ಶರಿಯಾಗೇ ಫತ್ವಾ
ಶರಿಯಾ ಕೋರ್ಟ್ಗಳಿಗೆ ಕಾನೂನಾತ್ಮಕ ಪಾವಿತ್ರ್ಯ ಇಲ್ಲ. ಶರಿಯಾ ಕಾನೂನು ಮತ್ತು ಫತ್ವಾಗೆ ಸಂಬಂಧಿಸಿ....
ಧಾರ್ಮಿಕ ಕೋರ್ಟ್ಗಳು ಕಾನೂನುಬದ್ಧವಲ್ಲ, ವ್ಯಕ್ತಿ ಹಕ್ಕಿಗೆ ಧಕ್ಕೆ ತರುವ ಫತ್ವಾ ಹೊರಡಿಸುವಂತಿಲ್ಲ: ಸುಪ್ರೀಂ
ನವದೆಹಲಿ: ಶರಿಯಾ ಕೋರ್ಟ್ಗಳಿಗೆ ಕಾನೂನಾತ್ಮಕ ಪಾವಿತ್ರ್ಯ ಇಲ್ಲ. ಶರಿಯಾ ಕಾನೂನು ಮತ್ತು ಫತ್ವಾಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಸೋಮವಾರ ನೀಡಿದ ಐತಿಹಾಸಿಕ ತೀರ್ಪಿದು.
ತನ್ನ ಮುಂದೆ ಇಲ್ಲದ ವ್ಯಕ್ತಿಯ ವಿರುದ್ಧ ಫತ್ವಾ ಹೊರಡಿಸುವ ಹಕ್ಕು ಶರಿಯಾ ಕೋರ್ಟ್ಗೆ ಇಲ್ಲ. ಇಂತಹ ಕೋರ್ಟ್ಗೆ ಕಾನೂನುಬದ್ಧ ಸ್ಥಾನಮಾನವೂ ಇಲ್ಲ ಎಂದು ನ್ಯಾಯಾಲಯ ತಿಳಿಸಿದೆ. ಜತೆಗೆ ಕೆಲವೊಂದು ಪ್ರಕರಣಗಳಲ್ಲಿ ಶರಿಯಾ ಕೋರ್ಟ್ಗಳು ನೀಡಿರುವ ಆದೇಶಗಳು ಮಾನವ ಹಕ್ಕುಗಳನ್ನು ಉಲ್ಲಂಘಿಸುವಂಥದ್ದು ಎಂದಿರುವ ನ್ಯಾಯಾಲಯ, ಇಸ್ಲಾಂ ಸೇರಿದಂತೆ ಯಾವುದೇ ಧರ್ಮವೂ ಅಮಾಯಕರಿಗೆ ಶಿಕ್ಷೆ ವಿಧಿಸುವಂತೆ ಹೇಳಿಲ್ಲ ಎಂದಿದೆ.
ಸ್ವಇಚ್ಛೆಯಿಂದ ಮುಂದೆ ಬಂದು ಪ್ರಶ್ನಿಸುವ ವ್ಯಕ್ತಿಗೆ ಉತ್ತರಿಸುವ ಅಥವಾ ತೀರ್ಪು ನೀಡುವ ಅವಕಾಶ ಶರಿಯಾ ಜಡ್ಜ್ಗಳಿಗೆ ಇವೆ. ಆದರೆ, ಆ ವ್ಯಕ್ತಿಯ ಹೊರತಾಗಿ ಇತರರ ವಿರುದ್ಧ ಫತ್ವಾ ಹೊರಡಿಸುವ ಅಧಿಕಾರ ದಾರುಲ್ ಖಾಝಾಗೆ ಇಲ್ಲ. ಮಾನವನ ಹಕ್ಕುಗಳ ಮೇಲೆ ಪರಿಣಾಮ ಬೀರುವಂತಹ ಫತ್ವಾಗಳನ್ನು ಹೊರಡಿಸುವುದು ಸಲ್ಲ ಎಂದೂ ಕೋರ್ಟ್ ತೀರ್ಪಿನಲ್ಲಿ ಹೇಳಿದೆ. ಇದೇ ವೇಳೆ, ಯಾರಾದರೂ ಶರಿಯಾ ನ್ಯಾಯಾಲಯದ ಮೊರೆಹೋಗಲು ಇಚ್ಛಿಸಿದರೆ ಅದಕ್ಕೆ ಅಡ್ಡಿಪಡಿಸುವುದಿಲ್ಲ ಎಂದೂ ನ್ಯಾಯಪೀಠ ತಿಳಿಸಿದೆ.
ಮುಸ್ಲಿಂ ಲಾ ಏನು ಹೇಳುತ್ತದೆ?
ಸುಪ್ರೀಂ ತೀರ್ಪಿಗೆ ಪ್ರತಿಕ್ರಿಯಿಸಿರುವ ಮುಸ್ಲಿಂ ಪರ್ಸನಲ್ ಲಾ ಬೋರ್ಡ್, ಫತ್ವಾಗಳು ಮೂಲಭೂತ ಹಕ್ಕುಗಳ ಮೇಲೆ ಪರಿಣಾಮ ಬೀರುತ್ತದೆ ಎಂದಾದರೆ ಅಂತಹ ವ್ಯಕ್ತಿಗಳು ನ್ಯಾಯಾಲಯದ ಮೊರೆ ಹೋಗಬಹುದು ಎಂದಿದೆ. ವ್ಯಕ್ತಿಯ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದ ಹೊರತಾಗಿ ಮುಸ್ಲಿಮರ ಶರಿಯಾ ಕಾನೂನಿನ ವಿಚಾರದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಈ ಹಿಂದಿನ ಸರ್ಕಾರವೇ ಹೇಳಿತ್ತು ಎಂದೂ ಅದು ನೆನಪಿಸಿದೆ.
2005ರಲ್ಲಿ ಸಲ್ಲಿಸಿದ್ದ ಅರ್ಜಿ
ದೆಹಲಿ ಮೂಲದ ವಕೀಲ ವಿಶ್ವಲೋಚನ್ ಮದನ್ ಎಂಬುವರು 2005ರಲ್ಲಿ ಶರಿಯಾ ಕೋರ್ಟ್ಗಳ ಕಾನೂನುಬದ್ಧತೆಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು. ಶರಿಯಾ ನ್ಯಾಯಾಲಯಗಳು ಕಾನೂನುಬಾಹಿರವಾಗಿದ್ದು, ಅವುಗಳು ದೇಶದಲ್ಲಿ ಪರ್ಯಾಯ ನ್ಯಾಯಾಲಗಳಾಗಿ ಕಾರ್ಯನಿರ್ವಹಿಸುತ್ತಿವೆ. ಮುಸ್ಲಿಮರ ಧಾರ್ಮಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯವನ್ನು ಇದೇ ಕೋರ್ಟ್ಗಳು ನಿರ್ಧರಿಸುತ್ತಿವೆ. ಮುಸ್ಲಿಂ ಸಂಸ್ಥೆಗಳಿಂದ ನೇಮಕಗೊಂಡ ಖಾಝಿಗಳು ಅಥವಾ ಮುಫ್ತಿಗಳು ಹೇರುವ ಫತ್ವಾ ಮುಸ್ಲಿಮರನ್ನು ನಿಯಂತ್ರಿಸುವ ಅಥವಾ ಹಕ್ಕುಗಳನ್ನು ಕಸಿಯುವಂತಾಗಬಾರದು ಎಂದು ಮದನ್ ಅರ್ಜಿಯಲ್ಲಿ ತಿಳಿಸಿದ್ದರು. ಜತೆಗೆ, ಪತಿ ಮತ್ತು ಮಕ್ಕಳನ್ನು ತ್ಯಜಿಸಿ ಅತ್ಯಾಚಾರವೆಸಗಿದ ಮಾವನೊಂದಿಗೆ ನೆಲೆಸುವಂತೆ ಮಹಿಳೆಯೊಬ್ಬಳಿಗೆ ಶರಿಯಾ ಕೋರ್ಟ್ ನೀಡಿದ ತೀರ್ಪನ್ನೂ ಮದನ್ ಅರ್ಜಿಯಲ್ಲಿ ಉಲ್ಲೇಖಿಸಿದ್ದರು. ಈ ಅರ್ಜಿಗೆ ಸಂಬಂಧಿಸಿ ಸೋಮವಾರ ಸುಪ್ರೀಂ ನ್ಯಾಯಮೂರ್ತಿ ಸಿ.ಕೆ. ಪ್ರಸಾದ್ ನೇತೃತ್ವದ ಪೀಠ ಈ ಮಹತ್ವದ ತೀರ್ಪು ನೀಡಿದೆ.
ಖಾಪ್ ಪಂಚಾಯತ್ ಕಥೆ?
ಶರಿಯಾ ಕೋರ್ಟ್ಗಳಿಗೆ ಕಾನೂನಿನಲ್ಲಿ ಮಾನ್ಯತೆ ಇಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ಖಾಪ್ ಪಂಚಾಯತ್ಗಳ ಪ್ರಶ್ನೆ ಉದ್ಭವಿಸಿದೆ. ಶರಿಯಾ ಕೋರ್ಟ್ಗಳು ನೀಡುವ ಆದೇಶ, ತೀರ್ಪುಗಳು ಎಷ್ಟು ಕಠಿಣವಿರುತ್ತದೋ, ಮಾನವ ಹಕ್ಕುಗಳನ್ನು ಅವು ಎಷ್ಟು ಉಲ್ಲಂಘಿಸುತ್ತವೆಯೋ, ಖಾಪ್ ಪಂಚಾಯತ್ಗಳ ಆದೇಶಗಳೂ ಅಷ್ಟೇ ಕಠಿಣವಿರುತ್ತದೆ. ಉತ್ತರ ಭಾರತದ ಬಹುತೇಕ ಗ್ರಾಮಗಳಲ್ಲಿ ಖಾಪ್ ಪಂಚಾಯತ್ ಚಾಲ್ತಿಯಲ್ಲಿವೆ. ಹೆಣ್ಣುಮಕ್ಕಳು ಮೊಬೈಲ್ ಬಳಸುವಂತಿಲ್ಲ, ಜೀನ್ಸ್ ಧರಿಸುವಂತಿಲ್ಲ, ಶಾಲು ಧರಿಸಿಕೊಂಡೇ ಹೊರಹೋಗಬೇಕು, ಏಕಾಂಗಿಯಾಗಿ ಮನೆಯ ಹೊರಗೆ ಕಾಲಿಡುವಂತಿಲ್ಲ ಎಂಬೆಲ್ಲ 'ಖಾಪ್' ತೀರ್ಪುಗಳು ಶರಿಯಾ ಕಾನೂನನ್ನೂ ಮೀರಿಸುವಂತಿದೆ. ಆದರೆ ಈ ಖಾಪ್ ಪಂಚಾಯತ್ಗಳ ಬಗ್ಗೆ, ಅವುಗಳು ನೀಡುವ ತೀರ್ಪುಗಳ ಬಗ್ಗೆ ಸುಪ್ರೀಂ ಏನನ್ನುತ್ತದೆ ಎಂದು ಕಾದು ನೋಡಬೇಕು.
ಕೋರ್ಟ್ ಹೇಳಿದ್ದೇನು?
- ಶರಿಯಾಕ್ಕೆ ಕಾನೂನು ಪಾವಿತ್ರ್ಯಇಲ್ಲ.
- ನಮ್ಮಲ್ಲಿ ಫತ್ವಾಗಳು ಕಾನೂನುಬದ್ಧ ಅಲ್ಲ
- ಜನ ಶರಿಯಾ ಕೋರ್ಟ್ ಮೊರೆಹೋಗಲು ಇಚ್ಛಿಸಿದರೆ ಅದನ್ನು ನಾವು ತಡೆಯುವುದಿಲ್ಲ
- ವೈಯಕ್ತಿಕವಾಗಿ ಯಾರಾದರೂ ಶರಿಯಾ ಕೋರ್ಟ್ ಮೊರೆಹೋದರೆ ಆಗ ಇಸ್ಲಾಮಿಕ್ ಜಡ್ಜ್ ನೀಡುವ ತೀರ್ಪು ಆ ವ್ಯಕ್ತಿಗೇ ಹೊರತು ಎಲ್ಲರಿಗೂ ಅನ್ವಯಿಸುವುದಿಲ್ಲ.
- ವ್ಯಕ್ತಿಯ ಮೂಲಭೂತ ಹಕ್ಕುಗಳನ್ನು ಕಸಿಯುವ ಹಕ್ಕು ಯಾವ ಧರ್ಮಕ್ಕೂ ಇಲ್ಲ
- ಶರಿಯಾ ಕೋರ್ಟ್ ಎಂಬುದು ನ್ಯಾಯಾಂಗ ವ್ಯವಸ್ಥೆಗೆ ಪರ್ಯಾಯ ಅಲ್ಲವೇ ಅಲ್ಲ
ಪ್ರಮುಖ ಫತ್ವಾಗಳು
-ಪಾಕಿಸ್ತಾನದಲ್ಲಿ ಹೆಣ್ಣು ಮಕ್ಕಳೂ ಶಾಲೆಗೆ ಬರಬೇಕೆಂದು ಪ್ರೇರೇಪಿಸಿದ್ದಕ್ಕೆ ಮಲಾಲಾ ಯೂಸುಫ್ಝಾಯ್ ವಿರುದ್ಧ ಧರ್ಮಗುರು ಶೇಖ್ ಒಮರ್ ಬಖ್ರಿಯಿಂದ ಫತ್ವಾ
- 14 ವರ್ಷದ ಮಲಾಲಾ ಮೇಲೆ ಗುಂಡು ಹಾರಿಸಿದ ತಾಲಿಬಾನ್ ಉಗ್ರನ ವಿರುದ್ಧ 50 ಮಂದಿ ಮುಸ್ಲಿಂ ಧರ್ಮಗುರುಗಳಿಂದ ಫತ್ವಾ
- ಬಾಲಿವುಡ್ ನಟರಾದ ಶಾರುಖ್, ಸಲ್ಮಾನ್ ಖಾನ್ ಹೆಸರನ್ನು ತಮ್ಮ ಮಕ್ಕಳಿಗೆ ಇಟ್ಟವರ ವಿರುದ್ಧ ಮೀರತ್ನ ಮೌಲ್ವಿಯಿಂದ ಫತ್ವಾ
- ಭಯೋತ್ಪಾದನೆ ಮತ್ತು ಆತ್ಮಾಹುತಿ ದಾಳಿ ವಿರುದ್ಧ ದಾರುಲ್ ಉಲೂಮ್ ದೇವ್ಬಂದ್ ಫತ್ವಾ
- ಶಾರ್ಟ್ ಸ್ಕರ್ಟ್ ಧರಿಸಿದ್ದಕ್ಕಾಗಿ ಟೆನಿಸ್ ತಾರೆ ಸಾನಿಯಾ ಮಿರ್ಜಾ ವಿರುದ್ಧ ಧರ್ಮಗುರು ಹಸೀಬುಲ್ ಹಸನ್ ಸಿದ್ದೀಕಿಯಿಂದ ಫತ್ವಾ
- ಇಸ್ಲಾಂ ಧರ್ಮದಲ್ಲಿ ಮಹಿಳೆಯರ ಸ್ಥಿತಿಗತಿ ಬಗ್ಗೆ ಬರೆದ ಲೇಖಕಿ ತಸ್ಲೀಮಾ ನಸ್ರೀನ್ ವಿರುದ್ಧ ಬಾಂಗ್ಲಾ ಮೂಲಭೂತವಾದಿಗಳಿಂದ ಫತ್ವಾ
- 'ದಿ ಸೆಟಾನಿಕ್ ವರ್ಸಸ್' ಲೇಖಕ ಸಲ್ಮಾನ್ ರಶ್ದಿ ವಿರುದ್ಧ ಇರಾನ್ನ ಧಾರ್ಮಿಕ ನಾಯಕರಿಂದ ಫತ್ವಾ. ವಿಶ್ವದ ಎಲ್ಲೇ ಇದ್ದರೂ ರಶ್ದಿಯನ್ನು ಹತ್ಯೆ ಮಾಡುವಂತೆ ಮುಸ್ಲಿಮರಿಗೆ ಕರೆ
ಶರಿಯಾ ಕೋರ್ಟ್ಗಳು ನ್ಯಾಯಾಂಗಕ್ಕೆ ಪರ್ಯಾಯವಲ್ಲ ಎಂಬ ನಮ್ಮ ವಾದವನ್ನೇ ಕೋರ್ಟ್ ಎತ್ತಿಹಿಡಿದಿದೆ. ಅವು ಕಳುಹಿಸುವ ನೋಟಿಸ್ಗಳು ಕಾನೂನುಬದ್ಧವಲ್ಲ, ಕೇವಲ ಮಧ್ಯಸ್ಥಿಕೆ ತೀರ್ಮಾನ. ಎಲ್ಲ ಖಾಝಿಗಳೂ ದೇಶದ ಕಾನೂಲು ಪಾಲಿಸಬೇಕು.
- ಖಾಸಿಂ ರಸೂಲ್ ನಿಯಾಝಿ,
ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಸದಸ್ಯ
ಮುಸ್ಲಿಮರ ವೈಯಕ್ತಿಕ ಕಾನೂನಿನನ್ವಯ ಕಾರ್ಯನಿರ್ವಹಿಸುವ ಮತ್ತು ವರ್ತಿಸುವ ಹಕ್ಕನ್ನು ಭಾರತೀಯ ಸಂವಿಧಾನವೇ ನಮಗೆ ನೀಡಿದೆ. ಸುಪ್ರೀಂ ಕೋರ್ಟ್ನ ತೀರ್ಪನ್ನು ಸರಿಯಾದ ಅಧ್ಯಯನ ನಡೆಸಿದ ಬಳಿಕವೇ ಈ ಬಗ್ಗೆ ಹೇಳಿಕೆ ನೀಡಬಹುದು.
-ಖಾಲಿದ್ ರಶೀದ್ ಫರಂಗಿ,
ಮುಸ್ಲಿಂ ಧರ್ಮಗುರು
ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಲ್ಲಿ ಯಾವುದೇ ತಪ್ಪಿಲ್ಲ. ಈ ತೀರ್ಪಿನಿಂದಾಗಿ ಶರಿಯಾ ಕೋರ್ಟ್ನ ಕಾರ್ಯಕಲಾಪಗಳಿಗೆ ಅಡ್ಡಿಯಾಗುವುದಿಲ್ಲ.
- ಅನೀಸುರ್ ರೆಹಮಾನ್, ಇಮಾರತ್ ಶರಿಯಾ ಸದಸ್ಯ
ಧಾರ್ಮಿಕ ವಿಚಾರವನ್ನು ನ್ಯಾಯಾಲಯದ ಮೆಟ್ಟಿಲಿಗೆ ಕೊಂಡೊಯ್ದಿದ್ದೇ ಮೊದಲ ತಪ್ಪು. ಒಬ್ಬ ವ್ಯಕ್ತಿ ಒಂದು ಧರ್ಮವನ್ನು ಆಚರಿಸುತ್ತಿದ್ದರೆ ಅದರ ಉಪದೇಶಗಳನ್ನು ಪಾಲಿಸಲೇಬೇಕು. ಶರಿಯಾವನ್ನು ಪಾಲಿಸದವನು ನೈಜ ಮುಸಲ್ಮಾನನೇ ಅಲ್ಲ.
-ಮೌಲಾನಾ ಮೊಹಮ್ಮದ್ ಸಾಜಿದ್ ರಶೀದ್, ಕುಲ್ ಹಿಂದ್ ಇಮಾಮ್ ಸಂಸ್ಥೆ ಅಧ್ಯಕ್ಷ