ಕೃಷಿಗೆ ಕಂಟಕ ಈ ವಿದ್ಯುತ್ ಸ್ಥಾವರ
ಹಿರಿಯೂರು: ಹುಟ್ಟುವಾಗಲೇ ಜನರ ವಿರೋಧ ಕಟ್ಟಿಕೊಂಡು ಉರುವಲು ಯಜ್ಞಕ್ಕೆ ಹತ್ತಾರು ಅಮಾಯಕರ ಬಲಿ ಪಡೆದು, ತಾಲೂಕಿನ ಹಲವು ಹಳ್ಳಿಗಳ ಕೃಷಿ ಬದುಕಿಗೆ ಕಂಟಕ ಪ್ರಾಯವಾಗಿರುವ ಕುಖ್ಯಾತ ಆರ್.ಕೆ. ಪವರ್ ಜೆನ್ ಉರುವಲು ವಿದ್ಯುತ್ ಸ್ಥಾವರ ತಾಲೂಕಿನಲ್ಲಿ ನೆಲೆಯೂರಿ ಹನ್ನೆರಡು ವರ್ಷಗಳೇ ಆಗಿವೆ. ತಮಿಳುನಾಡು ಮೂಲದ ಉದ್ಯಮಿಯೊಬ್ಬ ಸ್ಥಾಪಿಸಿದ ಈ ಉರುವಲು ಸ್ಥಾವರದ ಸುತ್ತ ಸುತ್ತಿಕೊಂಡಿರುವ ವಿವಾದಗಳಿಗೆ ಕೊನೆ ಮೊದಲೆಂಬುದಿಲ್ಲ. ವಾಣಿಜ್ಯ ದರದಲ್ಲಿ ವಿದ್ಯುತ್ಅನ್ನು ಬಿಕರಿಗಿಡುವ ಈ ಶಾಖೋತ್ಪನ್ನ ವಿದ್ಯುತ್ ಸ್ಥಾವರಕ್ಕೆ ಸುತ್ತಮುತ್ತಲ ತಾಲೂಕು, ಜಿಲ್ಲೆಗಳಲ್ಲಿನ ನೈಸರ್ಗಿಕ ಕಾಡು ಹಾಗೂ ನೀಲಗಿರಿ ಪ್ಲಾಂಟೇನಶನ್ಗಳು ನೋಡ ನೋಡುತ್ತಲೇ ಬಲಿಯಾಗಿ, ಬೆಂಗಾಡು ಸದೃಶ ವಾತವರಣ ಸೃಷ್ಟಿಯಾಗಿವೆ ಎನ್ನುವುದು ಸಾರ್ವಜನಿಕ ಆರೋಪ. ಇನ್ನು ಈ ಉರುವಲು ಸ್ಥಾವರ ಉಗುಳುವ ಹಾರುಬೂದಿ ಸುತ್ತ ಹತ್ತಾರು ಕಿ.ಮೀ. ದೂರದವರೆಗೂ ಕೃಷಿ ಭೂಮಿಯನ್ನು ಆವರಿಸಿಕೊಳ್ಳುವುದರಿಂದ ಬೆಳೆಗಳು ರೋಗಗ್ರಸ್ತವಾಗಿ ಇಳುವರಿ ಬಿದ್ದುಹೋಗುತ್ತಿರುವ ಬಗ್ಗೆ ಖುದ್ದು ರೈತರೇ ಹತ್ತಾರು ಪ್ರತಿಭಟನೆ ನಡೆಸಿದ್ದಾರೆ.