ಮೋದಿ ರಾಜತಾಂತ್ರಿಕ ನಿಪುಣ
ಮೋದಿ ಒಬ್ಬ ರಾಜತಾಂತ್ರಿಕ ನಿಪುಣ. ಅವರ ಪ್ರತಿಜ್ಞಾ ಸ್ವೀಕಾರ ವೇಳೆ ಸಾರ್ಕ್ ದೇಶಗಳ ಮುಖ್ಯಸ್ಥರನ್ನು ...
ಬೆಳ್ತಂಗಡಿ: ಮೋದಿ ಒಬ್ಬ ರಾಜತಾಂತ್ರಿಕ ನಿಪುಣ. ಅವರ ಪ್ರತಿಜ್ಞಾ ಸ್ವೀಕಾರ ವೇಳೆ ಸಾರ್ಕ್ ದೇಶಗಳ ಮುಖ್ಯಸ್ಥರನ್ನು ಆಹ್ವಾನಿಸಿದ್ದು ಶ್ಲಾಘನೀಯ. ನೆರೆ ರಾಷ್ಟ್ರಗಳೊಂದಿಗಿನ ಉತ್ತಮ ಬಾಂಧವ್ಯಕ್ಕೆ ಇದು ಉತ್ತಮ ಹೆಜ್ಜೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅಭಿಪ್ರಾಯಪಟ್ಟಿದ್ದಾರೆ.
ಅವರು ಧರ್ಮಸ್ಥಳ ಶಾಂತಿವನದ ಶ್ರೀ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಆಸ್ಪತ್ರೆಗೆ ಭೇಟಿ ನೀಡಿದ್ದ ವೇಳೆ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮೋದಿ ಅವರ ಒಂದು ತಿಂಗಳ ಆಡಳಿತದ ಕಾರ್ಯಶೈಲಿಯನ್ನು ಈಗ ವಿಶ್ಲೇಷಿಸುವುದು ಉತ್ತಮ ಕ್ರಮವಲ್ಲ ಎಂದೂ ಹೇಳಿದರು.
ಸಮ್ಮಿಶ್ರವಲ್ಲ: ಈ ಸರ್ಕಾರವನ್ನು ಸಮ್ಮಿಶ್ರ ಎಂದು ಕರೆಯಲು ನಾನು ಸಿದ್ಧನಿಲ್ಲ. ಬಿಜೆಪಿ ತನ್ನ ಸ್ವಂತ ಬಲದ ಮೇಲೆ ಅಧಿಕಾರ ನಡೆಸುತ್ತಿದೆ. ಮಿತ್ರಪಕ್ಷಗಳ ಯಾವುದೇ ಒತ್ತಡ ಇಲ್ಲದೆ, ತನ್ನದೆ ಬಜೆಟ್ ಮಂಡಿಸಲು ಅದಕ್ಕೆ ಸಾಧ್ಯವಿದೆ. ಸಂಸತ್ನಲ್ಲಿ ಪ್ರತಿಪಕ್ಷದ ಸ್ಥಾನ ಯಾರಿಗೆ ನೀಡಬೇಕು ಎನ್ನುವುದು ಸ್ಪೀಕರ್ಗೆ ಬಿಟ್ಟ ವಿಚಾರ ಎಂದರು.
ಮೋದಿಗೆ ಜನತೆಯ ಆಶೀರ್ವಾದ: ದೇಶದಲ್ಲಿ 30 ವರ್ಷಗಳ ಬಳಿಕ ಉತ್ತಮ ಜನಾದೇಶ ಬಂದಿದೆ. ಏನೇ ಸಮಸ್ಯೆಗಳು ಬಂದರೂ ಅದನ್ನು ಎದುರಿಸಲು ಪ್ರಧಾನಿ ಮೋದಿಗೆ ಜನತೆಯ ಆಶೀರ್ವಾದವಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಜನರು ಒಂದು ಸದೃಢ ಸರ್ಕಾರ ಬರಬೇಕು ಎಂಬ ನಿಲುವು ಹೊಂದಿದ್ದರು. ಅದರಿಂದಾಗಿ ಬಿಜೆಪಿ ಹಾಗೂ ಕಾಂಗ್ರೆಸ್ನತ್ತ ಹೆಚ್ಚು ಒಲವು ತೋರಿಸಿದರು. ಹೀಗಾಗಿ ರಾಜ್ಯದಲ್ಲಿ ಜನತಾದಳಕ್ಕೆ ಹಿನ್ನಡೆಯಾಗಿದೆ. ಇದರೊಂದಿಗೆ ಪಕ್ಷದ ತಪ್ಪು ನಿರ್ಣಯಗಳೂ ಕಾರಣವಾಯಿತು ಎಂದು ಸೋಲನ್ನು ವಿಶ್ಲೇಷಿಸಿದರು.
ತಳಮಟ್ಟದ ಸಂಘಟನೆ: ನಾನು ಮನೆಯಲ್ಲೇ ಕೂರಲ್ಲ. ರಾಜ್ಯದಲ್ಲಿ ಜನತಾ ದಳವನ್ನು ತಳಮಟ್ಟದಿಂದ ಮತ್ತೆ ಕಟ್ಟುವ ಕಾರ್ಯ ಮಾಡಲಿದ್ದೇವೆ. ಕುಮಾರಸ್ವಾಮಿ ನೇತೃತ್ವದಲ್ಲಿ ಪಕ್ಷದ ಶಾಸಕರು, ವಿಧಾನಪರಿಷತ್ ಸದಸ್ಯರು ರಾಜ್ಯಾದ್ಯಂತ ಸಂಚರಿಸಿ ಪಕ್ಷ ಕಟ್ಟಲಿದ್ದಾರೆ ಎಂದು ಹೇಳಿದರು.
ಮೋದಿ ಟೀಕೆ: ಅಂದಿಗೇ ಸೀಮಿತ
ನರೇಂದ್ರ ಮೋದಿ ಬಗ್ಗೆ ನೀಡಿದ ಹೇಳಿಕೆ ಅಂದಿನ ಸಂದರ್ಭಕ್ಕೆ ಮಾತ್ರ. ಈ ಬಗ್ಗೆ ಪ್ರಧಾನಿ ಮೋದಿ ಜೊತೆ ಮಾತನಾಡಿದ್ದೇನೆ. ಚುನಾವಣೆ ಸಂದರ್ಭ ಪರಸ್ಪರ ನೀಡಿದ ಹೇಳಿಕೆಗಳು ಅಂದಿಗೆ ಮಾತ್ರ ಸೀಮಿತ. ಇನ್ನು ಮುಂದೆ ಜೊತೆಯಾಗಿಯೇ ದೇಶಕಟ್ಟುವ ಕೆಲಸ ಮಾಡೋಣವೆಂದು ಮೋದಿ ಹೇಳಿದ್ದಾರೆ.
ಟಿ ದೇವೇಗೌಡ, ಮಾಜಿ ಪ್ರಧಾನಿ