ಸಂಸತ್ನಲ್ಲಿ ದರ ಫೈಟ್
ಅಗತ್ಯ ವಸ್ತುಗಳ ಬೆಲೆ ಏರಿಕೆ, ರೇಲ್ವೆ ಪ್ರಯಾಣ ದರ ಹೆಚ್ಚಳ ವಿಚಾರ ಸಂಸತ್ ಬಜೆಟ್ ಅಧಿವೇಶನದ ಮೊದಲ ...
ನವದೆಹಲಿ:ಅಗತ್ಯ ವಸ್ತುಗಳ ಬೆಲೆ ಏರಿಕೆ, ರೇಲ್ವೆ ಪ್ರಯಾಣ ದರ ಹೆಚ್ಚಳ ವಿಚಾರ ಸಂಸತ್ ಬಜೆಟ್ ಅಧಿವೇಶನದ ಮೊದಲ ದಿನ, ಸೋಮವಾರ ಹೆಚ್ಚಿನ ಸದ್ದು ಮಾಡಿತು. ಕಾಂಗ್ರೆಸ್, ಬಿಎಸ್ಪಿ, ಆಮ್ ಆದ್ಮಿ ಪಕ್ಷ ಸೇರಿ ಪ್ರಮುಖ ಪಕ್ಷಗಳು ಲೋಕಸಭೆಯಲ್ಲಿ ಕೋಲಾಹಲವನ್ನೇ ಎಬ್ಬಿಸಿದವು. ಹೀಗಾಗಿ, ಲೋಕಸಭೆಯಲ್ಲಿ ಮೊದಲ ದಿನ ಯಾವುದೇ ಕಲಾಪ ಸಾಧ್ಯವಾಗಲಿಲ್ಲ. ಆದರೆ ರಾಜ್ಯಸಭೆಯಲ್ಲಿ ಬೆಲೆ ಏರಿಕೆಯ ಚರ್ಚೆ ನಡೆಯಿತು.
ಕಲಾಪ ಆರಂಭವಾಗುತ್ತಿದ್ದಂತೆ ಗದ್ದಲ ಆರಂಭ. ಹೀಗಾಗಿ ಸ್ಪೀಕರ್ ಸುಮಿತ್ರಾ ಮಹಾಜನ್ ಮಧ್ಯಾಹ್ನ 12 ಗಂಟೆಯವರೆಗೆ ಕಲಾಪ ಮುಂದೂಡಿದರು. ನಂತರ 2 ಬಾರಿ ಕಲಾಪ ಸೇರಿದಾಗಲೂ ಕಲಾಪ ನಡೆಸುವುದು ಅಸಾಧ್ಯವಾಯಿತು. ಹೀಗಾಗಿ ಸ್ಪೀಕರ್ ಮಂಗಳವಾರಕ್ಕೆ ಕಲಾಪ ಮುಂದೂಡಿದರು.
ಯುಪಿಎ ಕಾರಣ: ರಾಜ್ಯಸಭೆಯಲ್ಲಿ ಮಾತನಾಡಿದ ಹಣಕಾಸು ಸಚಿವ ಅರುಣ್ ಜೇಟ್ಲಿ ಯುಪಿಎ ಸರ್ಕಾರ ಬೆಲೆ ಏರಿಕೆ ತಡೆಯಲು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಅದರ ಫಲವನ್ನು ಎನ್ಡಿಎ ಸರ್ಕಾರ ಉಣ್ಣುತ್ತಿದೆ. ರೇಲ್ವೆ ಪ್ರಯಾಣ ಮತ್ತು ಸರಕು ಸಾಗಣೆ ದರ ಹೆಚ್ಚಳವನ್ನು ಜೇಟ್ಲಿ ಸಮರ್ಥಿಸಿಕೊಂಡರು. ಉತ್ತಮ ಸೇವೆ ಬೇಕಿದ್ದರೆ ಹಣ ಪಾವತಿ ಮಾಡಬೇಕು ಎಂದರು. ಉತ್ತರಕ್ಕೆ ತೃಪ್ತಿಯಾಗದ ಕಾಂಗ್ರೆಸ್, ಬಿಎಸ್ಪಿ ಸಭಾತ್ಯಾಗ ಮಾಡಿದವು.
ಮಾತನಾಡಿದ ರಾಹುಲ್ ಗಾಂಧಿ
ಹತ್ತು ವರ್ಷಗಳ ಕಾಲ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಮೌನ ವಹಿಸಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸರ್ಕಾರದ ವಿರುದ್ಧ ದನಿಯೆತ್ತಿದ್ದಾರೆ. ಹಿಂದಿನ ಸಾಲಿನಲ್ಲಿ ಕುಳಿತುಕೊಳ್ಳುತ್ತಿರುವ ಕಾಂಗ್ರೆಸ್ ಉಪಾಧ್ಯಕ್ಷ ತನ್ನ ಪಕ್ಷದ ಇತರ ಸಂಸದರ ಜತೆ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. 'ಅಚ್ಛೇ ದಿನ್ ಆಯೇಗಾ; ಮೆಹೆಂಗಿ ದಿನ್ ಆಯೇಗಾ (ಒಳ್ಳೆಯ ದಿನಗಳು ಬರಲಿವೆ; ಅಗತ್ಯ ವಸ್ತುಗಳ ಬೆಲೆ ಹೆಚ್ಚಲಿವೆ) ಎಂದು ಘೋಷಣೆ ಕೂಗುತ್ತಿದ್ದರು. ಈ ಸಂದರ್ಭದಲ್ಲಿ ಅವರೂ ದನಿಯೆತ್ತಿದ್ದರು. ಈ ಬಗ್ಗೆ ಬಿಜೆಪಿ ನಾಯಕ ಆರ್.ಪಿ.ರೂಡಿ ಮಾತನಾಡಿ 'ಹತ್ತು ವರ್ಷಗಳ ಕಾಲ ಮೌನವಾಗಿದ್ದ ರಾಹುಲ್, ಈಗ ಬಿಜೆಪಿ ಸರ್ಕಾರದ ವಿರುದ್ಧ ಮಾತನಾಡಿದ್ದಾರೆ' ಎಂದು ಲೇವಡಿ ಮಾಡಿದ್ದಾರೆ