಕ್ತಾರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement