ಧಾರವಾಡದಲ್ಲಿ ಕೆಎಟಿ ಪೀಠ ಸ್ಥಾಪನೆ 11ರಂದು ನಿರ್ಧಾರ
ಕರ್ನಾಟಕ ಆಡಳಿತ ನ್ಯಾಯಮಂಡಳಿಯ ಮತ್ತೊಂದು ಪೀಠವನ್ನು ಧಾರವಾಡದಲ್ಲಿ ಸ್ಥಾಪಿಸುವ ಬಗ್ಗೆ ಶುಕ್ರವಾರ...
ವಿಧಾನಪರಿಷತ್ತು: ಕರ್ನಾಟಕ ಆಡಳಿತ ನ್ಯಾಯಮಂಡಳಿಯ ಮತ್ತೊಂದು ಪೀಠವನ್ನು ಧಾರವಾಡದಲ್ಲಿ ಸ್ಥಾಪಿಸುವ ಬಗ್ಗೆ ಶುಕ್ರವಾರ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ.
ಜೆಡಿಎಸ್ನ ಬಸವರಾಜ ಹೊರಟ್ಟಿ, ಧಾರವಾಡ ಹೈಕೋರ್ಟ್ ಪೀಠಕ್ಕೆ ಬೇಕಿರುವ ಸೌಲಭ್ಯದ ಬಗ್ಗೆ ಗಮನ ಸೆಳೆದಾಗ ಸಚಿವರು ಈ ಬಗ್ಗೆ ಭರವಸೆ ನೀಡಿದರು.
ಆಡಳಿತ ನ್ಯಾಯಮಂಡಳಿ ಸದ್ಯ ಬೆಂಗಳೂರಿನಲ್ಲಿ ಮಾತ್ರ ಇದೆ. ಇದೇರೀತಿ ಇನ್ನೂ 2 ಪೀಠಗಳನ್ನು ಸ್ಥಾಪಿಸಲು ಪ್ರಸ್ತಾಪಿಸಲಾಗುತ್ತಿದೆ. ಬಾಕಿ ಇರುವ ಎಲ್ಲಾ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥ ಮಾಡಲು ಇದರಿಂದ ಅನುಕೂಲವಾಗುತ್ತದೆ. ಆದ್ದರಿಂದ ಶುಕ್ರವಾರ ಅಧಿಕಾರಗಳ ಸಭೆ ಕರೆಯಲಾಗಿದ್ದು, ಸಭೆಯಲ್ಲಿ ಪೀಠ ಸ್ಥಾಪನೆ ಬಗ್ಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಜಯಚಂದ್ರ ಹೇಳಿದರು.
ಇದಕ್ಕೂ ಮುನ್ನ ಬಸವರಾಜ ಹೊರಟ್ಟಿ ಮಾತನಾಡಿ, ಹೈಕೋರ್ಟ್ ಪೀಠದಲ್ಲಿರುವ ವಕೀಲರ ಸಂಘದ ಕಾರ್ಯಾಲಯಕ್ಕೆ ಮೂಲಸೌಕರ್ಯಗಳಿಲ್ಲ. ಈ ಬಗ್ಗೆ ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ವಕೀಲರ ಸಂಘದ ಕಾರ್ಯಾಲಯದಲ್ಲಿರುವ ಅವ್ಯವಸ್ಥೆ, ಅಶುಚಿತ್ವವನ್ನು ಬಿಡಿಸಿಟ್ಟ ಅವರು, ವಕೀಲರು, ಕಕ್ಷಿದಾರರು ಅನುಭವಿಸುತ್ತಿರುವ ಕಷ್ಟವನ್ನು ಸರ್ಕಾರಕ್ಕೆ ವಿವರಿಸಿದರು. ಇದೇವೇಳೆ ಬಿಜೆಪಿಯ ಗೋ.ಮಧುಸೂದನ್ ಮೈಸೂರು ಕೋರ್ಟ್ನಲ್ಲಿ ಸೌಲಭ್ಯ ಹೆಚ್ಚಿಸಬೇಕೆಂದು ಆಗ್ರಹಿಸಿದರೆ, ಕಾಂಗ್ರೆಸ್ನ ಉಗ್ರಪ್ಪ, ಬೆಂಗಳೂರು ಹೈಕೋರ್ಟ್ನಲ್ಲಿ ಸುಪ್ರೀಂಕೋರ್ಟ್ನಲ್ಲಿರುವಂತೆ ಲಾಯರ್ಸ್ ಚೇಂಬರ್ ವ್ಯವಸ್ಥೆ ಮಾಡಬೇಕೆಂದು ಕೇಳಿದರು. ಇದೆಲ್ಲದಕ್ಕೂ ಸಚಿವರು ಪರಿಶೀಲಿಸಲಾಗುವುದು ಎಂದಷ್ಟೇ ಹೇಳಿದರು.