ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ರಾಜಕೀಯ ಭಂಡತನ

ವಿಧಾನಪರಿಷತ್ ಚುನಾವಣೆಗೆ ತಮ್ಮ ಪಕ್ಷದ ಶಾಸಕರು ಹಣ ಕೇಳಿದ್ದರೆಂಬ 'ಡೀಲ್' ಬಾಂಬ್ ಸಿಡಿಸಿರುವ ಮಾಜಿ...

Rashmi Kasaragodu
Updated On : 8 Jul 2014, 1:01 am

ಮೇಲ್ಮನೆ ಸದಸ್ಯತ್ವವನ್ನೇ ಮಾರಾಟಕ್ಕಿಡಬೇಕೇ ಕುಮಾರಣ್ಣ?

ವಿಧಾನಪರಿಷತ್ ಚುನಾವಣೆಗೆ ತಮ್ಮ ಪಕ್ಷದ ಶಾಸಕರು ಹಣ ಕೇಳಿದ್ದರೆಂಬ 'ಡೀಲ್' ಬಾಂಬ್ ಸಿಡಿಸಿರುವ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು 'ತಾನು ಕಳ್ಳ ಪರರ ನಂಬ' ಎಂಬ ಗಾಧೆ ಮಾತಿಗೆ ಅತ್ಯಂತ ಅರ್ಹ ಹಾಗೂ ತೂಕದ ಉದಾಹರಣೆ.
'ಮೇಲ್ಮನೆಗೆ ಅಭ್ಯರ್ಥಿ ನೇಮಕಕ್ಕೆ ತಮ್ಮ ಪಕ್ಷದ ಶಾಸಕರು ಹಣ ಕೇಳಿದ್ದಾರೆ. ಹೀಗಾಗಿ ನಿಮ್ಮನ್ನು ವಿಧಾನ ಪರಿಷತ್ ಚುನಾವಣೆ ಅಭ್ಯರ್ಥಿಯಾಗಿ ಪರಿಗಣಿಸಲು ಸಾಧ್ಯವಿಲ್ಲ. ಪ್ರತಿಯೊಬ್ಬ ಶಾಸಕರೂ ತಲಾ ರು. 1ಕೋಟಿ ಕೇಳುತ್ತಿದ್ದಾರೆ'ಎಂದು ಬಿಜಾಪುರದ ಜೆಡಿಎಸ್ ಮುಖಂಡ ವಿಜುಗೌಡ ಪಾಟೀಲ್ ಬೆಂಬಲಿಗರ ಜತೆ ಕುಮಾರಸ್ವಾಮಿ ನಡೆಸಿದ ಸಂಭಾಷಣೆಯ ಸಿಡಿ ಬಹಿರಂಗಗೊಂಡ ಬಳಿಕ ಅವರ ನಡವಳಿಕೆ ಗಮನಿಸಿದಾಗ ಈ ಮಾತನ್ನು ನೆನಪಿಸಿಕೊಳ್ಳುವುದು ಅನಿವಾರ್ಯ.
ತಮ್ಮ ತಪ್ಪು ಸಮರ್ಥನೆಗೆ ಮಾಧ್ಯಮದ ಎದುರು ಬಂದು ಕಣ್ಣೀರು ಹಾಕುವುದು ಕುಮಾರಸ್ವಾಮಿ ಅವರ ಹಳೆ ಚಾಳಿ. ತಮ್ಮ ದೋಷಗಳನ್ನು ಮುಚ್ಚಿಟ್ಟುಕೊಳ್ಳುವುದಕ್ಕಾಗಿ ರಾಜ್ಯದ ಜನತೆಯ ಮುಂದೆ ಕಣ್ಣೀರ ಕೋಡಿ ಹರಿಸುವ ಕುಮಾರಸ್ವಾಮಿ ಅವರ ಅವಕಾಶವಾದಿ ಧೋರಣೆ ರಾಜ್ಯದ ಜನತೆಗೆ ಎಂದೋ ಅರ್ಥವಾಗಿದೆ. ಅಳುವ ಗಂಡಸರನ್ನು ಹೆಚ್ಚು ನಂಬಬಾರದೆಂಬ ಮಾತಿನ ಅರ್ಥವನ್ನು ಕಳೆದ ವಿಧಾನಸಭೆ ಚುನಾವಣೆಯಲ್ಲೇ ಅವರಿಗೆ ಮನದಟ್ಟು ಮಾಡಿಕೊಟ್ಟಿದ್ದಾರೆ.
ಆದರೆ ಮೇಲ್ಮನೆ ಚುನಾವಣೆ ಡೀಲ್ನಲ್ಲಿ ಸಿಲುಕಿಕೊಂಡಿರುವ ಕುಮಾರಸ್ವಾಮಿ ಮತ್ತೆ ತಮ್ಮ ಹಳೆ ಚಾಳಿಯನ್ನು ಮಾಧ್ಯಮದ ಎದುರು ಪ್ರಯೋಗಿಸಿದ್ದಾರೆ.        

ಅಲ್ಲ ಸ್ವಾಮಿ, ಎಷ್ಟು ಸಲ ನಾವು ನಿಮ್ಮ ಈ ನಾಟಕವನ್ನು ನಂಬಬೇಕು ? ನಿಮ್ಮ ಲೆಕ್ಕದಲ್ಲಿ ಮೇಲ್ಮನೆ ಚುನಾವಣೆ ಎಂದರೆ ಶಾಸಕರಿಗೆ ಹಾಲು ಕೊಡುವ ಹಸುವೇ ? ಶಾಸಕರು ಕಷ್ಟದಲ್ಲಿದ್ದಾರೆ. ಸಾಲ ಮಾಡಿಕೊಂಡಿದ್ದಾರೆ. ಅವರ ನೋವಿಗೆ ಸ್ಪಂದಿಸಬೇಕು ಎಂಬುದಕ್ಕೆ ಮೇಲ್ಮನೆ ಸದಸ್ಯತ್ವವನ್ನೇ ಮಾರಾಟಕ್ಕೆ ಇಡಬೇಕೇ ?
ಹಲವು ವರ್ಷಗಳ ಕಾಲ ಪಕ್ಷಕ್ಕಾಗಿ ದುಡಿದ ಮುಖಂಡ ಮೇಲ್ಮನೆ ಚುನಾವಣೆಗೆ ತಮ್ಮನ್ನು ಪರಿಗಣಿಸಿ ಎಂದು ಪಕ್ಷದ ಅಧಿನಾಯಕರ ಮುಂದೆ ಕೇಳುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ವೇ ಸಾಧಾರಣ ಕ್ರಮ. ಆದರೆ ಅವರನ್ನು ಸಂಬಾಳಿಸುವುದಕ್ಕಾಗಿ ನೀವು ನಿಮ್ಮ ಪಕ್ಷದಲ್ಲಿನ ಭ್ರಷ್ಟ ವ್ಯವಸ್ಥೆಯನ್ನು ಬಿಚ್ಚಿಡಬೇಕೇ ? ನಿಮ್ಮ ಪಕ್ಷದ ಶಾಸಕರಿಗೆ ಕಷ್ಟ ಇದೆಯೋ ಇಲ್ಲವೋ ಅದು ಅವರಿಗೆ ಸೇರಿದ್ದು. ಆದರೆ ಅದರ ಪರಿಹಾರಕ್ಕೆ ನೀವು ಮೇಲ್ಮನೆ ಸದಸ್ಯತ್ವವನ್ನು ಮಾರಾಟಕ್ಕೆ ಇಡಲು ಹೊರಟಿರುವುದು ಎಷ್ಟು ಸಮಂಜಸ. ಈ ರೀತಿ ಹೇಳುವಾಗ ಮೇಲ್ಮನೆಯ ಘನತೆಯನ್ನು ನೀವು ಎಲ್ಲಿಗೆ ತಳ್ಳುತ್ತಿದ್ದೀರಿ ಎಂಬ ಪರಿಜ್ಞಾನ ಇರಲಿಲ್ಲವೇ ?
ನೀವು ಈ ರಾಜ್ಯದ ಮುಖ್ಯಮಂತ್ರಿಯಾಗಿಯೂ ಅಧಿಕಾರ ನಡೆಸಿದ್ದೀರಿ. ಶಾಸಕ ಸ್ಥಾನದ ಪಾವಿತ್ರ್ಯದ ಬಗ್ಗೆ ಮಾತನಾಡುತ್ತೀರಿ. ಆದರೆ ಅದೇ ಶಾಸಕರು ಒಟ್ಟಾಗಿ ರೂಪಿಸಿದ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಬಗ್ಗೆ ನಿಮ್ಮ ಪ್ರಕಾರ ಕಿಂಚಿತ್ ಮರ್ಯಾದೆ ಇಲ್ಲವೇ ? ಶಾಸಕರಿಗಾಗಿ ನಾನು 'ಕುಬೇರ'ರನ್ನು ಮೇಲ್ಮನೆಗೆ ಕಳುಹಿಸಬೇಕಾಗಿದೆ ಎಂಬುದು ಜನತಂತ್ರದ ಅಣಕವಲ್ಲವೇ ?
ನೀವು ನಿಮ್ಮ ಪಕ್ಷದ ಶಾಸಕರು ಕದ್ದು ಮುಚ್ಚಿ ಈ ವ್ಯವಹಾರ ನಡೆಸಿದ್ದರೆ ತೊಂದರೆ ಇರಲಿಲ್ಲ. ಆದರೆ ಈ ಮಾತುಕತೆಯ ಸಿಡಿ ಬಹಿರಂಗವಾದ ನಂತರ ಇಡಿ ವ್ಯವಸ್ಥೆ ನಡೆಯುತ್ತಿರುವುದೇ ಹೀಗೆ ಎಂದು ವಿವಾದವನ್ನು ಜನರಲೈಸ್ ಮಾಡಲು ಹೊರಟಿದ್ದೀರಿ. ನಿಮ್ಮ ಮೇಲೆ ಬಿದ್ದ ಹೊಲಸನ್ನು ಈಗ ಎಲ್ಲೆಡೆ ಚೆಲ್ಲುತ್ತಿದ್ದೀರಿ.
ಅಷ್ಟು ಮಾತ್ರವಲ್ಲ ರಾಜ್ಯದ ಮತದಾರನೇ ಭ್ರಷ್ಟನಾಗಿದ್ದಾನೆ ಎಂದು ಟಿವಿ ವಾಹಿನಿಗಳ ಎದುರು ಭಾಷಣ ಬಿಗಿಯುತ್ತಿದ್ದೀರಿ. ತಪ್ಪು ಮಾಡಿದ್ದು ಮಾತ್ರವಲ್ಲ ಅಲ್ಲಿಯೂ 'ತನ್ನಂತೆ ಪರರ ಬಗೆದೊಡೆ' ಎಂದು ಬಿನ್ನಾಣ ಪ್ರದರ್ಶನ ಮಾಡುತ್ತಿದ್ದೀರಿ.
ಒಂದೇ ಮಾತಿನಲ್ಲಿ ಹೇಳಬೇಕೆಂದರೆ ನಿಮ್ಮ ಈ ವರ್ತನೆ ಇತ್ತೀಚಿನ ದಿನಗಳಲ್ಲಿ ರಾಜ್ಯ ಕಂಡ ಅತಿ ದೊಡ್ಡ ರಾಜಕೀಯ ಭಂಡತನ. ಚುನಾವಣೆಯಲ್ಲಿ ಹಣ-ಹೆಂಡ ಹರಿಯುತ್ತದೆ ಎಂಬುದು ಹಳೆಯ ಮಾತು. ಆದರೆ ಹಿರಿಯರ ಸದನಕ್ಕೆ ಸದಸ್ಯರನ್ನು ಆಯ್ಕೆ ಮಾಡುವಾಗಲೂ ಹಣದ ಹರಿವಿಗೆ ಆಸ್ಪದ ಮಾಡಿಕೊಡುವುದನ್ನು ಸಮರ್ಥಿಸುವ ನಿಮಗೆ ನೀವೇ ಸಾಟಿ.

- ಸಂತೆಗದ್ದೆ ನಾರಾಯಣ



ಕುಮಾರಸ್ವಾಮಿ ಅವರ 'ಡೀಲ್' ಪ್ರಕರಣ ಸಂಬಂಧ ಕೇಂದ್ರ ಯಾವುದೇ ವರದಿ ಕೇಳಿಲ್ಲ. ಪತ್ರ ಬಂದರೆ ಉತ್ತರಿಸುತ್ತೇನೆ. ರಾಜ್ಯದಿಂದಲೂ ವರದಿ ಸಿದ್ಧವಾಗುತ್ತಿದ್ದು, ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳುತ್ತೇನೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿ

ಕುಮಾರಸ್ವಾಮಿ ತಮ್ಮ ದಿವಾಳಿತನವನ್ನು
ಪ್ರದರ್ಶಿಸಿಕೊಂಡಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಹಣದ ಆಸೆಗೆ ಮೇಲ್ಮನೆ
ಸದಸ್ಯತ್ವ ಮಾರಾಟ ಮಾಡಲು ಮುಂದಾಗಿದ್ದು ನಾಚಿಕೆಗೇಡಿನ ಸಂಗತಿ.
-ಎಚ್.ಕೆ. ಪಾಟೀಲ್, ಸಚಿವ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement