ಕೈಗಾರಿಕೆಗೆ ಪೂರಕ ಬಜೆಟ್
ಒಂದೇ ಮಾತಿನಲ್ಲಿ ಹೇಳುವುದಾದರೆ, ತುಂಬಾ ಒಳ್ಳೆಯ ಮತ ಪ್ರಗತಿಪರ ಬಜೆಟ್. ನಗರ ಮತ್ತು ಗ್ರಾಮೀಣ...
ಒಂದೇ ಮಾತಿನಲ್ಲಿ ಹೇಳುವುದಾದರೆ, ತುಂಬಾ ಒಳ್ಳೆಯ ಮತ ಪ್ರಗತಿಪರ ಬಜೆಟ್. ನಗರ ಮತ್ತು ಗ್ರಾಮೀಣ ಪ್ರದೇಶಗಳ ನಡುವೆ ತ್ವರಿತಗತಿಯ ಸಂಪರ್ಕ ಸಾಧಿಸುವ ಮೂಲಕ ಕೈಗಾರಿಕೆಗೆ ಪೂರಕವಾಗುವ ದೂರದೃಷ್ಟಿಯನ್ನಿಟ್ಟುಕೊಂಡು ಬಜೆಟ್ ರೂಪಿಸಲಾಗಿದೆ. ಚೆನ್ನೈ-ಬೆಂಗಳೂರು, ಮೈಸೂರು-ಬೆಂಗಳೂರು, ಹುಬ್ಬಳ್ಳಿ- ಬೆಂಗಳೂರು ಸೇರಿದಂತೆ ಬೆಂಗಳೂರಿನಿಂದ ವಿವಿಧ ನಗರಗಳಿಗೆ ಹೈಸ್ಪೀಡ್ ರೈಲು ಓಡಿಸಲು ನಿರ್ಧರಿಸಿರುವುದು ರಾಜ್ಯದ ಕೈಗಾರಿಕೆ ಬೆಳವಣಿಗೆಗೆ ಸಾಕಷ್ಟು ಅನುಕೂಲಕರವಾಗಿದೆ. ಹೈಸ್ಪೀಡ್ ರೈಲ್ವೆ ಸಂಪರ್ಕದ ಮೂಲಕ ಈಗ ಹತ್ತಿರದ ಗ್ರಾಮೀಣ ಭಾಗಕ್ಕೂ ಕೈಗಾರಿಕೆಗಳನ್ನು ತೆಗೆದುಕೊಂಡು ಹೋಗಲು ಸಾಧ್ಯವಾಗಲಿದೆ. ಹೊಸೂರು- ಬೆಂಗಳೂರು, ಯಶವಂತಪುರ- ನೆಲಮಂಗಲ, ಬೆಂಗಳೂರು- ರಾಮನಗರ, ಬೆಂಗಳೂರು- ಯಲಹಂಕ ಸೇರಿದಂತೆ ಉಪನಗರಗಳಿಗೆ ರೈಲ್ವೆ ಸಂಪರ್ಕ ಕಲ್ಪಿಸಲು ಬಜೆಟ್ನಲ್ಲಿ ಘೋಷಿಸಿರುವುದು ಬೆಂಗಳೂರಿನಂತಹ ಐಟಿ ನಗರಕ್ಕೆ ಹೆಚ್ಚು ಅನುಕೂಲಕರವಾಗಿದೆ. ಜನರು ಹೊರಪ್ರದೇಶಗಳಿಂದ ನಿತ್ಯ ನಗರಕ್ಕೆ ಸುಲಭವಾಗಿ ಕೆಲಸಕಾರ್ಯಗಳಿಗೆ ಬಂದು ಹೋಗಬಹುದು. ಇದು ಪ್ರಯಾಣಿಕರ ಖರ್ಚುವೆಚ್ಚಗಳ ದೃಷ್ಟಿಯಿಂದ ಮಾತ್ರವಲ್ಲ, ವಾಣಿಜ್ಯ-ವಹಿವಾಟಿನ ಬೆಳವಣಿಗೆಗೂ ಸಹಕಾರಿಯಾಗಲಿದೆ. ಇನ್ನು ರೈಲ್ವೆಯಲ್ಲಿ ಸ್ವಚ್ಛತೆ, ಆಹಾರದ ಗುಣಮಟ್ಟ ಕಾಪಾಡಲು ಈಗ ಖಾಸಗಿಯವರಿಗೆ ಅವಕಾಶ ನೀಡುವುದಾಗಿ ಹೇಳಲಾಗಿದೆ. ಇದರಿಂದ ಪ್ರಯಾಣಿಕರು ಬಯಸುವಂತಹ ಗುಣಮಟ್ಟದ ಆಹಾರ ಲಭ್ಯವಾಗಲಿದೆ. ರಾಷ್ಟ್ರೀಯ ಭದ್ರತೆಗೂ ಆದ್ಯತೆ ನೀಡಲಾಗಿದೆ. ಟಿಕೆಟ್ ಬುಕಿಂಗ್ ವ್ಯವಸ್ಥೆಯನ್ನು ಮತ್ತಷ್ಟು ಆಧುನೀಕರಣಗೊಳಿಸಲಾಗಿದೆ. ಇವೆಲ್ಲವೂ ಪ್ರಗತಿಪರವಾದ ನಿಲುವುಗಳು. ಆದರೆ ಅನುಷ್ಠಾನ ಹೇಗೋ ಕಾದು ನೋಡಬೇಕಿದೆ.
-ಎಸ್. ಸಂಪತ್ರಾಮನ್, ಅಧ್ಯಕ್ಷರು, ಎಫ್ಕೆಸಿಸಿಐ
ಪ್ರಗತಿಪರ, ದೂರದೃಷ್ಟಿಯ ಪ್ರತಿಬಿಂಬ
ಸದಾನಂದಗೌಡರ ಈ ಬಜೆಟ್ ಪ್ರಗತಿಪರ ಹಾಗೂ ದೂರದೃಷ್ಟಿ ಹೊಂದಿದೆ. ಸುರಕ್ಷತೆ, ಸ್ವಚ್ಛತೆ, ಹೈಸ್ಪೀಡ್ ರೈಲಿಗೆ ಒತ್ತು ನೀಡಿದ್ದಾರೆ. ಭಾರತದಲ್ಲಿ ಬುಲೆಟ್ ಟ್ರೈನ್ ಹಾಗೂ ಹೈಸ್ಪೀಡ್ ರೈಲುಗಳಿಗೆ ಆದ್ಯತೆ ನೀಡಿ ದಿಟ್ಟ ಹೆಜ್ಜೆ ಇಟ್ಟಿರುವುದು ಸ್ವಾಗತಾರ್ಹ. ರೈಲ್ವೆ ಸಿಬ್ಬಂದಿಯಲ್ಲದವರು ಕೂಡಾ ತರಬೇತಿ ಪಡೆದುಕೊಳ್ಳುವ ದೃಷ್ಟಿಯಲ್ಲಿ ವಿಶ್ವವಿದ್ಯಾಲಯ ಸ್ಥಾಪನೆ ಒಳ್ಳೆಯ ನಿರ್ಧಾರ. ಬೆಂಗಳೂರು ಕೋಚಿಂಗ್ ಟರ್ಮಿನಲ್ ಅಗತ್ಯತೆ ಇತ್ತು. ಬೈಯ್ಯಪ್ಪನಹಳ್ಳಿಗೆ ನೀಡಿರುವುದು ಉತ್ತಮ. ಉಪನಗರ ರೈಲು ಅತ್ಯುತ್ತಮ ನಿರ್ಧಾರ. ರಾಜ್ಯ ಹಾಗೂ ರೈಲ್ವೆ ಇಲಾಖೆ ಬೇಗ ಒಪ್ಪಂದ ಮಾಡಿಕೊಂಡು ಕೆಲಸ ಶುರು ಮಾಡಬೇಕು. ರೈಲ್ವೆ ಯೋಜನೆಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸುವ ಉದ್ದೇಶದಿಂದ ರೇಲ್ವೆ ಮಾನಿಟರಿಂಗ್ ಕಮಿಟಿ ಜಾರಿಗೆ ತರುವ ನಿರ್ಧಾರವೂ ಒಳ್ಳೆಯದೇ.
-ಪ್ರಕಾಶ್ ಮಂಡೂತ್, ರೇಲ್ವೆ ಬಳಕೆದಾರರ ಸಲಹಾ ಸಮಿತಿ ಮಾಜಿ ಸದಸ್ಯ
ಸಮಾಧಾನಕರವಾಗಿಲ್ಲ
ರೈಲ್ವೆ ಬಜೆಟ್ ಸಮಾಧಾನಕರವಾಗಿಲ್ಲ. ಅತಿ ಹೆಚ್ಚು ರೈಲ್ವೆ ದಟ್ಟಣೆ ಇರುವ ಬೆಂಗಳೂರು-ಗುತ್ತಿ ಮಾರ್ಗ ಡಬ್ಲಿಂಗ್ ಬಗ್ಗೆ ಕ್ರಮಲಿಲ್ಲ. ಚರ್ಚೆ ವೇಳೆ ಈ ಬಗ್ಗೆ ಪ್ರಸ್ತಾಪಿಸಬೇಕು. ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಿಲ್ಲ. ಎಂಜಿನ್ಗಳನ್ನು ಹವಾನಿಯಂತ್ರಿತವಾಗಿ ಮಾಡುವ ವಿಷಯ ಹಿಂದಿನ ಬಜೆಟ್ನಲ್ಲಿ ಘೋಷಿಸಲಾಗಿತ್ತು. ಇಲಾಖೆಯಲ್ಲಿ 3 ಲಕ್ಷ ಹುದ್ದೆಗಳು ಖಾಲಿ ಇವೆ. ಈ ಪೈಕಿ 1.5 ಲಕ್ಷ ಹುದ್ದೆಗಳು ಸುರಕ್ಷತಾ ವಿಭಾಗದಲ್ಲೇ ಇದ್ದು ಅವುಗಳ ಭರ್ತಿಗೆ ಪ್ರಸ್ತಾಪವಿಲ್ಲ. 85 ಸಾವಿರ ಲೋಕೋ ಪೈಲಟ್ಗಳ ಹುದ್ದೆಗಳ ಪೈಕಿ ಖಾಲಿ ಇರುವ 20 ಸಾವಿರ ಹುದ್ದೆಗಳ ಭರ್ತಿ ಮಾತೂ ಇಲ್ಲ. ಇದರಿಂದಾಗಿ ಲೋಕೋಪೈಲಟ್ಗಳು 12 ತಾಸಿಗೂ ಅಧಿಕ ಕಾಲ ಕಾರ್ಯ ನಿರ್ವಹಿಸಬೇಕಾಗಿದ್ದು, ಸುರಕ್ಷತೆ ನಿರ್ಲಕ್ಷ್ಯಿಸಲಾಗಿದೆ. 11,560 ಮಾನವರಹಿತ ಲೆವೆಲ್ ಕ್ರಾಸಿಂಗ್ಗಳಲ್ಲಿ ರೈಲ್ವೆ ಮೇಲುಸೇತುವೆ ಹಾಗೂ ಕೆಳಸೇತುವೆ ನಿರ್ಮಿಸುವುದಾಗಿ ಘೋಷಿಸಿದ್ದು ಅದಕ್ಕೆ ಬೇಕಾಗುವ 50 ಸಾವಿರ ಕೋಟಿ ಹಣ ಎಲ್ಲಿಂದ ತರಲಾಗುತ್ತದೆ ಎನ್ನುವ ಬಗ್ಗೆ ಮಾಹಿತಿ ಇಲ್ಲ.
-ಸಿ.ಸುನೀಶ್, ಅಖಿಲ ಭಾರತ ಲೋಕೋಪೈಲಟ್ ಸಿಬ್ಬಂದಿ ಸಂಘದ ಕಾರ್ಯದರ್ಶಿ
ರೈಲ್ವೆ ಅಭಿವೃದ್ಧಿಯ ಪ್ರಸ್ತಾಪ ಮಾಡಲಾಗಿದೆ. ಆದರೆ ಆರ್ಥಿಕ ಮೂಲ ಹಾಗೂ ಬಂಡವಾಳ ಹೂಡಿಕೆ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ಹೊಂದಿಲ್ಲ. ಇದರಿಂದ ಬಜೆಟ್ನಲ್ಲಿ ಪ್ರಸ್ತಾಪವಾಗಿರುವುದು ಅನುಷ್ಠಾನಕ್ಕೆ ಬುರುವುದು ಅನುಮಾನ.
-ಮಾಯಾವತಿ, ಉತ್ತರಪ್ರದೇಶ ಮಾಜಿ ಮುಖ್ಯಮಂತ್ರಿ
ಹಿಂದಿನ ಸರ್ಕಾರಗಳ ಎಡವಟ್ಟಿನಿಂದ ಇಂದು ಈ ಪರಿಸ್ಥಿತಿ ಎದುರಾಗಿದೆ. ಇಲಾಖೆಯಲ್ಲಿ ಪಾರದರ್ಶಕ ಆಡಳಿತ ತರಲು ಹಾಗೂ ದೇಶದ ಜನರೆದುರು ವಾಸ್ತವಿಕ ಚಿತ್ರಣ ತೆರೆದಿಡುವ ಪ್ರಯತ್ನ ಮಾಡಿರುವ ಪ್ರಧಾನಿ ಹಾಗೂ ರೈಲ್ವೆ ಸಚಿವರಿಗೆ ಅಭಿನಂದನೆ ಸಲ್ಲಿಸುತ್ತೇನೆ.
- ಜಯಲಲಿತಾ, ತಮಿಳುನಾಡು ಮುಖ್ಯಮಂತ್ರಿ
ರೈಲ್ವೆ ಬಜೆಟ್ನಲ್ಲಿ ಯಾವುದೇ ಹೊಸತನವಿಲ್ಲ. ಅಚ್ಛೇ ದಿನ್ ಯಾವತ್ತು ಬರುತ್ತದೆ ಎನ್ನುವುದು ಗೊತ್ತಿಲ್ಲ. ದೇಶದ ಜನರನ್ನು ಬಿಜೆಪಿ ದಿಕ್ಕು ತಪ್ಪಿಸುತ್ತಿದೆ.
-ನಿತೀಶ್ ಕುಮಾರ್, ಮಾಜಿ ರೈಲ್ವೆ ಸಚಿವ
ಶ್ರೀಮಂತರ ಪರವಾದ ಬಜೆಟ್ ಮಂಡಿಸಿರುವ ಸದಾನದಂಗೌಡರು, ಗುಜರಾತ್ಗೆ ಪ್ರಾಶಸ್ತ್ಯ ನೀಡುವ ಮೂಲಕ ಪ್ರಧಾನಿ ಮೆಚ್ಚಿಸಲು ಮುಂದಾಗಿದ್ದಾರೆ. ಬುಲೆಟ್ ರೈಲು ಯೋಜನೆಗೆ ಕೇವಲ 100 ಕೋಟಿ ನೀಡಲಾಗಿದ್ದು, ಇದರಿಂದ ಕೇವಲ 5 ಕಿ.ಮೀ ಮಾತ್ರ ಮಾರ್ಗ ನಿರ್ಮಿಸಬಹುದಾಗಿದೆ. ಇದು ಕೇವಲ ಹೇಳಿಕೆಗಳ ಬಜೆಟ್.
-ಮಲ್ಲಿಕಾರ್ಜುನ ಖರ್ಗೆ, ಮಾಜಿ ರೈಲ್ವೆ ಸಚಿವ
ನಿರಾಶಾದಾಯಕ ಬಜೆಟ್ ಇದು. ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳನ್ನು ನಿರ್ಲಕ್ಷಿಸಲಾಗಿದೆ.
- ರಾಹುಲ್ ಗಾಂಧಿ, ಎಐಸಿಸಿ ಉಪಾಧ್ಯಕ್ಷ
ಪ್ರಣಾಳಿಕೆಯಲ್ಲಿ ಜನರಿಗೆ ಆಶಾ ಗೋಪುರ ತೋರಿಸಿದ್ದ ಬಿಜೆಪಿ, ಈಗ ಬೇಡಿಕೆ ಈಡೇರಿಸಲು ಮರೆತಿದೆ. ಪಶ್ಚಿಮ ಬಂಗಾಳವನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಲಾಗಿದೆ.
- ಮಮತಾ ಬ್ಯಾನರ್ಜಿ,ಪಶ್ಚಿಮಬಂಗಾಳ ಮುಖ್ಯಮಂತ್ರಿ