ಈರುಳ್ಳಿ ಬೀಜಕ್ಕೂ ತಟ್ಟಿತು ದರದ ಬಿಸಿ
ಮಾರುಕಟ್ಟೆಯಲ್ಲಿ ಗ್ರಾಹಕ ಈಗ ಈರುಳ್ಳಿಗೆ ಕಣ್ಣೀರು ಹಾಕುವಂತಾಗಿದ್ದರೆ, ಈರುಳ್ಳಿ ಬೀಜಕ್ಕಾಗಿ ರೈತರು ರಕ್ತಕಣ್ಣೀರು ಸುರಿಸುವಂತೆ...
ಕೊಪ್ಪಳ: ಮಾರುಕಟ್ಟೆಯಲ್ಲಿ ಗ್ರಾಹಕ ಈಗ ಈರುಳ್ಳಿಗೆ ಕಣ್ಣೀರು ಹಾಕುವಂತಾಗಿದ್ದರೆ, ಈರುಳ್ಳಿ ಬೀಜಕ್ಕಾಗಿ ರೈತರು ರಕ್ತಕಣ್ಣೀರು ಸುರಿಸುವಂತೆ ಆಗಿದೆ!
ದುಬಾರಿ ಬೆಲೆಗೆ ಈರುಳ್ಳಿ ಬೀಜ ಮಾರಾಟವಾಗುತ್ತಿದ್ದರೂ ಸಿಗುವ ಬೀಜ ಮೊಳಕೆಯೊಡೆಯುತ್ತದೆ ಎನ್ನುವ ವಿಶ್ವಾಸ ಇಲ್ಲ. ಹೀಗಾಗಿ ರೈತರು ಈರುಳ್ಳಿ ಬೀಜಕ್ಕಾಗಿ ಪರದಾಡುವಂತಾಗಿದೆ. ದೇಶದಲ್ಲಿ ಈ ಬಾರಿ ಈರುಳ್ಳಿ ಅಭಾವವಾಗುವ ಸಾಧ್ಯತೆ ಹೆಚ್ಚಾಗಿದೆ. ಭಾರಿ ಬೇಡಿಕೆ ಬರುತ್ತದೆಂದು ಈರುಳ್ಳಿ ಬೆಳೆಯುವರ ಸಂಖ್ಯೆ ಹೆಚ್ಚಾಗುತ್ತಿದೆ. ವ್ಯಾಪಾರಸ್ಥರು ಬಾಯಿಗೆ ಬಂದ ದರದಲ್ಲಿ ಈರುಳ್ಳಿ ಬೀಜ ಮಾರುತ್ತಿದ್ದಾರೆ. ಅದರಲ್ಲೂ ಮುಕ್ಕಾಲು ಪಾಲು ಕಳಪೆ ಬೀಜ ಇರುತ್ತದೆ.
ಹುಟ್ಟೋದು ಗ್ಯಾರಂಟಿ ಇಲ್ಲ: ಕೆಜಿ ಈರುಳ್ಳಿ ಬೀಜದ ಗರಿಷ್ಠ ದರ ಈಗ 3200. ಇದು ದಾಖಲಾದ ಗರಿಷ್ಠ ದರ. ರು. 1300-3200ವರೆಗೆ ಮಾರಲಾಗುತ್ತಿದೆ. ಈ ಬೀಜವೂ ಸರಿಯಾಗಿ ಫಲ ನೀಡುವ ವಿಶ್ವಾಸವಿಲ್ಲ. ಬೇಕಾದರೆ ಒಯ್ಯಿರಿ, ಇಲ್ಲಾಂದ್ರೆ ಬಿಡಿ. ಕೊಟ್ಟಿರುವ ಬೀಜ ಹುಟ್ಟುತ್ತದೆಯೋ, ಇಲ್ಲವೋ ನಮಗೆ ಗೊತ್ತಿಲ್ಲ ಎನ್ನುವ ವ್ಯಾಪಾರಸ್ಥರು, ಇದೇ ಕಾರಣಕ್ಕಾಗಿ ರಶೀದಿಯನ್ನೂ ನೀಡುತ್ತಿಲ್ಲ. ಕೆಜಿಗೆ 300-400 ಇದ್ದ ದರ ಈಗ ಏಕಾಏಕಿ 3 ಸಾವಿರ ಆಗಿದೆ. ಗಂಟೆಯಿಂದ ಗಂಟೆಗೆ ದರ ಬೇರೆಯಾಗುತ್ತಿದೆ.
ದೇಶಕ್ಕೆ ಬಹುತೇಕ ಪಾಲು ಪೂರೈಕೆ ಮಾಡುತ್ತಿದ್ದ ಮಹಾರಾಷ್ಟ್ರದಲ್ಲಿಯೂ ಮಳೆಗೆ ಈರುಳ್ಳಿ ಬೆಳೆ ಹಾಳಾಗಿದೆ. ಈರುಳ್ಳಿ ಬೆಲೆ ಏರುತ್ತಿದೆ.
ಮಧ್ಯ ಪ್ರವೇಶಿಸಲು ಆಗ್ರಹ
ಈರುಳ್ಳಿ ಬೆಲೆ ಹೆಚ್ಚಾದಾಗ ಬೆಲೆ ನಿಯಂತ್ರಣ ಮಾಡುವ ಸರ್ಕಾರ ಈಗ ಈರುಳ್ಳಿ ಬೀಜದ ದರ ಏರಿಕೆ ನಿಯಂತ್ರಣ ಮಾಡಲಿ. ಸಹಾಯಧನದ ಅಡಿ ಈರುಳ್ಳಿ ಬೀಜ ವಿತರಿಸಲಿ. ಆಗ ದರ ನಿಯಂತ್ರಣವಾಗುತ್ತದೆ. ಈ ದಿಸೆಯಲ್ಲಿ ಸರ್ಕಾರ ಮುಂದಾಗಬೇಕು ಎಂದು ರೈತರು ಆಗ್ರಹಿಸುತ್ತಾರೆ.
ಸೋಮರಡ್ಡಿ ಅಳವಂಡಿ