ಕೂಡಗಿ ಗೋಲಿಬಾರ್ ಅನಿರೀಕ್ಷಿತ: ಸಿಎಂ
ಕೂಡಗಿ ಉಷ್ಣ ವಿದ್ಯುತ್ ಸ್ಥಾವರ ವಿರೋಧಿ ಹೋರಾಟ ವೇಳೆ ನಡೆದ ಗೋಲಿಬಾರ್ ಒಂದು ಅನಿರೀಕ್ಷಿತ ಘಟನೆ...
ಬೆಳಗಾವಿ: ಕೂಡಗಿ ಉಷ್ಣ ವಿದ್ಯುತ್ ಸ್ಥಾವರ ವಿರೋಧಿ ಹೋರಾಟ ವೇಳೆ ನಡೆದ ಗೋಲಿಬಾರ್ ಒಂದು ಅನಿರೀಕ್ಷಿತ ಘಟನೆ. ಈ ಕುರಿತು ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕೆಎಲ್ಇ ಆಸ್ಪತ್ರೆಗೆ ಭಾನುವಾರ ಭೇಟಿ ನೀಡಿ ಗೋಲಿಬಾರ್ನಲ್ಲಿ ಗಾಯಗೊಂಡ ರೈತರಿಬ್ಬರ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಚಂದ್ರಪ್ಪ ಶೇಡಿ ಹಾಗೂ ಸದಾಶಿವ ಮಲ್ಲಪ್ಪ ಗಣಾಚಾರಿ ಅವರಿಗೆ ಶಸ್ತ್ರ ಚಿಕಿತ್ಸೆ ನಡೆಸಿ ಗುಂಡುಗಳನ್ನ್ನು ಹೊರತೆಗೆಯಲಾಗಿದೆ. ರೈತರಿಬ್ಬರೂ ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಉತ್ತಮ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚನೆ ನೀಡಲಾಗಿದೆ. ಈ ಕುರಿತು ಕೆಎಲ್ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರ ಜೊತೆಗೂ ಚರ್ಚೆ ನಡೆಸಿರುವುದಾಗಿ ಸಿಎಂ ಮಾಹಿತಿ ನೀಡಿದರು. ಗೃಹ ಸಚಿವ ಕೆ.ಜೆ. ಜಾರ್ಜ್, ಕಾನೂನು ಸಚಿವ ಟಿ.ಬಿ. ಜಯಚಂದ್ರ, ಪೊಲೀಸ್ ಅಧಿಕಾರಿಗಳು ಇದ್ದರು.
ವರದಿ ಆಧರಿಸಿ ಕ್ರಮ: ಗೋಲಿಬಾರ್ ಪ್ರಕರಣದ ತನಿಖೆ ನಡೆಸಿ ಕೂಡಲೇ ಸಮಗ್ರ ವರದಿ ನೀಡುವಂತೆ ಬಿಜಾಪುರ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ. ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಹೇಳಿದರು.