ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ನರೇಗಾ ಅಕ್ರಮಕ್ಕೆ ಗ್ರಾಪಂ ಸದಸ್ಯರೇ ಕಾರಣ

ನರೇಗಾದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರೇ ಗುತ್ತಿಗೆದಾರರು, ಜಾಬ್ ಕಾರ್ಡ್ ಅವರಲ್ಲೇ ಇರುತ್ತದೆ..

Rashmi Kasaragodu
Updated On : 4 Jul 2014, 11:35 am

ವಿಧಾನಸಭೆ: ನರೇಗಾದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರೇ ಗುತ್ತಿಗೆದಾರರು, ಜಾಬ್ ಕಾರ್ಡ್ ಅವರಲ್ಲೇ ಇರುತ್ತದೆ, ಶೇ. 90ರಷ್ಟು ಕೆಲಸಗಳಿಗೆ ಗ್ರಾಪಂ ಸದಸ್ಯರೇ ಗುತ್ತಿಗೆದಾರರು, ಅವರಿಂದಲೇ ಎಲ್ಲ ಬಿಲ್ಲುಗಳು...
ವಿಧಾನಸಭೆಯಲ್ಲಿ ಸಚಿವರಾದಿಯಾಗಿ ಪಕ್ಷಭೇದ ಮರೆತು ಶಾಸಕರು ಗ್ರಾಪಂ ಸದಸ್ಯರ ಮೇಲೆ ಭಾರಿ ದಾಳಿಯನ್ನೇ ನಡೆಸಿದರು. ಗ್ರಾಪಂ ವ್ಯಾಪ್ತಿ ಶಾಸಕರಿಗೆ ಬರುವುದಿಲ್ಲ, ಅವರು ಸಭೆಗೆ ಬರುವಂತಿಲ್ಲ ಎನ್ನುತ್ತಾರೆ. ನರೇಗಾ ಯೋಜನೆಯಲ್ಲಂತೂ ಅವರದ್ದೇ ಎಲ್ಲ. ಜಾಬ್ ಕಾರ್ಡ್ ಇರುವುದು ಅವರಲ್ಲೇ, ಕೆಲಸ ಮಾಡಿಸುವವರು ಅವರೇ, ಬಿಲ್ ಮಾಡುವವರು ಅವರೇ. ಇವರಿಂದಲೇ ಎಲ್ಲ ರೀತಿಯ ಅಕ್ರಮ ಎಂದು ವಿಧಾನಸಭೆಯಲ್ಲಿ ಗುರುವಾರ ಆರೋಪಗಳ ಸರಮಾಲೆ ಸುರಿಯಿತು.
ಸಚಿವರಾದ ಉಮಾಶ್ರೀ, ಶರಣಪ್ರಕಾಶ್ ಪಾಟೀಲ್ ಸೇರಿದಂತೆ ಎಲ್ಲರದ್ದೂ ಇದೇ ವ್ಯಾಖ್ಯಾನ. ಅಧಿಕಾರದಲ್ಲಿ ಇರುವವರ ಮಾತು ಮಾತ್ರ ಕೇಳುತ್ತಾರೆ. ಶಾಸಕರ ಮಾತು ಗ್ರಾಪಂ ಸದಸ್ಯರಿಗೆ ಲೆಕ್ಕವೇ ಇಲ್ಲ. ಅವರೇ ಎಲ್ಲ ಅಕ್ರಮಕ್ಕೆ ಕಾರಣ ಎಂದು ಗುಡುಗಿದರು.
ಪೊಲೀಸ್ ಠಾಣೆ ಸರಹದ್ದು ರೀತಿಯಲ್ಲಿ ಶಾಸಕರಿಗೂ ಸರಹದ್ದು ನಿಗದಿ ಮಾಡಿಬಿಡಿ. ಮಾತು ಕೇಳದ ಗ್ರಾಪಂಗೆ ನಾವು ಹೋಗುವುದೇ ಇಲ್ಲ ಎಂದು ಜೆಡಿಎಸ್ನ ವೈ.ಎಸ್.ವಿ. ದತ್ತ ಹೇಳಿದರು. ನರೇಗಾದಲ್ಲಿ ಕಳ್ಳಬಿಲ್ ಮಾಡುವವರು ಗ್ರಾಪಂ ಸದಸ್ಯರೇ ಎಂದು ಚೆಲುವರಾಯಸ್ವಾಮಿ ಆರೋಪಿಸಿದರು. ಕೆಲಸ ಅಲ್ಲಿ ಆಗಿರುವ ಬಿಲ್ಗೂ ವಾಸ್ತವಕ್ಕೂ ಅಜಗಜಾಂತರ ಎಂದು ಕಾಂಗ್ರೆಸ್ನ ರಾಜಣ್ಣ ದೂರಿದರು.


ಶಪಥ ಮಾಡಿ, ಕೆಲಸ ಮಾಡಿ
ಚುನಾವಣೆ ಸಂದರ್ಭದಲ್ಲಿ ಪ್ರತಿ ಗ್ರಾಮಕ್ಕೂ ಹೋಗುತ್ತೀರಿ. ನರೇಗಾದಂತ ಉತ್ತಮ ಯೋಜನೆ ಅನುಷ್ಠಾನ ಮಾಡಲು ಹೋದರೆ ತಪ್ಪೇನು? ಪ್ರಾಮಾಣಿಕ ಕೆಲಸ ಮಾಡಿ ಈ ವರ್ಷ ಕೇಂದ್ರದಿಂದ 15 ಸಾವಿರ ಕೋಟಿ ಬರಬೇಕು ಎಂಬಂತೆ ಕೆಲಸ ಮಾಡಿ. ಕನಿಷ್ಠ 5 ಸಾವಿರ ಹಣವನ್ನಾದರೂ ಕೇಂದ್ರದಿಂದ ತೆಗೆದುಕೊಳ್ಳುತ್ತೇವೆ ಎಂಬ ಶಪಥ ಮಾಡಿ...
ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಶಾಸಕರಿಗೆ ಹೇಳಿದ ಕಿವಿಮಾತಿದು. ಎಲ್ಲ ಗ್ರಾಪಂಗಳಿಗೆ ನಾವು ಹೋಗುವುದಕ್ಕೆ ಆಗುವುದಿಲ್ಲ ಎಂದು ಬಹುತೇಕ ಶಾಸಕರು ಹೇಳಿದ ಅದಕ್ಕೆ ಪ್ರತಿಯಾಗಿ ಈ ಮಾತುಗಳನ್ನಾಡಿದರು. 'ನಾವೇನು ಜಮೀನು ಮಾರಾಟ ಮಾಡುತ್ತಿದ್ದೀವಾ? ನಕಾರಾತ್ಮಕ ಭಾವನೆ ಬಿಟ್ಟು ಉತ್ಸಾಹದಿಂದ ಕೆಲಸ ಮಾಡಿ. ದುಡಿಯುವ ಹಕ್ಕನ್ನು ಎಲ್ಲರಿಗೂ ತಲುಪಿಸಿ' ಎಂದರು.
ನರೇಗಾ ಯೋಜನೆಯಲ್ಲಿ ಮಧ್ಯಪ್ರದೇಶದ ನಂತರ ರಾಜ್ಯ ಶೇ.97.12ರಷ್ಟು ಹಣ ಬಿಡುಗಡೆ ಮಾಡಿ ದೇಶದಲ್ಲೇ ಎರಡನೇ ಸ್ಥಾನ ಪಡೆದಿದೆ. ಇಎಫ್ಎಂಎಸ್ ಮೂಲಕ ಶೇ.100ರಷ್ಟು ಹಣ ಪಾವತಿ ಮಾಡಿ, 2000 ಕೋಟಿ ಬಿಡುಗಡೆ ಮಾಡಿ 2 ಕೋಟಿ ಖಾತೆಗಳನ್ನು ನಿರ್ವಹಿಸಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ್ ಹೇಳಿದರು. ಇದಕ್ಕೆ ಶಾಸಕರು ನಮ್ಮನ್ನು ಗ್ರಾಪಂಗಳು ಪರಿಗಣಿಸುವುದೇ ಇಲ್ಲ ಎಂದರು.



ನರೇಗಾ ಅಕ್ರಮ ತನಿಖೆ ಹೊಣೆ ಲೋಕಾಯುಕ್ತಕ್ಕೆ
ನರೇಗಾದಲ್ಲಿ ನಡೆದಿರುವ ಅಕ್ರಮದ ಸಮಗ್ರ ತನಿಖೆಯನ್ನು ಲೋಕಾಯುಕ್ತಕ್ಕೆ ವಹಿಸಿಕೊಡಲಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಖಾತೆ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ. ನರೇಗಾ ಯೋಜನೆಯಲ್ಲಿ 1771 ಕೋಟಿ ಪಾವತಿಯಲ್ಲಿ ಅಕ್ರಮವಾಗಿದೆ. 821 ಕೋಟಿ ಮೊತ್ತವನ್ನು ಸ್ಥಳೀಯವಾಗಿ ವೆಚ್ಚ ಎಂದು ಬಿಲ್ ಮಾಡಲಾಗಿದೆ. 617 ಕೋಟಿ ಬದುಕಿಲ್ಲದವರ ಹೆಸರಿನಲ್ಲಿ ಪಾವತಿಯಾಗಿದೆ. 446 ಕೋಟಿಗೆ 3,32,000 ಬಿಲ್ ಕೊಟ್ಟಿದ್ದಾರೆ. ಸಿಎನ್ಜಿ ವರದಿಯನ್ನೂ ನೀಡಿದೆ. ಹೀಗಾಗಿ ಇದನ್ನು ಲೋಕಾಯುಕ್ತ ತನಿಖೆಗೆ ವಹಿಸಲಾಗಿದೆ ಎಂದು ವಿಧಾನಸಭೆಯಲ್ಲಿ ತಿಳಿಸಿದರು.
ಲೋಕಾಯುಕ್ತಕ್ಕೆ ನೀಡುವುದು ಸರಿ. ಆದರೆ, ತನಿಖೆಗೆ ಸಮಯ ನಿರ್ದಿಷ್ಟಗೊಳಿಸಿ ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಸೂಚಿಸಿದರು. ಮೂರು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಲು ನಿರ್ದೇಶಿಸಿ ಎಂದು ಪ್ರತಿಪಕ್ಷ ನಾಯಕರು ಒತ್ತಾಯಿಸಿದರು. ಅದರಂತೆಯೇ ಆದೇಶಿಸಲಾಗುತ್ತದೆ ಎಂದು ಎಚ್.ಕೆ. ಪಾಟೀಲ್ ಹೇಳಿದರು. ಹಳ್ಳಿ ಕಟ್ಟಲು ನರೇಗಾ ಕಾಮಧೇನು. ನರೇಗಾ ಇನ್ನಷ್ಟು ಅರ್ಥಪೂರ್ಣವಾಗಲು ನಾವೆಲ್ಲ ಸೇರಿಕೊಂಡು ಪ್ರಯತ್ನಿಸಬೇಕು ಎಂದರು.
ನರೇಗಾ ಯೋಜನೆಗಳ ಬಗ್ಗೆ ಪರಿಶೀಲನೆ ನಡೆಸಲು ಈಗಾಗಲೇ ತಾಲೂಕು ವಿಚಕ್ಷಣ ಸಮಿತಿ ಇದೆ. ಇನ್ನು ಮುಂದೆ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಸಮಿತಿ ರಚಿಸಲಾಗುತ್ತದೆ. ನರೇಗಾದಲ್ಲಿ ಪ್ರತಿನಿತ್ಯದ ಕೂಲಿ 201ಕ್ಕೆ ನಿಗದಿಪಡಿಸಲಾಗಿದೆ. ನಿಯಮಗಳನ್ನು ಸರಳೀಕರಣಗೊಳಿಸಿ ಕಾಂಕ್ರೀಟ್ ರಸ್ತೆ, ಕಾಂಪೌಂಡ್ ಸೇರಿದಂತೆ ಅಗತ್ಯ ಕಾಮಗಾರಿಗಳಿಗೂ ಅನುವು ಮಾಡಿಕೊಡಲಾಗುತ್ತದೆ. ಒಂಬಡ್ಸ್ಮನ್ಗಳು ಅಕ್ರಮ ಕಾಮಗಾರಿಗಳ ತನಿಖೆ ನಡೆಸುತ್ತಿದ್ದು, 6.21 ಕೋಟಿಯಷ್ಟು ರಿಕವರಿಗೆ ಸೂಚಿಸಿದ್ದಾರೆ. ಉಚಿತ ಸಹಾಯವಾಣಿಯೂ ಇದ್ದು ಯಾವುದೇ ಅಕ್ರಮವಿದ್ದರೂ ದೂರು ನೀಡಬಹುದು. ಅದನ್ನು ಒಂಬಡ್ಸ್ಮನ್ಗಳಿಗೆ ವಹಿಸಲಾಗುತ್ತದೆ ಎಂದು ಎಚ್.ಕೆ. ಪಾಟೀಲ್ ತಿಳಿಸಿದರು.


3000 ಮೈದಾನ
ಪೂರ್ಣ
ರಾಜ್ಯದ ಗ್ರಾಪಂಗಳಿಗೆ ತಲಾ ಎರಡು ಆಟದ ಮೈದಾನಗಳಂತೆ 11,715 ಮೈದಾನಗಳ ಗುರಿ ಇದ್ದು, ಇದರಲ್ಲಿ 1,715 ಮೈದಾನಗಳು ನಿರ್ಮಾಣವಾಗಿದ್ದು, 2514 ನಿರ್ಮಾಣ ಪ್ರಕ್ರಿಯೆಯಲ್ಲಿವೆ ಎಂದು ಗ್ರಾಮೀಣಾಭಿವೃದ್ಧಿ ಖಾತೆ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ. ನಮ್ಮ 15 ಅಂಶಗಳ ಯೋಜನೆಗಳು ಕೇವಲ ಪುಸ್ತಕದಲ್ಲಿಲ್ಲ. ಅನುಷ್ಠಾನ ಆಗುತ್ತಿವೆ ಎಂದು ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಪ್ರತ್ಯುತ್ತರ ನೀಡಿ ಅಂಕಿ-ಅಂಶಗಳನ್ನು ವಿಧಾನಸಭೆಯಲ್ಲಿ ಗುರುವಾರ ನೀಡಿದರು. ನಮ್ಮ ಹೊಲ ನಮ್ಮ ದಾರಿ ಯೋಜನೆಯಲ್ಲಿ 46 ಸಾವಿರ ಕಿಮೀ ಗುರಿ ಇದ್ದು, 11,449 ಕಿಮೀ ಮುಗಿದಿದ್ದು, 12,549 ಕಿಮೀ ಪ್ರಗತಿಯಲ್ಲಿದೆ. 41 ಸಾವಿರ ಕುರಿ-ದನದ ದೊಡ್ಡಿಗಳಿಗಾಗಿ 1.40 ಲಕ್ಷ ಅರ್ಜಿಗಳು ಬಂದಿವೆ. 5786 ಸ್ಮಶಾನಗಳ ಅಭಿವೃದ್ಧಿಯಲ್ಲಿ 722ರಲ್ಲಿ ಕಾಮಗಾರಿ ಮುಗಿದಿದ್ದು, 876 ಪ್ರಗತಿಯಲ್ಲಿವೆ ಎಂದರು.


ಇಒಗಳು ಹೆಂಗಸರೂ ಅಲ್ಲ ಗಂಡಸರೂ ಅಲ್ಲ
ಇಒಗಳು ಹೆಂಗಸರೂ ಅಲ್ಲ, ಗಂಡಸರೂ ಅಲ್ಲ... ಏನು ಮಾಡೋದು...
ಗ್ರಾಮ ಪಂಚಾಯಿತಿಗಳಲ್ಲಿ ಇಒಗಳದ್ದೇ ದರ್ಬಾರು. ಅವರು ಹೇಳಿದ್ದಂಗೇ ನಾವೆಲ್ಲ ಕೇಳಬೇಕು ಎಂದು ಶಾಸಕರು ವಿಧಾನಸಭೆಯಲ್ಲಿ ಹೇಳಿದಾಗ, ಸ್ಪೀಕರ್ ಕಾಗೋಡು ತಿಮ್ಮಪ್ಪ ಹೇಳಿದ ಮಾತಿದು. ಆಗ ಇಡೀ ಸದನ ನಗೆಗಡಲಲ್ಲಿ ಮುಳುಗಿತು. ಹಾಗಾದರೆ ಅವರನ್ನು ಇಲ್ಲೇಕೆ ಇಟ್ಟುಕೊಂಡಿದ್ದೀರಿ, ಸವದತ್ತಿಗೆ ಕಳುಹಿಸಿಬಿಡಿ ಎಂದು ಬಿಜೆಪಿಯ ಗೋವಿಂದ ಕಾರಜೋಳ ನುಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement