ಕೂಡಗಿ ಘಟನೆ ಹಿಂದೆ ಕಾಣದ ಕೈಗಳ ಕೆಲಸ
ಕೂಡಗಿ ಗೋಲಿಬಾರ್ ಹಾಗೂ ವಿದ್ಯುತ್ ಯೋಜನೆ ಅನುಷ್ಠಾನ ವಿರೋಧದ ಹಿಂದೆ ಕಾಣದ ಕೈಗಳಿವೆ...
ವಿಧಾನ ಪರಿಷತ್: ಕೂಡಗಿ ಗೋಲಿಬಾರ್ ಹಾಗೂ ವಿದ್ಯುತ್ ಯೋಜನೆ ಅನುಷ್ಠಾನ ವಿರೋಧದ ಹಿಂದೆ ಕಾಣದ ಕೈಗಳಿವೆ, ಸರ್ಕಾರದಲ್ಲಿಯೂ ಕೆಲವರಿದ್ದಾರೆ ಎಂದು ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಆರೋಪಿಸಿದ್ದಾರೆ.
ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಯೋಜನೆಗೆ ಚಾಲನೆ ದೊರೆಯಿತು. ಆಗ ಸ್ಥಳೀಯ ರೈತರಿಂದ ಯಾವುದೇ ವಿರೋಧವಿರಲಿಲ್ಲ. ಆದರೆ ನಂತರದ ದಿನಗಳಲ್ಲಿ ರೈತರನ್ನು ದಿಕ್ಕು ತಪ್ಪಿಸಲಾಗಿದೆ. ಈ ಕುತಂತ್ರದ ಬಗೆಗೂ ತನಿಖೆ ನಡೆಸಬೇಕು. ರೈತರಿಗೆ ಮಾಹಿತಿ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ರೈತರ ಆಕ್ರೋಶದ ಮೂಲ ತಿಳಿಯಲು ಸರ್ಕಾರ ಮುಂದಾಗಿಲ್ಲ ಎಂದು ಅವರು ಹೇಳಿದ್ದಾರೆ.
ಇದಕ್ಕೆ ಪೂರಕವೆಂಬಂತೆ ಮಾತನಾಡಿದ ಗೃಹ ಸಚಿವ ಕೆ.ಜೆ.ಜಾರ್ಜ್, ದೇಶದ ಅಭಿವೃದ್ಧಿ ಚಟುವಟಿಕೆ ನಿಯಂತ್ರಣಕ್ಕೆ ಕೆಲ ಎನ್ಜಿಒಗಳು ಕಾರ್ಯನಿರ್ವಹಿಸುತ್ತಿವೆ. ಕೂಡಗಿ ಯೋಜನೆ ನಿಯಂತ್ರಿಸಲು ಈ ರೀತಿಯ ಪ್ರಯತ್ನ ನಡೆಯುತ್ತಿರುವ ಸಾಧ್ಯತೆಯಿದೆ. ಈ ಬಗ್ಗೆ ಸರ್ಕಾರ ತನಿಖೆ ನಡೆಸಲಿದೆ ಎಂದು ತಿಳಿಸಿದ್ದಾರೆ.
ಯೋಜನೆ ಅನುಷ್ಠಾನದ ಸಂದರ್ಭದಲ್ಲಿ ಪ್ರತಿಪಕ್ಷದಲ್ಲಿದ್ದ ಕೆಲ ಮುಖಂಡರು ಪ್ರತಿಭಟನೆ ಮಾಡಿದ್ದರು. ರೈತರಲ್ಲಿ ಆತಂಕ ಮೂಡಿಸಿದ್ದರು. ಆದರೆ ಆ ಬಳಿಕ ರೈತರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನಕ್ಕೆ ಸರ್ಕಾರ ಅಥವಾ ರಾಜಕೀಯ ಮುಖಂಡರು ಕೈಹಾಕಲಿಲ್ಲ. ಇದರಿಂದ ಇಂದು ಆ ಭಾಗದಲ್ಲಿ ಆತಂಕದ ವಾತಾವರಣ ಏರ್ಪಟ್ಟಿದೆ. ಪರಿಸ್ಥಿತಿ ನಿಭಾಯಿಸಲು ಸರ್ಕಾರ ವಿಫಲವಾಗಿದೆ ಎಂದು ಅವರು ಆಕ್ರೋಶವ್ಯಕ್ತಪಡಿಸಿದ್ದಾರೆ. ರೈತರಿಗೆ ಗುಂಡು ಹಾರಿಸಲು ಒಪ್ಪಿಗೆ ಕೊಟ್ಟ ಜಿಲ್ಲಾಧಿಕಾರಿಯಿಂದಲೇ ತನಿಖೆ ನಡೆಸಿ ಸತ್ಯ ಹೇಳಿಸುವ ಪ್ರಯತ್ನಕ್ಕೆ ಸರ್ಕಾರ ಮುಂದಾಗಿದೆ. ಇದರಿಂದ ಕೇವಲ ಹೇಳಿಕೆ ಬರುತ್ತದೆ, ಆದರೆ ಸತ್ಯ ತಿಳಿಯುವುದಿಲ್ಲ. ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದು ಈಶ್ವರಪ್ಪ ಒತ್ತಾಯಿಸಿದರು.
'ಉಗ್ರ'ಪ್ಪ ಪಾಠ
ಹಾವೇರಿಯಲ್ಲಿ ಗೋಲಿಬಾರ್ ಮಾಡಿದವರು ಈಗ ಚರ್ಚೆಗೆ ನಿಂತಿದ್ದಾರೆ. ಅವರು ತಂದ ನಿಲುವಳಿ ಸೂಚನೆ ಕ್ರಮಬದ್ಧವಾಗಿಲ್ಲ ಎನ್ನುವುದು ನಮ್ಮ ವಾದವಾಗಿದೆ. ಆದರೆ ಕೂಡಗಿ ವಿಚಾರದ ಬಗ್ಗೆ ಚರ್ಚೆ ನಡೆಸಲು ಸರ್ಕಾರ ತಯಾರಿದೆ ಎಂದು ಕಾಂಗ್ರೆಸ್ನ ಉಗ್ರಪ್ಪ ಹೇಳಿಕೆ ನೀಡಿರುವುದಕ್ಕೆ ಬಿಜೆಪಿ ಸದಸ್ಯರಿಂದ ತೀವ್ರ ವಿರೋಧವ್ಯಕ್ತವಾಯಿತು. ಇದಕ್ಕೆ ಸಮ್ಮತಿ ಸೂಚಿಸಿದ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಸರ್ಕಾರದ ಪರವಾಗಿ ಸಚಿವರು ಹೇಳಿಕೆ ನೀಡುತ್ತಾರೆ. ಈ ರೀತಿಯ ಹೇಳಿಕೆ ನೀಡಿ ಸರ್ಕಾರ ಹಾಗೂ ಸಚಿವರಿಗೆ ಮುಜುಗರ ಮಾಡಬಾರದು ಎಂದು ಸಭಾಪತಿ ಅಭಿಪ್ರಾಯಪಟ್ಟರು.