ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಹೆಚ್ಚುವರಿ ತೆರಿಗೆ ಪಂಚಾಯ್ತಿ

ಗ್ರಾಮ ಪಂಚಾಯಿತಿಗಳ ಆರ್ಥಿಕ ಸಬಲತೆ ಉದ್ದೇಶದಿಂದ ಕೃಷಿಯೇತರ ಪ್ರದೇಶದಲ್ಲಿ ಹೆಚ್ಚಿನ ತೆರಿಗೆ ಹಾಕಲು ರಾಜ್ಯ ....

Rashmi Kasaragodu
Updated On : 4 Jul 2014, 12:58 pm

ವಿಧಾನಸಭೆ: ಗ್ರಾಮ ಪಂಚಾಯಿತಿಗಳ ಆರ್ಥಿಕ  ಸಬಲತೆ ಉದ್ದೇಶದಿಂದ ಕೃಷಿಯೇತರ ಪ್ರದೇಶದಲ್ಲಿ ಹೆಚ್ಚಿನ ತೆರಿಗೆ ಹಾಕಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಇದಕ್ಕಾಗಿ ಕಾಯಿದೆ ತಿದ್ದುಪಡಿಗೆ ತೀರ್ಮಾನಿಸಿದೆ.
ಗ್ರಾಪಂ ವ್ಯಾಪ್ತಿಯ ಜಮೀನಿಗೆ ನಾಲ್ಕಾಣೆ, ಎಂಟಾಣೆ ಲೆಕ್ಕಾಚಾರದಲ್ಲಿ ತೆರಿಗೆ ಹಾಕಲಾಗುತ್ತಿದೆ. ವಾಣಿಜ್ಯ ಚಟುವಟಿಕೆ ಮೇಲೆ ಹೆಚ್ಚಿನ ತೆರಿಗೆ ಹಾಕುವ ಮೂಲಕ ಸಂಪನ್ಮೂಲ ಕ್ರೋಡೀಕರಣಕ್ಕೆ ಅನುಕೂಲ ಮಾಡಿಕೊಡಲಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್ರಾಜ್ ಖಾತೆ ಸಚಿವ ಎಚ್.ಕೆ. ಪಾಟೀಲ್ ವಿಧಾನಸಭೆಯಲ್ಲಿ ಗುರುವಾರ ತಿಳಿಸಿದರು.
ಇಲಾಖೆಯ ಅನುದಾನ ಬೇಡಿಕೆ ಮೇಲೆ ನಡೆದ ಚರ್ಚೆಗೆ ಉತ್ತರಿಸಿದ ಸಚಿವರು, ಗ್ರಾಪಂಗಳಿಗೆ ರಾಜ್ಯ ಸರ್ಕಾರ ನೀಡುತ್ತಿರುವ ಅನುದಾನದ ಅರ್ಧದಷ್ಟನ್ನಾದರೂ ತೆರಿಗೆ ಮೂಲಕ ಸಂಗ್ರಹಿಸಲು ಅಧಿಕಾರ ನೀಡಬೇಕಾಗುತ್ತದೆ. ಗ್ರಾಪಂಗಳಿಗೆ ಹೆಚ್ಚಿನ ಸಂಪನ್ಮೂಲ ಕ್ರೋಡೀಕರಣಕ್ಕೆ ಅನುವು ಮಾಡಿಕೊಡಲು ಕಾಯಿದೆಗೆ ತಿದ್ದುಪಡಿ ಮಾಡಲು ನಿರ್ಧರಿಸಲಾಗಿದೆ ಎಂದರು.
ಗ್ರಾಪಂಗಳು ತಮ್ಮದೇ ಆದಾಯ ಸಂಗ್ರಹಿಸಬೇಕು. ಪೈಸೆ ಲೆಕ್ಕಾಚಾರದ ಹಳೆಯಕಾಲದ ತೆರಿಗೆ ಸಂಗ್ರಹದಿಂದ ಪ್ರಯೋಜನವಾಗುವುದಿಲ್ಲ. ಹೀಗಾಗಿ, ಗ್ರಾಮ ಪಂಚಾಯಿತಿ ಕಾಯಿದೆ 1993ರ ಶೆಡ್ಯೂಲ್ 4 ಅನ್ನು ವಾಪಸ್ ಪಡೆದುಕೊಂಡು ಕಾನೂನು ರೀತಿ ಬದಲಾವಣೆ ಮಾಡಲಾಗುತ್ತದೆ. ತೆರಿಗೆಯ ಕನಿಷ್ಠ ಹಾಗೂ ಗರಿಷ್ಠ ಮಿತಿಯನ್ನು ಗೊತ್ತುಪಡಿಸಲು ನಿಯಮ ರೂಪಿಸಿ, ಸಂಪನ್ಮೂಲ ಕ್ರೋಡೀಕರಿಸಲಾಗುತ್ತದೆ ಎಂದರು.

ಯಾರ್ಯಾರಿಗೆ ತೆರಿಗೆ?
ವಿಮಾನ ನಿಲ್ದಾಣ, ಟೋಲ್ ರಸ್ತೆ, ಎಲ್ಲ ರೀತಿಯ ಕೈಗಾರಿಕೆ, ಒಎಫ್ಸಿ, ಜಾಹೀರಾತು ಫಲಕ/ಹೋರ್ಡಿಂಗ್ಸ್, ವಿಂಡ್ಮಿಲ್, ಸೋಲಾರ್ ಪಾರ್ಕ್, ಮರಳು, ಗಣಿಗಾರಿಕೆ, ಆಟೋಸ್ಟ್ಯಾಂಡ್, ಖಾಸಗಿ/ಕೆಎಸ್ಆರ್ಟಿಸಿ ಬಸ್ ನಿಲ್ದಾಣ, ಅರ್ಥ್ ಮೂವರ್ಸ್, ಪೆಟ್ರೋಲ್ ಬಂಕ್, ಅಮ್ಯೂಸ್ಮೆಂಟ್ ಪಾರ್ಕ್, ಸೈಬರ್ ಕೆಫೆ, ಚಹಾ ಅಂಗಡಿ, ಹೊಟೇಲ್ ಸೇರಿದಂತೆ ಎಲ್ಲ ರೀತಿಯ ವಾಣಿಜ್ಯ ಚಟುವಟಿಕೆಗಳು.


ಎರವಲು ಸೇವೆ ಇಲ್ಲ!


ಗ್ರಾಪಂಗಳಲ್ಲಿರುವ ಕಾರ್ಯನಿರ್ವಾಹಕ ಅಧಿಕಾರಿ (ಇಒ) ಹುದ್ದೆಗಳಿಗೆ ಎರವಲು ಸೇವೆಯನ್ನು ನಿಷೇಧಿಸಲಾಗುತ್ತದೆ. ಸದ್ಯ ಶೇ.20ಇಒಗಳನ್ನಷ್ಟೇ ಎರವಲು ಪಡೆಯಲಾಗುತ್ತದೆ. ಈಗ ಶೇ.60ರಷ್ಟಿರುವ ಎರವಲು ಇಒಗಳನ್ನು ಶೇ.20ಕ್ಕೆ ಇಳಿಸಲಾಗುತ್ತದೆ. ನಂತರ ಸಂಪೂರ್ಣ ಇಲ್ಲವಾಗಿಸಲಾಗುತ್ತದೆ. ಜತೆಗೆ, ಮುಂದಿನ ದಿನಗಳಲ್ಲಿ ಕೆಎಎಸ್ ದರ್ಜೆಯ ಅಧಿಕಾರಿಯನ್ನು ಇಒ ಮಾಡುವ ಉದ್ದೇಶವೂ ಇದೆ. 207 ಸಹಾಯಕ ಎಂಜಿನಿಯರ್ಗಳು, 407 ಕಿರಿಯ ಎಂಜಿನಿಯರ್ಗಳ ಹುದ್ದೆಗಳನ್ನು ವಿಶೇಷ ನೇಮಕದಂತೆ ಎರಡು ತಿಂಗಳಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ. 357 ಪಿಡಿಒಗಳನ್ನು ನೇರ ನೇಮಕ ಮಾಡಿಕೊಳ್ಳಲಾಗುತ್ತದೆ. 819 ಪಿಡಿಒಗಳ ಹುದ್ದೆಯನ್ನು ಬಡ್ತಿಯಿಂದ ಪೂರೈಸಲಾಗುತ್ತದೆ. 300 ಗ್ರೇಡ್1, 2 ಕಾರ್ಯದರ್ಶಿಗಳ ನೇಮಕವೂ ಆಗಲಿದೆ.

2015 ರ ವೇಳೆಗೆ ಬ್ರಾಡ್ಬ್ಯಾಂಡ್
ಗ್ರಾಪಂಗಳಲ್ಲಿ ಇಂಟರ್ನೆಟ್/ಬ್ರಾಡ್ಬ್ಯಾಂಡ್, ಕರೆಂಟ್ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಂಡಿದ್ದು, ಭಾರತ್ ಬ್ರಾಡ್ಬ್ಯಾಂಡ್ ಸಂಸ್ಥೆ ಜತೆ ಮಾತುಕತೆ ಆಗಿದೆ. 2015ರ ಮಾರ್ಚ್ಗೆ ಎಲ್ಲ ಗ್ರಾಪಂಗಳಲ್ಲೂ ಬ್ರಾಡ್ಬ್ಯಾಂಡ್ ನಿರಂತರ ಲಭ್ಯ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement