ಕ್ವಿಂಟಾಲ್ ಅಡಕೆ ಲಕ್ಷ ಮುಟ್ಟುವ ಸಾಧ್ಯತೆ
ಅಡಕೆ ಬೆಲೆ ಈಗ ಚಿನ್ನಕ್ಕಿಂತ ದುಬಾರಿ. ಭಾನುವಾರ ತೀರ್ಥಹಳ್ಳಿಯ ಸಹ್ಯಾದ್ರಿ ಅಡಕೆ ಮಾರಾಟ ಸಹಕಾರ ಸಂಘದಲ್ಲಿ ...
ಶಿವಮೊಗ್ಗ: ಅಡಕೆ ಬೆಲೆ ಈಗ ಚಿನ್ನಕ್ಕಿಂತ ದುಬಾರಿ. ಭಾನುವಾರ ತೀರ್ಥಹಳ್ಳಿಯ ಸಹ್ಯಾದ್ರಿ ಅಡಕೆ ಮಾರಾಟ ಸಹಕಾರ ಸಂಘದಲ್ಲಿ ಕ್ವಿಂಟಾಲ್ ಅಡಕೆಗೆ ರು. 80 ಸಾವಿರ ಖರೀದಿಯಾಗಿದೆ. ಈ ಮೂಲಕ ಅಡಕೆ ವಹಿವಾಟಿನ ಮೇಲೆ ಅನುಮಾನ ಕಾಡಲಾರಂಭಿಸಿದೆ.
ಇಷ್ಟು ದಿನಗಳವರೆಗೆ ಅಡಕೆ ಬೆಲೆ ಏರಿಕೆಯನ್ನು ಧನಾತ್ಮಕವಾಗಿ ವಿವಿಧ ರೀತಿಯಲ್ಲಿ ವಿಶ್ಲೇಷಿಸಲಾಗುತ್ತಿತ್ತು. ಆದರೆ, ಇದೀಗ ಅಡಕೆ ಬೆಲೆ ಏರಿಕೆಯನ್ನು ಅನುಮಾನದಲ್ಲಿ ನೋಡುವ ಸ್ಥಿತಿ ಉಂಟಾಗಿದೆ. ಅಡಕೆ ಮಾರಾಟಗಾರರ ವಿಶ್ಲೇಷಣೆಯನ್ನು ಗಮನಿಸುವುದಾದರೆ, ಯಾವುದೋ ಒಂದು ಹಿತಾಸಕ್ತಿ ಬೆಲೆ ಏರಿಕೆ ಹಿಂದೆ ಕೆಲಸ ಮಾಡುತ್ತಿದೆ. ಈ ಬೆಳವಣಿಗೆ ಸರಿಯಲ್ಲ.
ಕಳೆದ ಬಾರಿ ಅಡಕೆಗೆ ಕೊಳೆ ರೋಗ ತಗುಲಿದ್ದರಿಂದ ಶೇ.45ಕ್ಕಿಂತ ಹೆಚ್ಚು ಇಳುವರಿ ಕಡಿಮೆಯಾಗಿತ್ತು. ಈ ನಡುವೆಯೇ ಗುಟ್ಕಾ, ಪಾನ್ ತಯಾರಿಕಾ ಕಂಪನಿಗಳ ಸಂಖ್ಯೆ ಹೆಚ್ಚಾಗಿದ್ದು, ಗುಟ್ಕಾ ಬೇಡಿಕೆ ಸಹ ಗಮನೀಯವಾಗಿ ಹೆಚ್ಚಳವಾಗಿದೆ. ಹೀಗಾಗಿ ಅಡಕೆಗೆ ಹೆಚ್ಚಿನ ಬೇಡಿಕೆ ಎಂದು ಹೇಳಲಾಗುತ್ತಿದೆಯಾದರೂ ಈ ಮಾತು ಸಂಪೂರ್ಣ ಸತ್ಯವಲ್ಲ ಎಂದು ಅಡಕೆ ವರ್ತಕರೇ ಅಭಿಪ್ರಾಯಪಡುತ್ತಾರೆ.