ಜಿಎಸ್ಟಿಗೆ ರಾಜ್ಯ ಸರ್ಕಾರದ ಬೆಂಬಲ
: ಕೇಂದ್ರ ಸರ್ಕಾರದ ಉದ್ದೇಶಿತ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಜಾರಿಗೆ...
ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ: ಕೇಂದ್ರ ಸರ್ಕಾರದ ಉದ್ದೇಶಿತ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಜಾರಿಗೆ ಕರ್ನಾಟಕ ಸರ್ಕಾರ ಬೆಂಬಲ ಸೂಚಿಸಿದೆ. ಜತೆಗೆ ಹೊಸ ತೆರಿಗೆ ಪದ್ಧತಿಯನ್ನು ಕಾಲಮಿತಿಯೊಳಗೆ ಜಾರಿ ಮಾಡಬೇಕೆಂದೂ ಒತ್ತಾಯಿಸಿದೆ.
ಸರಕು ಮತ್ತು ಸೇವಾ ತೆರಿಗೆ ಕಾಯ್ದೆ ಪುನಾ ಪರಿಷ್ಕೃತ ಸಂವಿಧಾನ ತಿದ್ದುಪಡಿಗೆ ತನ್ನ ಬೆಂಬಲ ವ್ಯಕ್ತಪಡಿಸಿರುವ ಕರ್ನಾಟಕ ಸರ್ಕಾರವು ಕೆಲವು ಮಾರ್ಪಾಡುಗಳಿಗೂ ಒತ್ತಾಯಿಸಿದೆ.
ಗುರುವಾರ ಕೇಂದ್ರ ಹಣಕಾಸು ಸಚಿವ ಅರುಣ್ ಜೆಟ್ಲಿ ಮತ್ತು ರಾಜ್ಯಗಳ ಹಣಕಾಸು ಸಚಿವರ ಉನ್ನತಾಧಿಕಾರ ಸಮಿತಿ ಸಭೆಯಲ್ಲಿ ಕರ್ನಾಟಕ ರಾಜ್ಯದ ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸೇವಾ ತೆರಿಗೆಯಿಂದ ರಾಜ್ಯಕ್ಕೆ ಬರಬೇಕಾದ ಬಾಕಿ ಹಣವನ್ನು ತ್ವರಿತವಾಗಿ ಬಿಡುಗಡೆ ಮಾಡುವಂತೆಯೂ ಒತ್ತಾಯಿಸಿದರು.
ಸಿದ್ದರಾಮಯ್ಯ ಗೈರು ಹಾಜರಿಯಲ್ಲಿ ಸಚಿವ ಎಚ್.ಸಿ.ಮಹಾದೇವಪ್ಪ ಅವರು ಲಿಖಿತ ಭಾಷಣ ಓದಿದರು.
ಹಣಕಾಸು ಸಂಸದೀಯ ಸ್ಥಾಯಿ ಸಮಿತಿ ಶಿಫಾರಸಿಗೆ ವ್ಯತಿರಿಕ್ತವಾಗಿ ಪ್ರವೇಶ ತೆರಿಗೆಯನ್ನು ರಾಜ್ಯ ಪಟ್ಟಿಯಿಂದ ಹೊರಗುಳಿಸಿರುವ ಬಗ್ಗೆ ಕರ್ನಾಟಕ ಆಕ್ಷೇಪ ವ್ಯಕ್ತಪಡಿಸಿದೆ. ಸ್ಥಳೀಯ ಸಂಸ್ಥೆಗಳಿಗೆ ಹಂಚಲು ರಾಜ್ಯ ಸರ್ಕಾರವೇ ಪ್ರವೇಶ ತೆರಿಗೆ ಸಂಗ್ರಹಿಸುವ ಅಧಿಕಾರ ಇರೇಬೇಕು ಈ ನಿಟ್ಟಿನಲ್ಲಿ ಉದ್ದೇಶಿತ ಕಾಯ್ದೆಗೆ ಅಗತ್ಯ ತಿದ್ದುಪಡಿ ತರುವಂತೆಯೂ ಒತ್ತಾಯಿಸಿದೆ.
ಕೇಂದ್ರದ ಯಾವುದೇ ತೆರಿಗೆಯೂ ಹಣಕಾಸು ಆಯೋಗದ ವ್ಯಾಪ್ತಿಯ ಹೊರಗುಳಿಯಬಾರದಂತೆ ವಿಧಿ 270ಕ್ಕೆ ತಿದ್ದುಪಡಿ ತರಬೇಕು. ರಾಜ್ಯಗಳಿಗೆ 14ನೇ ಹಣಕಾಸು ಆಯೋಗದಲ್ಲಿ ನೀಡಿರುವ ಜಿಎಸ್ಟಿ ಪರಿಹಾರದ ಭವರಷ್ಟೆಯಷ್ಟೆ ಸಾಕಾಗದು. ಸಂಸದೀಯ ಹಣಕಾಸು ಸ್ಥಾಯಿ ಸಮಿತಿ ಶಿಫಾರಸಿನಂತೆ ಜಿಎಸ್ಟಿ ಆಡಳಿತಾತ್ಮಕ ಮಂಡಳಿಯಡಿ ನಿಧಿಯನ್ನು ಒದಗಿಸಬೇಕು.
ರಾಜ್ಯಗಳಿಗೆ ನೀಡುವ ಪರಿಹಾರ ಕನಿಷ್ಠ ಮೂರು ವರ್ಷಗಳಿಗೆ ಸೀಮಿತಗೊಳಿಸುವ ಕೇಂದ್ರ ಸರ್ಕಾರದ ಪ್ರಯತ್ನ ಸ್ವೀಕಾರವಲ್ಲ. ಕನಿಷ್ಠ ಐದು ವರ್ಷಗಳವರೆಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಲಾಗಿದೆ.
ಕೇಂದ್ರ ಸೇವಾ ತೆರಿಗೆ ಪರಿಹಾರವನ್ನು ಕೇಂದ್ರ ಸಮರ್ಪಕವಾಗಿ ನೀಡುತ್ತಿಲ್ಲ. 2010-11 ರಿಂದ ರಾಜ್ಯದ ಸತತ ಕೋರಿಕೆ ಇಟ್ಟಿದ್ದರೂ ಕೇಂದ್ರ ಮನ್ನಿಸಿಲ್ಲ. ರಾಜ್ಯಕ್ಕೆ ಸೇವಾ ತೆರಿಗೆ ಪರಿಹಾರದ ರೂಪದಲ್ಲಿ ಕಳೆದ ಮೂರು ವರ್ಷಗಳಿಂದ 3889 ಕೋಟಿ ಬರಬೇಕಿದೆ. 2110-11ರ ಸಾಲಿನ ಬಾಕಿಯೇ 985 ಕೋಟಿ ರುಪಾಯಿ ಇದೆ. ಅದನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದೂ ಸಭೆಯಲ್ಲಿ ಆಗ್ರಹಿಸಲಾಗಿದೆ.