ಹೆದ್ದಾರಿಯಲ್ಲಿ ಅನಿಲ ಟ್ಯಾಂಕರ್ ಪಲ್ಟಿ ಸಂಜೆವರೆಗೆ ಸಂಚಾರ ವ್ಯತ್ಯಯ
ಇಲ್ಲಿಗೆ ಸಮೀಪದ ಬಜತ್ತೂರು ಗ್ರಾಮದ ಬೆದ್ರೋಡಿಯ..
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಬಜತ್ತೂರು ಗ್ರಾಮದ ಬೆದ್ರೋಡಿಯ ರಾ.ಹೆ. 75ರಲ್ಲಿ ಮುಂಜಾನೆ 5 ಗಂಟೆಗೆ ಅಡುಗೆ ಅನಿಲ ಸಾಗಿಸುತ್ತಿದ್ದ ಟ್ಯಾಂಕರ್ ಪಲ್ಟಿ ಹೊಡೆದಿದೆ. ಈ ವೇಳೆ ಅನಿಲ ಸೋರಿಕೆಯಿಂದ ಸಂಜೆವರೆಗೆ ಸಂಚಾರ ಮಾರ್ಗ ಬದಲಿಸಲಾಗಿತ್ತು.
ಮಂಗಳೂರಿನಿಂದ ಬೆಂಗಳೂರಿನತ್ತ ಅಡುಗೆ ಅನಿಲ ಹೊತ್ತೊಯ್ಯುತ್ತಿದ್ದ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಬೆದ್ರೋಡಿ ತಿರುವಿನಲ್ಲಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಮಗುಚಿ ಬಿದ್ದಿದೆ. ಡಿಕ್ಕಿ ರಭಸಕ್ಕೆ ವಿದ್ಯುತ್ ಕಂಬ ತುಂಡಾಗಿದೆ. ಈ ವೇಳೆ ಅನಿಲ ಸೋರಿಕೆಯಾಗಿದೆ. ಇದನ್ನು ಕಂಡ ಚಾಲಕ ಬೇರ್ಪಟ್ಟಿದ್ದ ಕ್ಯಾಪ್ ಅನ್ನು ಮರು ಜೋಡಿಸಿ ಸೋರಿಕೆ ತಡೆಗಟ್ಟಿದ್ದಾರೆ.
ಸಂಜೆವರೆಗೂ: ಅಪಘಾತಕ್ಕೀಡಾದ ಟ್ಯಾಂಕರ್ನಲ್ಲಿರುವ ಅನಿಲವನ್ನು ಬೇರೊಂದು ಟ್ಯಾಂಕರ್ಗೆ ವರ್ಗಾಯಿಸುವ ಕಾರ್ಯ ಗುರುವಾರ ಸಂಜೆ ತನಕವೂ ನಡೆಯಿತು. ಮುನ್ನೆಚ್ಚರಿಕಾ ಕ್ರಮವಾಗಿ ಹೆದ್ದಾರಿಯಲ್ಲಿನ ವಾಹನ ಸಂಚಾರವನ್ನು ಈ ಭಾಗದಲ್ಲಿ ತಡೆ ಹಿಡಿಯಲಾಗಿತ್ತು. ಕಾಂಚನಾ ಮಾರ್ಗವಾಗಿ ಹಾಗೂ ಇಚ್ಲಂಪಾಡಿ ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಅನುವು ಮಾಡಿಕೊಡಲಾಯಿತು.