ಉರಿವ ಚಿತೆಯಲ್ಲಿ ಬದುಕು ಬೆಳಗಬೇಕೇ?
ಅಭಿವೃದ್ಧಿಯ ಹೆಸರಿನ ಒಂದೇ ಒಂದು ಸುಳಿಗಾಳಿ ಬೀಸಿದರೂ ಸಾಕು, ರಾಜ್ಯವನ್ನು ಪ್ರತಿಭಟನೆಯ ಕಾರ್ಮೋಡ ಕವಿಯುತ್ತದೆ...
ಅಭಿವೃದ್ಧಿಯ ಹೆಸರಿನ ಒಂದೇ ಒಂದು ಸುಳಿಗಾಳಿ ಬೀಸಿದರೂ ಸಾಕು, ರಾಜ್ಯವನ್ನು ಪ್ರತಿಭಟನೆಯ ಕಾರ್ಮೋಡ ಕವಿಯುತ್ತದೆ. ಹೀಗೇಕೆ? ಉಷ್ಣ ವಿದ್ಯುತ್ ಸ್ಥಾವರದ ಹಿನ್ನೆಲೆಯಲ್ಲಿ ಪ್ರಶ್ನೆಗೆ ಉತ್ತರ ಸ್ವಲ್ಪ ಕಷ್ಟವೇ? ಏಕೆಂದರೆ ಅಲ್ಲಿ ಒಂದಷ್ಟು ಪಾರಿಸಾರಿಕ, ವೈಜ್ಞಾನಿಕ, ಸಾಮಾಜಿಕ ಸಂಗತಿಗಳು ಉದ್ಭವಿಸುತ್ತದೆ. ಪ್ರಶ್ನೆಗಳ ಕಾರ್ಮೋಡ ಈಗಾಗಲೇ ರಾಜ್ಯದ ಉತ್ತರ ಭಾಗವನ್ನು ಆವರಿಸಿಕೊಂಡಿರುವುದು ನಿಜ.
ವಾಸ್ತವದಲ್ಲಿ ಇಂದು ಕೂಡಗಿಯಲ್ಲಿ ತಲೆ ಎತ್ತುತ್ತಿರುವ ಉಷ್ಣ ಸ್ಥಾವರ ಮೊದಲು ಉತ್ತರ ಕನ್ನಡದ ತದಡಿಯಲ್ಲಿ ಪ್ರಸ್ತಾವಗೊಂಡಿತ್ತು. ಸರಿ ಸುಮಾರು 3 ಸಾವಿರ ಎಕರೆ ಪ್ರದೇಶದಲ್ಲಿ ತಲೆ ಎತ್ತಲಿರುವ ಉಷ್ಣ ವಿದ್ಯುತ್ ಸ್ಥಾವರದಿಂದ 4 ಸಾವಿರ ಮೆಗಾವ್ಯಾಟ್ನಷ್ಟು ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದೆ. ಪ್ರತಿ ಘಟಕದಲ್ಲಿ 800 ಮೆಗಾವ್ಯಾಟ್ನಂತೆ ಏಕಕಾಲದಲ್ಲಿ ಇಷ್ಟು ಪ್ರಮಾಣದ ವಿದ್ಯುತ್ ಉತ್ಪಾದನೆ ಇಲ್ಲಿನ ಹೆಗ್ಗಳಿಕೆಯಾಗಲಿದೆ.
ಅದೇನೋ ಸರಿ, ಆದರೆ ಇಷ್ಟು ವಿದ್ಯುತ್ ಉತ್ಪಾದನೆಗೆ ನಾವು ಬಳಸ ಹೊರಟಿರುವುದು ವಿದೇಶಿ ಕಲ್ಲಿದ್ದಲನ್ನು. ನಮ್ಮ ಕಲ್ಲಿದ್ದಲಿನ (4 ಸಾವಿರ ಕ್ಯಾಲೊರಿ) ಸಾಮರ್ಥ್ಯಕ್ಕಿಂತ 2 ಸಾವಿರ ಕ್ಯಾಲೊರಿಯಷ್ಟು (6 ಸಾವಿರ ಕ್ಯಾಲೊರಿ) ಅಧಿಕ ಉಷ್ಣಾಂಶವನ್ನು ಹೊರಸೂಸುವ ಇದು ಸಹಜವಾಗಿಯೇ ವಾತಾವರಣಕ್ಕೆ ಹೆಚ್ಚಿನ ಸಲ್ಫರ್ ಡೈಆಕ್ಸೈಡ್ ಅನ್ನೂ ಬಿಡುಗಡೆ ಮಾಡುತ್ತದೆ. ಇದೇ ಅಸಲಿಗೆ ಉಷ್ಣ ಸ್ಥಾವರಗಳ ಬಗೆಗಿನ ಆತಂಕಕ್ಕೆ ಮೂಲ ಕಾರಣ.
ವಿಶ್ವದ ವಾತಾವರಣದಲ್ಲಿ ಅರ್ಧದಷ್ಟು ಸಲ್ಫರ್ ಡೈಆಕ್ಸೈಡ್ ಪ್ರಾಕೃತಿಕವಾಗಿ ಹೊರಹೊಮ್ಮುತ್ತದೆಯಾದರೂ ಕೈಗಾರಿಕಾ ವಲಯದಲ್ಲಿ ಈ ಪ್ರಮಾಣ ಶೇ. 90ಕ್ಕಿಂತ ಹೆಚ್ಚು ಎಂಬುದನ್ನು ವಿಜ್ಞಾನ ವಲಯ ಒಪ್ಪಿಕೊಂಡಿದೆ. ಸಲ್ಫರ್ ಡೈಆಕ್ಸೈಡ್ನಂಥ ವಿಕಿರಣ ಸೂಸುವ ವಸ್ತುಗಳನ್ನು ವಸುಂಧರೆ ತನ್ನೊಡಲಲ್ಲಿ ಹುದುಗಿಸಿ ಕೊಂಡಿಟ್ಟುಕೊಂಡು ಮಕ್ಕಳ ಪೊರೆಯುತ್ತಿದ್ದಳು. ಆದರೆ ನಾವದನ್ನು ಹೊರತೆಗೆದು ಇಡೀ ಜೀವ ವ್ಯವಸ್ಥೆಗೇ ಅಪಾಯವನ್ನು ತಂದೊಡ್ಡಿಕೊಳ್ಳುತ್ತಿದ್ದೇವೆ. ಇದರಿಂದಾಗಿ ದೇಶದ ಇಂದಿನ ಕೈಗಾರಿಕಾ ಸನ್ನಿವೇಶದಲ್ಲಿ 60 ದಶಲಕ್ಷ ಟನ್ಗಿಂತಲೂ ಹೆಚ್ಚಿನ ಸಲ್ಫರ್ ಡೈಆಕ್ಸೈಡ್ ವಾತಾವರಣ ಸೇರುತ್ತಿದೆ ಎಂದು ಅಂದಾಜು ಮಾಡಲಾಗಿದೆ. ಇದಕ್ಕೆ ಈಗಾಗಲೇ ನಮ್ಮ ರಾಜ್ಯದಲ್ಲಿರುವ ಪ್ರಮುಖ ಅಣು ಸ್ಥಾವರ ಕೈಗಾ ಮತ್ತು ರಾಯಚೂರು ಘಟಕಗಳೊಂದಿಗೆ ಕೂಡಗಿಯೂ ಸೇರ್ಪಡೆಯಾಗಲಿದೆ. 110 ರಿಂದ 115 ದಶಲಕ್ಷ ಟನ್ ಸಲ್ಫರ್ ಡೈ ಆಕ್ಸೈಡ್ ಉತ್ಪಾದನೆಯಾಗುತ್ತಿರುವ ಯುರೋಪ್ ಹಾಗೂ ಉತ್ತರ ಅಮೆರಿಕದ ಕೈಗಾರಿಕಾ ವಲಯದಲ್ಲಿ ಉಂಟಾಗುತ್ತಿರುವ ಆಮ್ಲ ಮಳೆಯಂಥ ವಿದ್ಯಮಾನಕ್ಕೆ ನಮ್ಮ ರಾಜ್ಯದ ಇಂಥ ವಿದ್ಯುತ್ ಸ್ಥಾವರಗಳ ಪ್ರದೇಶಗಳೂ ಬಹು ಹತ್ತಿರದಲ್ಲಿವೆಯೇ ಉತ್ತರ ಬೇಕಿದೆ.
ಅಸಲಿಗೆ ಇಂಥ ವಿದ್ಯುತ್ ಸ್ಥಾವರಗಳ ಮೂಲ ಇಂಧನವೇ ಕಲ್ಲಿದ್ದಲು. ಶುದ್ಧೀಕರಿಸಿದ ಕಲ್ಲಿದ್ದಲನ್ನು ಕುಲುಮೆಯಲ್ಲಿ ಉರಿಸಿ, ಉಂಟಾಗುವ ಶಾಖದಿಂದ ನೀರನ್ನು ಕುದಿಸಲಾಗುತ್ತದೆ. ಇಂಥ ಬಿಸಿನೀರಿನಿಂದ ಬರುವ ಹಬೆಯಲ್ಲಿ ಟರ್ಬೈನರ್ಗಳನ್ನು ತಿರುಗಿಸಿ ವಿದ್ಯುತ್ ಉತ್ಪಾದಿಸಲಾಗುತ್ತದೆ. ಹೀಗೆ ಕಲ್ಲಿದ್ದಲನ್ನು ಉರಿಸುವಾಗ ಸಲ್ಫರ್, ನೈಟ್ರೋಜನ್ ಡೈ ಆಕ್ಸೈಡ್ಗಳು ಯಥೇಚ್ಛ ಬಿಡುಗಡೆಯಾಗುತ್ತವೆ. ಇವು ಸುತ್ತಲಿನ 200 ಕಿ.ಮೀ.ವರೆಗೂ ಪ್ರಭಾವ ಬೀರಬಲ್ಲವು. ವಾತಾವರಣದ ಆಮ್ಲೀಯತೆಯ ಹೆಚ್ಚಳಕ್ಕೆ ಇವುಗಳ ಕೊಡುಗೆ ಗಣನೀಯ. ಗಂಧಕದ ಡೈ ಆಕ್ಸೈಡ್ ಸಸ್ಯವರ್ಗಕ್ಕೆ ವಿಷಪ್ರಾಯ.
ಜತೆಗೆ ಇದು ಮಣ್ಣಿನಲ್ಲೂ ಸೇರಿ ಲವಣಾಂಶಗಳೊಂದಿಗೆ ರಾಸಾಯನಿಕ ಕ್ರಿಯೆಗೆ ತೊಡಗುತ್ತವೆ. ಸುತ್ತಲಿನ ಕೆರೆ, ಹಳ್ಳ, ಸರೋವರ, ನದಿಗಳೂ ಸೇರಿದಂತೆ ಇಡೀ ಪ್ರದೇಶದ ಅಂತರ್ಜಲ ಆಮ್ಲೀಕರಣಗೊಳ್ಳುತ್ತದೆ. ಯುರೋಪ್, ಉತ್ತರ ಅಮೆರಿಕ ದೇಶಗಳಲ್ಲಿ ಇಂಥ ಆಮ್ಲೀಕರಣದ ಪ್ರಭಾವ ಕಡಿಮೆ ಮಾಡಲು ವಾರ್ಷಿಕ 20 ಸಾವಿರ ದಶಲಕ್ಷ ಡಾಲರ್ಗಳಿಗಿಂತ ಹೆಚ್ಚು ವೆಚ್ಚ ಮಾಡಲಾಗುತ್ತಿದೆ ಎನ್ನುತ್ತದೆ ವರದಿ. ಈ ರೀತಿಯ ಸುಣ್ಣ ಸಂಸ್ಕಾರದ ಪರಿಣಾಮವೂ ಅಲ್ಲಿ ತಾತ್ಕಾಲಿಕ ಪರಿಹಾರವನ್ನು ಮಾತ್ರ ನೀಡುತ್ತಿದೆ. ಕಲ್ಲಿದ್ದಲು ಶಾಖೋತ್ಪನ್ನ ವಿದ್ಯುತ್ ಉತ್ಪಾದನೆ ನಮ್ಮ ನಭೋ ಮಂಡಲದಲ್ಲಿ ಮಾಡುತ್ತಿರುವ ದುಷ್ಪರಿಣಾಮದ ಅಗಾಧತೆಯ ಅರಿವು ಇದ್ದೇ ಇದೆ. ಮುಂದಿನ 50 ವರ್ಷಗಳಲ್ಲಿ ಭಾರತ ಉಪಖಂಡದಲ್ಲಿ ಇಂಥ ಸ್ಥಾವರಗಳು ಮಾಡಬಹುದಾದ ನಷ್ಟದ ಹಿನ್ನೆಲೆಯಲ್ಲೂ ನಮಗೆ ಇವು ಅನಿವಾರ್ಯವೇ ಉತ್ತರಿಸುವ ಮಂದಿಗಾಗಿ ಹುಡುಕಾಟ ನಡೆದಿದೆ. ಏಕೆಂದರೆ 2000ನೇ ಇಸವಿಯಲ್ಲಿ ಉಷ್ಣ ಸ್ಥಾವರಗಳಿಂದ 65 ಲಕ್ಷ ಟನ್ ಗಂಧಕದ ಡೈ ಆಕ್ಸೈಡ್ ಹಾಗೂ 140 ಲಕ್ಷ ಟನ್ ನೈಟ್ರೋಜನ್ ಆಕ್ಸೈಡ್ ವಾತಾವರಣ ಸೇರಿದೆ.
ಇನ್ನು ಅಣು ವಿದ್ಯುತ್ ಸ್ಥಾವರಗಳ ವಿಚಾರ ಬೇರೆಯದೇ ತೆರನಾದುದು. ಈ ಜಗತ್ತಿನಲ್ಲಿ ಅತ್ಯಂತ ಭೀಕರ ಅನಾಹುತ ಎಂಬುದು ಆಗಲು ಸಾಧ್ಯವಿದ್ದರೆ ಅದು ಪರಮಾಣುವಿನಿಂದ. ಹಾಗೆಯೇ ಅತ್ಯಂತ ಶಕ್ತಿಶಾಲಿ ಅಂತಿರುವುದೂ ಪರಮಾಣುವೇ. ಹಿಂದೆಂದೂ ಕಾಣದಷ್ಟು ವಿಕಿರಣದ ದುಷ್ಪರಿಣಾಮ ಇಂದು ಭೂಮಿಯ ಮೇಲಾಗುತ್ತಿದೆ. ಒಂದು ಪರಮಾಣು ಧಾತು ವಿಕಿರಣಗಳನ್ನು ಸೂಸುತ್ತ ತನ್ನ ಗಾತ್ರದ ಅರ್ಧದಷ್ಟಾಗಲು 24 ಸಾವಿರ ವರ್ಷಗಳು ಬೇಕು. ಹಾಗೆ ವಿಕಿರಣ ಸೂಸುತ್ತ ಸಂಪೂರ್ಣವಾಗಿ ನಾಶವಾಗಲು ಕನಿಷ್ಠವೆಂದರೂ 4 ಲಕ್ಷ ವರ್ಷಗಳ ಅವಧಿ ಬೇಕು. ಅಲ್ಲಿಯವರೆಗೂ ಆ ಧಾತುವಿನ ವಿಕಿರಣದ ಪ್ರಭಾವ ಪರಿಸರದ ಮೇಲಾಗದಂತೆ ತಡೆಯುವುದು ದುಸ್ಸಾಹಸವೇ ಸರಿ. ಅಂದರೆ ಎಷ್ಟೇ ಬಿಗಿ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆಂದು ಸರಕಾರ, ಕಂಪನಿಗಳು ಹೇಳಿದರೂ ಸಂಪೂರ್ಣ ಪರಮಾಣು ಕೇಂದ್ರಿತ ಕೈಗಾರಿಕೆಗಳ ಸುತ್ತಮುತ್ತಲ ವಾತಾವರಣದಲ್ಲಿ ದುಷ್ಪರಿಣಾಮವನ್ನು ಸಂಪೂರ್ಣ ತಡೆಗಟ್ಟಲು ಸಾಧ್ಯವೇ ಇಲ್ಲ. ನಾಲ್ಕು ಲಕ್ಷ ವರ್ಷಗಳವರೆಗೆ ಜೀವಂತವಾಗಿರುವ ಅಣುವಿಕಿರಣದ ಜತೆ ಚೆಲ್ಲಾಟಕ್ಕೆ ಹೊರಟಿರುವುದಕ್ಕೆ ಏನರ್ಥ? ಆಣು ಸ್ಥಾವರಗಳಿಂದ ಹೊರ ಸೂಸುವುದು ಯುರೇನಿಯಂ ವಿಷ. ಒಂದೊಮ್ಮೆ ಇದನ್ನು ಭೂಮಿಯಲ್ಲಿ ಹೂತಿಡುತ್ತೇವೆಂದರೂ ಅಷ್ಟು ದೀರ್ಘ ಅವಧಿಯವರೆಗೆ ಅದನ್ನು ಬಚ್ಚಿಡಲು ಸಾಧ್ಯವೇ? ಅದು ಅಲ್ಲೇ ಸ್ಫೋಟಿಸುವ, ಸೋರಿಕೆಯಾಗುವ ಸಾಧ್ಯತೆ ಇಲ್ಲವೆಂಬ ಖಚಿತತೆ ಏನು?
ನಮ್ಮ ಭೂಪಾಲ್ ಅನಿಲ ಸ್ಥಾವರ ದುರಂತವನ್ನೊಮ್ಮೆ ನೆನಪಿಸಿಕೊಳ್ಳಿ. ಉಕ್ರೇನಿನ ಚೆರ್ನಾಬಿಲ್ ಅನ್ನು ಕಣ್ಮುಂದೆ ತಂದುಕೊಳ್ಳಿ. ಅಲ್ಲಿ ಅತ್ಯಾಧುನಿಕ ಉಪಕರಣಗಳ ಮೂಲಕ ವಿಷ ಸೂಸುವ ಸ್ಥಾವರದ ಮೇಲೊಂದು ಬೃಹತ್ಗೋಪುರ ನಿರ್ಮಿಸಿ, ಅಪಾಯವನ್ನು ತಡೆಯುವ 700 ಕೋಟಿ ರುಪಾಯಿಗೂ ಮೀರಿದ ಯೋಜನೆಯ ದುಸ್ಸಾಹಸ ಮಾಡಲಾಗುತ್ತಿದೆ. ಮತ್ತದೇ ಬೂದಿಮುಚ್ಚಿದ ಕೆಂಡ ಅದು. ಭೋಪಾಲ್ನಲ್ಲಿ ಅನಿಲ ಸೋರಿಕೆ ದುರಂತದ ಇಪ್ಪತ್ತು ವರ್ಷಗಳ ಬಳಿಕವೂ ಇಂದಿಗೂ ದುಷ್ಪರಿಣಾಮವನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ. 1984ರಲ್ಲಿ ಸಂಭವಿಸಿದ ಸ್ಫೋಟದಲ್ಲಿ ಏನಿಲ್ಲವೆಂದರೂ ಮೂರೂವರೆ ಸಾವಿರ ಮಂದಿ ನೋಡನೋಡುತ್ತಿದ್ದಂತೆಯೇ ಪ್ರಾಣ ತೆತ್ತರು. ಇನ್ನು ಜಾನುವಾರುಗಳು, ಪಶುಪಕ್ಷಿಗಳು, ಸಸ್ಯ ಸಂಕುಲದ ನಷ್ಟಕ್ಕೆ ಅಂದಾಜು ಇಟ್ಟವರಾರು? ಅಲ್ಲಿಂದ ಇಲ್ಲಿಯವರೆಗೆ ಅದರ ಪರಿಣಾಮಕ್ಕೆ ಬಲಿಯಾದವರು ನಲವತ್ತು ಸಾವಿರ ಮೀರುತ್ತದೆ. ಇನ್ನೂ ಸಾವಿನ ನಾಗಾಲೋಟ ನಿಂತಿಲ್ಲ. ದುರಂತಕ್ಕೆ ಕಾರಣವಾದವರು ಶಿಕ್ಷೆಯಿಂದ ತಪ್ಪಿಸಿಕೊಂಡಿದ್ದರೂ ಮುಗ್ಧ ಜನರಿಗೆ ಶಿಕ್ಷೆ ನಿಂತಿಲ್ಲ. ಆಗಿನ ಕಂಪನಿ 'ಯೂನಿಯನ್ ಕಾರ್ಬೈಡ್' ಮುಖವಾಡ ಬದಲಿಸಿಕೊಂಡು ಡೌ ಕೆಮಿಕಲ್ಗೆ ತನ್ನನ್ನೇ ಮಾರಿಕೊಂಡು ಪಲಾಯನ ಮಾಡಿದೆ. ಅಲ್ಲಿ ಇಂದಿಗೂ ಕಂಪನಿ ತನ್ನ ವಿಷವನ್ನು ಬೃಹತ್ ಗೋದಾಮುಗಳಲ್ಲಿ ದಾಸ್ತಾನು ಮಾಡುತ್ತಿದೆ. ಅದಿನ್ಯಾವ ಅವಘಡಕ್ಕಾಗಿ ಕಾದಿದೆಯೋ ಸಾವಿರಾರು ಟನ್ಗಟ್ಟಲೆ ಇರುವ ಇಂಥ ವಿಷವನ್ನು ದೂರಕ್ಕೆ ಕೊಂಡಯ್ದು ಸಂಸ್ಕರಿಸುವ, ಇನ್ನೆಲ್ಲೋ ಗುಡ್ಡದ ಮೇಲೆ ಹೂತಿಟ್ಟು ಬರುವ ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆ. ಹೀಗೆ ಸಂಸ್ಕರಿಸುವ, ಹೂಳುವ ವಿಷ ಮೇಲ್ನೋಟಕ್ಕೆ ಶಮನವಾದಂತೆ ಕಾಣಬಹುದು. ಆದರೆ ಅದು ನಮ್ಮ ಜಲ ಸಂಪತ್ತನ್ನೇ ಕುಲಗೆಡಿಸದೇ ಇದ್ದೀತೆ?
ಇಂಥವೆಲ್ಲ ಅಭಿವೃದ್ಧಿ ಓಘಕ್ಕೆ ಬಿದ್ದಿರುವ ನಮಗೆ ಅರ್ಥವಾಗುವುದಿಲ್ಲವೇಕೆ? ದೇಶವನ್ನು ಬೆಳಗಿಸುವ ಭರದಲ್ಲಿ ಹಳ್ಳಿಯ, ಮುಗ್ಧ, ಬಡಜನರ ಜೀವನವನ್ನು ಕಾರ್ಗತ್ತಲೆಗೆ ತಳ್ಳುವ ಹುನ್ನಾರಕ್ಕೆ ಕೊನೆಯಾದರೂ ಎಂದು? ಸಾವಿನ ಸವಾರಿಗೆ ರೈತರನ್ನು ಗುತ್ತಿಗೆ ಕೊಟ್ಟಾದ ಮೇಲೆ, ಜಲವೆಲ್ಲ ವಿಷವಾಗಿ ಬರಡು ಬೀಳುವ ನೆಲದ ಮೇಲೆ ಕಂಗೊಳಿಸುವ ವಿದ್ಯುತ್ ಸ್ಥಾವರಗಳು ಉತ್ಪಾದಿಸುವ ಬೆಳಕಿನಡಿ ದೇಶದ ಬದುಕು ಬೆಳಗುವುದೇ? ಅಭಿವೃದ್ಧಿಯ ಸಾರ್ಥಕ್ಯ ವ್ಯವಸ್ಥೆಯ ವ್ಯಂಗ್ಯವೆಂದರೆ ಇದೇ ಏನು?
21ರಂದು ಪ್ರತಿಭಟನೆ
ಬಸವನಬಾಗೇವಾಡಿ ತಾಲೂಕಿನಲ್ಲಿ ಜು.21ರಂದು ನರಗುಂದ ಬಂಡಾಯದಿನ ಆಚರಿಸಲು ನಿರ್ಧರಿಸಲಾಗಿದೆ. ಅಂದು 25 ಸಾವಿರಕ್ಕೂ ಹೆಚ್ಚು ರೈತರು ಭಾಗವಹಿಸುವ ಮೂಲಕ ಗೋಲಿಬಾರ್ ಘಟನೆಯನ್ನು ವಿರೋಧಿಸಿ ಸಾಂಕೇತಿಕ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಸಂಘ ತಿಳಿಸಿದೆ.
ಕೂಡಗಿ ಉಷ್ಣ ವಿದ್ಯುತ್ ಸ್ಥಾವರ ನಿರ್ಮಾಣ ಕಾರ್ಯ ಯಾವುದೇ ಕಾರಣಕ್ಕೂ ಸ್ಥಗಿತಗೊಳ್ಳದು. ಶನಿವಾರದ ಪ್ರತಿಭಟನೆಗೆ ಅನುಮತಿ ಪಡೆದಿರಲಿಲ್ಲ. ಪ್ರತಿಭಟನಾಕಾರರು ಕಾನೂನು ಕೈಗೆ ತೆಗೆದುಕೊಂಡಿದ್ದರಿಂದ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಗುಂಡು ಹಾರಿಸಬೇಕಾಯಿತು.
- ಎಂ.ಬಿ. ಪಾಟೀಲ, ಬಿಜಾಪುರ ಜಿಲ್ಲಾ ಉಸ್ತುವಾರಿ ಸಚಿವ
ಕೂಡಗಿ ಹಿಂಸಾಚಾರಕ್ಕೆ ಪೊಲೀಸರ ಬೇಜವಬ್ದಾರಿಯೇ ಕಾರಣ. ಪೊಲೀಸರು ಮಹಿಳೆಯರ ಮೇಲೆ ಕೈಮಾಡಿದ ಹಿನ್ನೆಲೆಯಲ್ಲಿ ರೈತರು ಆಕ್ರೋಶಗೊಂಡು ಹಿಂಸಾಚಾರಕ್ಕಿಳಿದರು. ಶನಿವಾರದ ಘಟನೆಗೆ ಬಸವನಬಾಗೇವಾಡಿ ಪಿಎಸ್ಐ ಎಂ.ಎನ್. ಸಿಂಧೂರ ಕುಮ್ಮುಕ್ಕೇ ಕಾರಣ.
-ಚಾಮರಸ ಮಾಲಿ ಪಾಟೀಲ, ರಾಜ್ಯ ರೈತ ಸಂಘದ ಅಧ್ಯಕ್ಷ
ರಾಧಾಕೃಷ್ಣ ಭಡ್ತಿ