ಪ್ರತಿಭಟನೆ ಮೌನ, ವಿದ್ಯುತ್ ಕಡಿತ ಸಮಸ್ಯೆಗಳು ನಿರಂತರ
ರಾಯಚೂರು: ರಾಜ್ಯದ ಶೇ.40ರಷ್ಟು ವಿದ್ಯುತ್ ಬೇಡಿಕೆಯನ್ನು ಶಕ್ತಿನಗರದ ಆರ್ಟಿಪಿಎಸ್ನ 8 ಥರ್ಮಲ್ ಘಟಕಗಳು ಈಡೇರಿಸುತ್ತವೆ. 1,720 ಮೆ.ವ್ಯಾ. ಸಾಮರ್ಥ್ಯದ ಈ ಘಟಕಗಳು ಇವು. ಇಷ್ಟಾದರೂ ವಿದ್ಯುತ್ ಉತ್ಪಾದಿಸುವ ಜಿಲ್ಲೆಯಲ್ಲೇ ವಿದ್ಯುತ್ ಕಡಿತ ವರ್ಷವಿಡೀ ನಿರಂತರ!
ಶಕ್ತಿನಗರದ 7 ಘಟಕಗಳು ತಲಾ 210 ಮೆ.ವ್ಯಾ. ಹಾಗೂ 8ನೇ ಘಟಕ 250 ಮೆ.ವ್ಯಾ. ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿವೆ. ಪ್ರತಿ ದಿನ ಒಂದು ಸಾವಿರದಿಂದ 1,200 ಮೆ.ವ್ಯಾ. ವಿದ್ಯುತ್ ಉತ್ಪಾದಿಸಲಾಗುತ್ತದೆ. ಇದಕ್ಕೆ 24 ಸಾವಿರ ಮೆಟ್ರಿಕ್ ಟನ್ಗೂ ಹೆಚ್ಚು ಕಲ್ಲಿದ್ದಲು ಸುಡಲಾಗುತ್ತಿದೆ. ಪರಿಣಾಮ ವಾರ್ಷಿಕ 1.5ಮಿಲಿಯನ್ ಟನ್ ಹಾರುಬೂದಿ ಉತ್ಪಾದನೆಯಾಗುತ್ತದೆ. ಹಾರು ಬೂದಿ ಬಳಕೆ ಶೇ.60 ರಷ್ಟಿದೆ. ಉಳಿದದ್ದನ್ನು ಘಟಕವೇ ನಿರ್ಮಿಸಿದ ಕೆರೆಗಳಿಗೆ ಹರಿಬಿಡಲಾಗುತ್ತಿದೆ. ಈ 8 ಘಟಕಗಳ ನಿರ್ಮಾಣಕ್ಕೆ ಸ್ಥಳೀಯರಿಂದ ಯಾವುದೇ ಪ್ರತಿರೋಧ ಬಾರದಿದ್ದದ್ದು ವಿಶೇಷ.
ಪರಿಸರ ಕಾಳಜಿಯಿಲ್ಲ
ಆರ್ಟಿಪಿಎಸ್ನಿಂದ ಪರಿಸರಕ್ಕೆ ಧಕ್ಕೆಯಾಗುತ್ತಿದೆ ಎಂಬ ಪರಿಸರವಾದಿಗಳ ಕೂಗಿಗೆ ಕೆಪಿಸಿ ಸ್ಪಂದನೆ ಅಷ್ಟಕ್ಕಷ್ಟೆ. ಸಾವಿರಾರು ಸಸಿ ನೆಡುತ್ತಿರುವುದಾಗಿ ಹೇಳಲಾಗುತ್ತಿದೆ. ವಾಸ್ತವದಲ್ಲಿ ಪರಿಸರ ಕಾಳಿಜಿಯೇ ಇಲ್ಲ. ಹಾರುಬೂದಿ ನಿರ್ವಹಣೆಗೆ ಕೆಪಿಸಿ ಹೆಣಗುತ್ತಿದೆ. ತಮಾಷೆಯೆಂದರೆ ರಾಜ್ಯಕ್ಕೆ ಬೆಳಕು ನೀಡುವ ಶಕ್ತಿಕೇಂದ್ರವಿರುವ ಜಿಲ್ಲೆಯಲ್ಲೇ ದಿನಕ್ಕೆ ನಾಲ್ಕೈದು ತಾಸು ವಿದ್ಯುತ್ ಕಡಿತ ಮಾಡಲಾಗುತ್ತದೆ.
ಪರಿಣಾಮ ಏನು?
ಆರ್ಟಿಪಿಎಸ್ ಘಟಕಗಳಿಂದಾಗಿ ಜಿಲ್ಲೆಯಲ್ಲಿ ತಾಪಮಾನ ಗಣನೀಯ ಏರಿಕೆಯಾಗಿದೆ. ಘಟಕಗಳು ಹೊರಚೆಲ್ಲುವ ಹಾರುಬೂದಿಯಿಂದ ಉಸಿರಾಟದ ತೊಂದರೆ, ಮತ್ತಿತರೆ ಆರೋಗ್ಯ ಸಂಬಂಧಿ ಸಮಸ್ಯೆಗಳಾಗುತ್ತಿವೆ. ಬೆಳೆ ಹಾನಿಯಾಗುತ್ತಿದೆ ಎಂಬ ಕೂಗೆದ್ದಿತ್ತು. ಸರ್ಕಾರ ಕೃಷಿ ವಿವಿಗೆ ಬೆಳೆ ಹಾನಿ ಬಗ್ಗೆ ವರದಿ ನೀಡಲು ಸೂಚಿಸಿತು. ವರದಿ ಗತಿಯೇನಾಯಿತು ಎಂಬುದು ಇಂದಿಗೂ ಗೌಪ್ಯ.
ಉದ್ದೇಶಿತ ಯೋಜನೆ
ಯರಮರಸ್ ಬಳಿ ಯರಮರಸ್ ಸೂಪರ್ ಕ್ರಿಟಿಕಲ್ ಥರ್ಮಲ್ ವಿದ್ಯುತ್ ಕೇಂದ್ರ ಸ್ಥಾಪಿಸಲಾಗುತ್ತಿದೆ. ತಲಾ 800 ಮೆ.ವ್ಯಾ.ನ 2 ಘಟಕ ನಿರ್ಮಾಣವಾಗುತ್ತಿವೆ.
ಯದ್ಲಾಪುರ
ಯದ್ಲಾಪುರದಲ್ಲೂ 800 ಮೆ.ವ್ಯಾ.ನ ಒಂದು ಘಟಕ ಸ್ಥಾಪನೆಗೆ ಸರ್ಕಾರ ಮುಂದಾಗಿದೆ. ಆದರೆ, ಕೇಂದ್ರ ಪರಿಸರ ಸಚಿವಾಲಯದಿಂದ ಸಮ್ಮತಿ ದೊರೆತಿಲ್ಲ, ಕಲ್ಲಿದ್ದಲು ಹಂಚಿಕೆಯೂ ಆಗಿಲ್ಲ. ಹಾಗಾಗಿ ನಿರ್ಮಾಣ ಕಾರ್ಯ ಆರಂಭಗೊಂಡಿಲ್ಲ.