ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ನೀವೇ ಸರ್ಕಾರ ನಡೆಸೋಕೆ ಬಂದಿರೋದಾ? ಈ ಹಿಂದೆ ಯಾರೂ ಆಡಳಿತ ನಡೆಸಿಲ್ಲವಾ?

ಕಂದಾಯ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಹಾಗೂ ಸಿಎಂ ಸಿದ್ದರಾಮಯ್ಯ ಅವರ ಮೇಲೆ ಸ್ಪೀಕರ್ ಕಾಗೋಡು...

Rashmi Kasaragodu
Updated On : 8 Jul 2014, 1:21 am

ವಿಧಾನಸಭೆ: ಕಂದಾಯ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಹಾಗೂ ಸಿಎಂ ಸಿದ್ದರಾಮಯ್ಯ ಅವರ ಮೇಲೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಕೋಪ ಪ್ರದರ್ಶಿಸಿದ ಪ್ರಸಂಗ ವಿಧಾನಸಭೆಯಲ್ಲಿ ಸೋಮವಾರ ನಡೆಯಿತು.
ಪ್ರಶ್ನೋತ್ತರ ಕಲಾಪ ಸಂದರ್ಭದಲ್ಲಿ ಜೆಡಿಎಸ್ನ ಮಾಗಡಿ ಬಾಲಕೃಷ್ಣ ಅವರು, ಪಹಣಿ ತಿದ್ದುಪಡಿ ಅಧಿಕಾರವನ್ನು ತಹಶೀಲ್ದಾರ್ ಬದಲು ಸಹಾಯಕ ಆಯುಕ್ತರಿಗೆ (ಎಸಿ) ನೀಡಿರುವುದರಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಬಗ್ಗೆ ಪ್ರಸ್ತಾಪಿಸಿದರು.
ಅದಕ್ಕೆ ಕಂದಾಯ ಸಚಿವ ಶ್ರೀನಿವಾಸ್ ಪ್ರಸಾದ್ ನೀಡಿದ ಉತ್ತರ ಶಾಸಕರಿಗೆ ಹಾಗೂ ಸ್ಪೀಕರ್ಗೆ ತೃಪ್ತಿ ನೀಡಲಿಲ್ಲ. ಪಹಣಿ ನೀಡುವುದಕ್ಕೆ ತಹಶೀಲ್ದಾರ್ ಅಧಿಕೃತ ಅಧಿಕಾರಿ. ಅಲ್ಲಿ ಏನಾದರೂ ತಪ್ಪಾದರೆ ತಿದ್ದುಪಡಿ ಅಧಿಕಾರವನ್ನು ತಹಶೀಲ್ದಾರ್ ಅವರಿಗೇ ನೀಡಬೇಕು. ಅದನ್ನು ಬಿಟ್ಟು ಎಸಿಗೆ ನೀಡಿರುವುದೇಕೆ? ರಾಜ್ಯದ ಎಲ್ಲ ಕಡೆ ಇದೇ ಸಮಸ್ಯೆ ಇದೆ. ಹೀಗೆ ಮಾಡಿದರೆ ಹೇಗೆ ? ಎಂದು ಶ್ರೀನಿವಾಸ್ ಪ್ರಸಾದ್ ಅವರಿಗೆ ಸ್ಪೀಕರ್ ತರಾಟೆಗೆ ತೆಗೆದುಕೊಂಡರು. ಇದರಿಂದ ಕ್ಷಣ ಹೊತ್ತು ತಬ್ಬಿಬ್ಬಾದ ಶ್ರೀನಿವಾಸ್ ಪ್ರಸಾದ್ ಇನ್ನು 6 ತಿಂಗಳಲ್ಲಿ ಸಮಸ್ಯೆ ಬಗೆಹರಿಸುತ್ತೇವೆ. ಕಂದಾಯ ಅದಾಲತ್ ಮೂಲಕ ಸಮಸ್ಯೆ ಬಗೆಹರಿಸುತ್ತೇವೆ ಎಂದು ಹೇಳಿದಾಗ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರತ್ತ ದೃಷ್ಟಿ ಹರಿಸಿದ ಸ್ಪೀಕರ್, 'ಇದನ್ನು ಸರಿ ಮಾಡದಿದ್ದರೆ ಹೇಗೆ? ನೀವು ಊರಿಗೆ ಹೋಗುವುದಿಲ್ಲವೇನ್ರೀ ? ನಿಮ್ಮ ಊರಲ್ಲಿ ಈ ಸಮಸ್ಯೆ ಇಲ್ವೇನ್ರೀ' ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಪಹಣಿ ಸಮಸ್ಯೆಯನ್ನು ಆದಷ್ಟು ಬೇಗ ಸರಿಪಡಿಸುತ್ತೇವೆ. ತಹಶೀಲ್ದಾರ್ರಿಗೆ ಈ ಅಧಿಕಾರ ನೀಡುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದರು.
ಅದೇ ರೀತಿ ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಅವರ ಬಗರ್ಹುಕುಂ ಸಾಗುವಾಳಿ ಪ್ರಶ್ನೆಗೂ ಸಚಿವರಿಂದ ಸೂಕ್ತ ಉತ್ತರ ಬರಲಿಲ್ಲ. ಇದು ಮತ್ತೆ ಕಾಗೋಡು ತಿಮ್ಮಪ್ಪ ಅವರನ್ನು ಕೆರಳಿಸಿತು. ಒಂದು ಕಾಲು ವರ್ಷ ಕಳೆದರೂ ಇನ್ನೂ ಬಗರ್ ಹುಕುಂ ಸಾಗುವಾಳಿ ಸಮಿತಿ ರಚನೆ ಮಾಡಿಲ್ಲ. ಬಂಗಾರಪೇಟೆಯಲ್ಲಿ ಅರ್ಜಿ ಕೊಟ್ಟು 8 ತಿಂಗಳು ಆಗಿದೆ. ನಿಮಗೆ ಸಮಿತಿ ಮಾಡುವುದಕ್ಕೂ 9 ತಿಂಗಳು ಆಗಬೇಕಾ? ನೀವೇ ಸರ್ಕಾರ ನಡೆಸೋಕೆ ಬಂದಿರೋದಾ? ಹಿಂದೆ ಯಾರೂ ಸರ್ಕಾರ ನಡೆಸಿಲ್ಲವಾ ಎಂದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement