ಖಮರುಲ್ ಉತ್ತರಕ್ಕೆ ಮತ್ತೆ ಬಿಜೆಪಿ ಬಹಿಷ್ಕಾರ
ಸಚಿವ ಖಮರುಲ್ ಇಸ್ಲಾಂ ವಿರುದ್ಧ ಬಿಜೆಪಿ ನಡೆಸುತ್ತಿರುವ ಉತ್ತರ ಬಹಿಷ್ಕಾರ ಹೋರಾಟ ಮಂಗಳವಾರವೂ ...
ವಿಧಾನಪರಿಷತ್ತು: ಸಚಿವ ಖಮರುಲ್ ಇಸ್ಲಾಂ ವಿರುದ್ಧ ಬಿಜೆಪಿ ನಡೆಸುತ್ತಿರುವ ಉತ್ತರ ಬಹಿಷ್ಕಾರ ಹೋರಾಟ ಮಂಗಳವಾರವೂ ಮುಂದುವರಿಯಿತು.
ಸಚಿವರೇ ಆರೋಪಿ ಸ್ಥಾನದಲ್ಲಿರುವುದರಿಂದ ಅವರು ಉತ್ತರ ನೀಡಬಾರದು. ಕೂಡಲೇ ರಾಜೀನಾಮೆ ಸಲ್ಲಿಸಬೇಕೆಂದು ಪ್ರತಿಪಕ್ಷ ಬಿಜೆಪಿ ಆಗ್ರಹಿಸಿತು. ಇದರಿಂದ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಕೋಲಾಹಲ ಉಂಟಾಗಿತ್ತು.
ಸದನ ಆರಂಭವಾಗುತ್ತಿದ್ದಂತೆ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಆರ್.ಕೆ. ಸಿದ್ದರಾಮಣ್ಣ, ಅಲ್ಪಸಂಖ್ಯಾತ ಕಲ್ಯಾಣ ಮತ್ತು ವಕ್ಫ್ ಸಚಿವ ಖಮರುಲ್ ಇಸ್ಲಾಂ ಅವರಿಗೆ ಪ್ರಶ್ನೆ ಕೇಳುವ ಸರದಿ ಬಂದಿತು.
ಆದರೆ ಸಿದ್ದರಾಮಣ್ಣ, ಸಚಿವರು ಹಕ್ಕುಚ್ಯುತಿ ಆರೋಪ ಎದುರಿಸುತ್ತಿರುವುದರಿಂದ ಅವರು ರಾಜೀನಾಮೆ ನೀಡಬೇಕು. ಅಲ್ಲಿವರೆಗೂ ಅವರ ಇಲಾಖೆಗೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳನ್ನು ಕೇಳುವುದಿಲ್ಲ ಎಂದರು.
ಆಗ ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ, ಸಚಿವರು ಬಂದಿಲ್ಲ. ಅವರ ಪರವಾಗಿ ನಾನು ಉತ್ತರಿಸುತ್ತೇನೆ ಎಂದರು. ಆದರೂ ಬಿಜೆಪಿ ಸದಸ್ಯರು ಒಪ್ಪಲಿಲ್ಲ. ಬಿಜೆಪಿಯ ಗೋ.ಮಧುಸೂದನ್ ಮಾತನಾಡಿ, ಹಕ್ಕುಚ್ಯುತಿ ಎದುರಿಸುತ್ತಿರುವ ಸಚಿವರಿಂದ ಉತ್ತರ ಬಯಸುವುದಿಲ್ಲ. ಮೊದಲು ಹಕ್ಕುಚ್ಯುತಿ ಬಗ್ಗೆ ಚರ್ಚೆ ಆಗಬೇಕು. ಅದಕ್ಕೆ ಸಭಾಪತಿ ಅವರು ಅವಕಾಶ ನೀಡಬೇಕು ಎಂದು ವಿನಂತಿಸಿದರು. ಇದಕ್ಕೆ ವಿರುದ್ಧವಾಗಿ ವಾದಿಸಿದ ಸಭಾನಾಯಕ ಎಸ್.ಆರ್.ಪಾಟೀಲ್, ಹಕ್ಕುಚ್ಯುತಿ ವರದಿ ಮಂಡನೆಯಾದ ತಕ್ಷಣ ಸಚಿವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದು ಸರಿಯಲ್ಲ. ವರದಿ ಬಗ್ಗೆ ಚರ್ಚೆ ನಡೆಯದು, ಸದನ ತೀರ್ಮಾನ ಕೈಗೊಳ್ಳುವ ಮುನ್ನವೇ ಸಚಿವರ ಉತ್ತರ ನಿರಾಕರಿಸುವುದು ಸರಿಯಲ್ಲ. ಇದು ಕೆಟ್ಟ ಸಂಪ್ರದಾಯಕ್ಕೆ ಕಾರಣವಾಗುತ್ತಿದೆ ಎಂದು ಹೇಳಿದರು.
ಪ್ರತಿಪಕ್ಷ ನಾಯಕ ಈಶ್ವರಪ್ಪ ಹಾಗೂ ಬಿಜೆಪಿಯ ಅನೇಕ ಸದಸ್ಯರು ಎದ್ದುನಿಂತು ಹಕ್ಕುಚ್ಯುತಿ ಕುರಿತ ವರದಿ ಚರ್ಚೆಗೆ ಸಮಯ ನಿಗದಿ ಮಾಡಬೇಕೆಂದು ಸಭಾಪತಿ ಅವರನ್ನು ಒತ್ತಾಯಿಸಿದರು. ಇದನ್ನು ಸಚಿವರಾದ ಕೃಷ್ಣಭೈರೇಗೌಡ, ಮಹಾದೇವಪ್ರಸಾದ್ ಸೇರಿದಂತೆ ಆಡಳಿತ ಪಕ್ಷದ ಸದಸ್ಯರು ವಿರೋಧಿಸಿದರು. ಈ ಸಂದರ್ಭದಲ್ಲಿ ಉಭಯ ಪಕ್ಷದ ಸದಸ್ಯರ ನಡುವೆ ಚಕಮಕಿ ಉಂಟಾಗಿ ಗದ್ದಲ ಜೋರಾಯಿತು.
ಈ ಮಧ್ಯೆ ಕಾಂಗ್ರೆಸ್ನ ಉಗ್ರಪ್ಪ, ಹಕ್ಕುಚ್ಯುತಿ ಬಗ್ಗೆ ಸದನಕ್ಕೆ ಸಲ್ಲಿಸಿರುವ ವರದಿ ಬಗ್ಗೆಯೇ ನನಗೆ ಆಕ್ಷೇಪವಿದೆ. ಏಕೆಂದರೆ, ಇಲ್ಲಿ ಹಕ್ಕುಚ್ಯುತಿ ಆರೋಪ ಮಾಡಿದವರನ್ನೇ ಹಕ್ಕುಬಾಧ್ಯತಾ ಸಮಿತಿ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಹೀಗಾಗಿ ವರದಿ ಬಗ್ಗೆಯೇ ನನಗೆ ಅಸಮಾಧಾನವಿದೆ ಎಂದರು.
ಇದರಿಂದ ಸಿಟ್ಟಿಗೆದ್ದ ಗೋ.ಮಧುಸೂದನ್, ನಮ್ಮ ಸಮಿತಿ ವರದಿಯೇ ಸರಿ ಇಲ್ಲ ಎನ್ನುವುದು ಸರಿಯಲ್ಲ. ಈ ರೀತಿ ಹೇಳಿಕೆ ನೀಡುವುದು ಕೂಡ ಹಕ್ಕುಚ್ಯುತಿಯಾಗುತ್ತದೆ ಎಂದು ತಿರುಗೇಟು ನೀಡಿದರು.
ಆಗ ಸಭಾಪತಿ ಶಂಕರಮೂರ್ತಿ ಮಧ್ಯಪ್ರವೇಶಿಸಿ, ವರದಿ ಬಗ್ಗೆ ಉಗ್ರಪ್ಪ ಹಾಗೆಲ್ಲಾ ಹೇಳಬಾರದು ಎಂದರು. ಅಷ್ಟೊತ್ತಿಗೆ ಪ್ರತಿಪಕ್ಷ ಉಪ ನಾಯಕ ಕೆ.ಬಿ.ಶ್ಯಾಣಪ್ಪ, ಸಚಿವರ ಪ್ರಶ್ನೆ ಬಿಟ್ಟು ಈಗ ಮುಂದಿನ ಪ್ರಶ್ನೆ ಕೇಳುವುದಕ್ಕೆ ಅವಕಾಶ ಮಾಡಿ ಎಂದರು. ನಂತರ ಪ್ರಶ್ನೋತ್ತರ ಕಲಾಪ ಮುಂದುವರಿಯಿತು.