ಕೈಗಾ ಹೋರಾಟಕ್ಕೆ ಕಿಮ್ಮತ್ತಿಲ್ಲ, ಹಣಕೋಣ,ತದಡಿ ಮಂದಿ ಮಾತ್ರ ಮಣಿಯಲಿಲ್ಲ
ಕಾರವಾರ: ರಾಜ್ಯದ ಏಕೈಕ ಅಣು ವಿದ್ಯುತ್ ಸ್ಥಾವರ ಕಾರವಾರ ಸಮೀಪದ ಕೈಗಾದಲ್ಲಿ ತಲೆ ಎತ್ತುವ ಮುನ್ನ ಶುರುವಾದ ಹೋರಾಟ ಸ್ಥಾವರ ಆರಂಭವಾಗಿ 14 ವರ್ಷಗಳು ಕಳೆದರೂ ನಿಂತಿಲ್ಲ. ವಿದ್ಯುತ್ ಉತ್ಪಾದನೆಯಂತೆ ಹೋರಾಟವೂ ನಿರಂತರವಾಗಿದೆ. ಕೈಗಾದಲ್ಲಿ ತಲಾ 220 ಮೆ.ವ್ಯಾ.ಗಳ ನಾಲ್ಕು ಅಣು ವಿದ್ಯುತ್ ಘಟಕಗಳಿವೆ. ಈಗ ತಲಾ 700 ಮೆ.ವ್ಯಾ.ಗಳ ಎರಡು ಘಟಕಗಳಿಗೆ ಕೇಂದ್ರ ಸಚಿವ ಸಂಪುಟ ಅನುಮತಿ ನೀಡಿದೆ. ಅಣು ವಿದ್ಯುತ್ ಸ್ಥಾವರ ಆರಂಭಕ್ಕೂ ಮುನ್ನ ಅಂದರೆ 1997ರಿಂದ 2000 ತನಕ ಭಾರಿ ಹೋರಾಟ ನಡೆಯಿತು. ಖ್ಯಾತ ಸಾಹಿತಿ ದಿ. ಶಿವರಾಮ ಕಾರಂತ, ಸುರೇಶ ಹೆಬ್ಳೀಕರ, ಅನಂತ ಹೆಗಡೆ ಅಶೀಸರ ಮತ್ತಿತರರ ನೇತೃತ್ವದಲ್ಲಿ ಅಣು ವಿದ್ಯುತ್ ಯೋಜನೆ ವಿರುದ್ಧ ಹೋರಾಟ ನಿರಂತರವಾಗಿ ನಡೆಯಿತು. ಕೈಗಾದ ಗುಮ್ಮಟ ಸ್ಥಾಪಿಸುವ ಸ್ಥಳದಲ್ಲೇ ಸಸಿ ನೆಟ್ಟು ಪ್ರತಿಭಟಿಸಲಾಯಿತು. ಇಷ್ಟಾದರೂ 2000ರಲ್ಲಿ ಕೈಗಾ ಘಟಕ ವಿದ್ಯುತ್ ಉತ್ಪಾದನೆ ಆರಂಭಿಸಿತು. ಹೋರಾಟವೂ ಮುಂದುವರಿಯಿತು. ಕೈಗಾ ಅಣು ವಿದ್ಯುತ್ ಘಟಕದಿಂದ ಹೊರಸೂಸುವ ವಿಕಿರಣದಿಂದ ಕ್ಯಾನ್ಸರ್ ಮತ್ತಿತರ ಕಾಯಿಲೆಗಳು ವ್ಯಾಪಿಸುತ್ತಿವೆ ಎಂಬ ಕೂಗು ಕೇಳಿ ಬಂತು. ಪ್ರತಿಭಟನೆಗಳೂ ನಡೆದವು. ಇದರ ಮಧ್ಯೆಯೇ ಯೋಜನೆಯಲ್ಲಿ ಉದ್ಯೋಗ ಕಲ್ಪಿಸುವಂತೆ ಆಗ್ರಹಿಸಿ ಹೋರಾಟ ಮುಂದುವರಿದಿದೆ.
ತದಡಿ ಉಷ್ಣ ವಿದ್ಯುತ್ ಸ್ಥಾವರ
ತದಡಿಯಲ್ಲಿ 2006ರಲ್ಲಿ ಉಷ್ಣ ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ಸರ್ಕಾರ ಮುಂದಾದಾಗ ಉಗ್ರ ಪ್ರತಿಭಟನೆ ನಡೆಯಿತು. ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ, ಸ್ವರ್ಣವಲ್ಲಿಯ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಹಾಗೂ ಪೇಜಾವರ ಶ್ರೀಗಳ ನೇತೃತ್ವದಲ್ಲಿ ನಡೆದ ಬೃಹತ್ ಹೋರಾಟದಿಂದ ಉದ್ದೇಶಿತ ಸ್ಥಾವರವನ್ನು ಬಿಜಾಪುರದ ಕೂಡಗಿಗೆ ಸ್ಥಳಾಂತರಿಸಲಾಯಿತು.
ಹಣಕೋಣ ಸ್ಥಾವರ
ಕಾರವಾರ ಸಮೀಪದ ಹಣಕೋಣದಲ್ಲಿ 4 ವರ್ಷಗಳ ಹಿಂದೆ ಉಷ್ಣ ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ಖಾಸಗಿ ಕಂಪನಿಗೆ ಸರ್ಕಾರ ಅನುಮತಿ ನೀಡಿದಾಗ ಗ್ರಾಮಸ್ಥರು ತೀವ್ರ ಪ್ರತಿರೋಧ ಒಡ್ಡಿದರು. ಹೋರಾಟಕ್ಕಿಳಿದ ಮಹಿಳೆಯರು, ಮಕ್ಕಳ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಮಹಿಳೆಯರನ್ನು ಹಿಂಡಲಗಾ ಜೈಲಿಗೆ ಕಳುಹಿಸಲಾಯಿತು. ಆದರೂ ಪಟ್ಟು ಬಿಡದೆ ಹೋರಾಟ ನಡೆಸಿದ್ದರಿಂದ 'ಇಂದ್ ಭಾರತ್ ಕಂಪನಿ' ಉದ್ದೇಶಿತ ಉಷ್ಣ ವಿದ್ಯುತ್ ಸ್ಥಾವರ ಯೋಜನೆಯನ್ನು ಕೈಬಿಟ್ಟಿತು.