ಕಂದಾಯ ಇಲಾಖೆಯ ವಾಸ್ತವ ತೆರೆದಿಟ್ಟ ಶೆಟ್ಟರ್
ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್ ಕಚೇರಿಗಳಲ್ಲಿ ಮಧ್ಯವರ್ತಿಗಳು ಹಾಗೂ ಭ್ರಷ್ಟಾಚಾರ ತಾಂಡವವಾಡುತ್ತಿದ್ದು,..
ವಿಧಾನಸಭೆ: ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್ ಕಚೇರಿಗಳಲ್ಲಿ ಮಧ್ಯವರ್ತಿಗಳು ಹಾಗೂ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, 'ಸಕಾಲ'ದಲ್ಲಿ ಸಾಧ್ಯವಾಗದ್ದೂ 'ಕೈ' ಬೆಚ್ಚಗೆ ಮಾಡಿದರೆ ಒಂದೇ ದಿನದಲ್ಲಿ ಆಗುತ್ತದೆ ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಕಂದಾಯ ಇಲಾಖೆಯ ವಾಸ್ತವವನ್ನು ತೆರೆದಿಟ್ಟರು.
ಕೆಳಹಂತದ ಸರ್ಕಾರ ಎಂದೇ ಬಿಂಬಿತವಾಗಿರುವ ಜಿಲ್ಲಾಧಿಕಾರಿ ಹಾಗೂ ತಾಲೂಕು ಕಚೇರಿಗಳಲ್ಲಿ ಸ್ಥಳೀಯ ಜನರಿಗೆ ಸ್ಪಂದನೆ ಸಿಗುತ್ತಿಲ್ಲ. ತಹಸೀಲ್ದಾರ್ ಕಚೇರಿಯ ವಾತಾವರಣ ಗೌರವಯುತವಾಗಿಲ್ಲ. 'ಸಕಾಲ' ಯೋಜನೆಯಲ್ಲೇ ಅನುಮಾನ ಇದೆ. ಲೋಪದೋಷಗಳು ಸಾಕಷ್ಟಿವೆ. ಕಂಪ್ಯೂಟರ್ನಲ್ಲಿ ಒಂದು ಆರ್ಟಿಸಿ ಪಡೆಯಲು ಒಂದು ದಿನ ಕ್ಯೂ ನಿಲ್ಲಬೇಕು. ಮಧ್ಯವರ್ತಿಗಳಿಗೆ ಹಣ ನೀಡಿದರೆ ಒಂದೇ ನಿಮಿಷದಲ್ಲಿ ಕೊಡಿಸುತ್ತಾರೆ ಎಂದು ವಿಧಾನಸಭೆಯಲ್ಲಿ ಕಂದಾಯ ಇಲಾಖೆಯ ಬೇಡಿಕೆ ಮೇಲಿನ ಚರ್ಚೆಯಲ್ಲಿ ಅವರು ಸೋಮವಾರ ಮಾತನಾಡಿದರು.
ಉತ್ತಮ ಆಡಳಿತ, ಇ-ಆಡಳಿತ ಎಲ್ಲೂ ಇಲ್ಲ. ಬರೀ ಘೋಷಣೆಯಲ್ಲಿ ಮಾತ್ರ ಇದೆ. ಕೈಬರಹದ ಪಹಣಿಯನ್ನು ಕಂಪ್ಯೂಟರ್ನಲ್ಲಿ ಅಳವಡಿಸುವಾಗ ಸಾಕಷ್ಟು ತಪ್ಪು ಆಗುತ್ತಿದೆ. 1.61 ಕೋಟಿ ಪಹಣಿಗಳಲ್ಲಿ 80 ಲಕ್ಷಕ್ಕೂ ಹೆಚ್ಚು ಪಹಣಿಯಲ್ಲಿ ತಪ್ಪು ಕಂಡುಬಂದಿದೆ. ಅಂದರೆ ಕಂಪ್ಯೂಟರ್ ಆಪರೇಟರ್ಗಳು ಅದಕ್ಷರೆಂದೇ ಅರ್ಥ. ಅವರನ್ನು ಹೀಗೆ ಬಿಟ್ಟರೆ ಮತ್ತಷ್ಟು ತಪ್ಪಾಗುತ್ತದೆ. ಅದಕ್ಕೆ ಮುನ್ನ ಇಲಾಖೆ ಎಚ್ಚೆತ್ತುಕೊಳ್ಳಬೇಕು ಎಂದರು.
ತಹಸೀಲ್ದಾರ್ ಕಚೇರಿಗಳಲ್ಲಿ ಕ್ಯೂ ಪದ್ಧತಿಗೆ ಇತಿಶ್ರೀ ಹಾಡಿ. ದಿನಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಅದ್ದು, ಇದನ್ನು ನಿವಾರಿಸಬೇಕಿದೆ. ಹುಬ್ಬಳ್ಳಿಯ ತಹಸೀಲ್ದಾರ್ ಕಚೇರಿಯಲ್ಲೇ 1.25 ಲಕ್ಷ ಅರ್ಜಿಗಳು ತಿದ್ದುಪಡಿಗೆ ಬಾಕಿ ಇವೆ. ಆರ್ಟಿಸಿಗೆ 30 ದಿನ ಏಕೆ ಬೇಕು. ಅದರ ಪ್ರಕ್ರಿಯೆಯನ್ನು ಸುಧಾರಿಸಿ. ಪ್ರಮಾಣ ಪತ್ರ, ಶಾಲೆಗೆ ಜಾತಿ ಪತ್ರ ನೀಡುವ ಲಕ್ಷಾಂತರ ಅರ್ಜಿಗಳು ಬಾಕಿ ಉಳಿದಿವೆ. ಭೂಮಾಪನದಲ್ಲಿ ಜನರಿಗೆ ಸಾಕಷ್ಟು ತೊಂದರೆ ಉಂಟಾಗಿದೆ ಪೋಡಿ, ಅಳತೆಗೆ ಸಕಾಲದಲ್ಲಿ ಅರ್ಜಿ ಹಾಕಿದರೂ ವಿಲೇವಾರಿ ಆಗುತ್ತಿಲ್ಲ ಎಂದು ಜಗದೀಶ್ ಶೆಟ್ಟರ್ ಕಂದಾಯ ಇಲಾಖೆಯ ಲೋಪಗಳನ್ನು ತೆರೆದಿಟ್ಟರು.
ಭೂಮಿಯ 'ಟೈಟಲ್' ಬಗ್ಗೆಯೇ ಸಾಕಷ್ಟು ಗೊಂದಲಗಳಿವೆ. ಸಮಾಜದಲ್ಲಿ ಅಶಾಂತಿ ಮತ್ತು ಸಂಘರ್ಷಕ್ಕೆ ಇದು ಕಾರಣವಾಗಿದೆ. ಸಿಟಿ ಸರ್ವೆ ನನೆಗುದಿಗೆ ಬಿದ್ದಿದೆ. ನಗರ-ಗ್ರಾಮಗಳಲ್ಲಿ ಕಂದಾಯ ನಿವೇಶನಗಳ ಹಾವಳಿಯಲ್ಲಿ ಸರ್ಕಾರಿ ಆಸ್ತಿ ಬೇರೆಯವರ ಪಾಲಾಗುತ್ತಿದೆ. ಕಾನೂನು ಮೀರಿ ಎಲ್ಲವೂ ನಡೆಯುತ್ತಿದೆ. ಈ ಅವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು. ಎ.ಟಿ. ರಾಮಸ್ವಾಮಿ ವರದಿಯಂತೆ ಬೆಂಗಳೂರಿನಲ್ಲಿ ಸಾಕಷ್ಟು ಭೂಮಿ ಒತ್ತುವರಿಯಾಗಿದೆ. ರಾಜ್ಯದ ಬೇರೆ ಭಾಗಗಳಲ್ಲೂ ಒತ್ತುವರಿಯಾಗಿದೆ. ಕಂದಾಯ ಇಲಾಖೆಯವರು ಎಲ್ಲಿ, ಎಷ್ಟು ತೆರವು ಮಾಡಿದ್ದಾರೆ ಎಂಬುದನ್ನು ತಿಳಿಸಬೇಕು ಎಂದು ಆಗ್ರಹಿಸಿದರು.