ಬಜೆಟ್ನಲ್ಲೂ ನಮೋ ಸೂತ್ರ!
ಹೊಸ ಯೋಜನೆ ಘೋಷಣೆ ಮಾಡದೆ, ಪ್ರಯಾಣಿಕರ ಸುರಕ್ಷತೆ, ಭದ್ರತೆ ಮತ್ತು ಸ್ವಚ್ಛತೆಗೆ ಆದ್ಯತೆ ನೀಡಿರುವ...
ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ: ಹೊಸ ಯೋಜನೆ ಘೋಷಣೆ ಮಾಡದೆ, ಪ್ರಯಾಣಿಕರ ಸುರಕ್ಷತೆ, ಭದ್ರತೆ ಮತ್ತು ಸ್ವಚ್ಛತೆಗೆ ಆದ್ಯತೆ ನೀಡಿರುವ ಸದಾನಂದಗೌಡರು ಚೊಚ್ಚಲ ಬಜೆಟ್ನಲ್ಲಿ ಪ್ರಧಾನಿ ನರೇಂದ್ರಮೋದಿ ಪ್ರಣೀತ ಅಭಿವೃದ್ಧಿ ಸೂತ್ರವನ್ನು ಚಾಚೂ ತಪ್ಪದೇ ಪಾಲಿಸಿದ್ದಾರೆ.
ರೈಲುಗಳ ವೇಗಕ್ಕೆ ಒತ್ತು ನೀಡಿ, ಸಂಪನ್ಮೂಲ ಕ್ರೋಡೀಕರಣಕ್ಕೆ ಆದ್ಯತೆ ನೀಡಿರುವ ಸದಾನಂದಗೌಡರು ಕಾಲಮಿತಿ ಯೋಜನೆ ಅನುಷ್ಠಾನಕ್ಕೂ ಮುಂದಾಗಿದ್ದಾರೆ.
ಮಹಿಳಾ ಸುರಕ್ಷತೆಗೆ ಹೆಚ್ಚು ಒತ್ತು ನೀಡಿ ಆರ್ಪಿಎಫ್ಗೆ 4000 ಮಹಿಳಾ ಸಿಬ್ಬಂದಿ ನೇಮಿಸುವ ಘೋಷಣೆ ಮಾಡಿದ್ದಾರೆ. ಅವರ ಇಡೀ ಬಜೆಟ್ ಕೇಂದ್ರೀಕೃತವಾಗಿರುವುದು ಸುರಕ್ಷತೆ, ಭದ್ರತೆ, ವೇಗ, ಯೋಜನೆಗಳ ಸಕಾಲಿಕ ಅನುಷ್ಠಾನ, ಶುಚಿ ಪರಿಸರ- ರುಚಿ ಆಹಾರ ಸೇರಿದಂತೆ ಪ್ರಯಾಣಿಕರ ಸೌಲಭ್ಯ, ಹಣಕಾಸು ಶಿಸ್ತು, ಸಂಪನ್ಮೂಲ ಕ್ರೋಡೀಕರಣ, ಮಾಹಿತಿ
ತಂತ್ರಜ್ಞಾನದ ವಿಸ್ತೃತ ಬಳಕೆ ಮತ್ತು ಆಡಳಿತದಲ್ಲಿ ಪಾರದರ್ಶಕತೆ ಮತ್ತು ವ್ಯವಸ್ಥೆ ಸುಧಾರಣೆಗಳತ್ತ.
ಟಿ- ಸೂತ್ರ: ನರೇಂದ್ರಮೋದಿ ಅವರು ಗೋವಾ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ಬ್ರಾಂಡ್ ಇಂಡಿಯಾಕ್ಕಾಗಿ ಘೋಷಿಸಿದ ಪಂಚ- ಟಿ ಸೂತ್ರವನ್ನು ಧಾರಾಳವಾಗಿ ಅಳವಡಿಸಿಕೊಂಡಿದ್ದಾರೆ.
ಟೂರಿಸಂ ಮತ್ತು ಟೆಕ್ನಾಲಜಿ ಮತ್ತು ಟ್ರೇಡ್ಗೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ಹೀಗಾಗಿಯೇ 'ರೈಲ್ವೆ ಟೂರಿಸಂ' ಎಂಬ ಹೊಸ ಪರಿಕಲ್ಪನೆಯನ್ನು ಅನುಷ್ಠಾನನಗೊಳಿಸುತ್ತಿದ್ದಾರೆ. ಅದರಲ್ಲೂ ಜನ ಜಾತ್ರೆ ಇರುವ ಯಾತ್ರಾಸ್ಥಳಗಳಿಗೆ ಹೊಸ ರೈಲುಗಳನ್ನು ಬಿಟ್ಟಿದ್ದಾರೆ. ಇಂಟರ್ನೆಟ್ನಲ್ಲಿ ಒಂದೇ ನಿಮಿಷಕ್ಕೆ 7 ಸಾವಿರ ಟಿಕೆಟ್ ಬುಕಿಂಗ್ ಮಾಡುವ ವ್ಯವಸ್ಥೆ, ಏಕಕಾಲಕ್ಕೆ 1.20 ಲಕ್ಷ ಜನರು ರೈಲ್ವೆ ಮಾಹಿತಿ ಪಡೆಯುವ ವ್ಯವಸ್ಥೆ, ಪ್ರಯಾಣಿಕರ ಮೊಬೈಲ್ನಲ್ಲೇ ಅವರು ತಲುಪಿದ ನಿಲ್ದಾಣಗಳ ಮಾಹಿತಿ ನೀಡುವ ವ್ಯವಸ್ಥೆ ಜಾರಿಗೆ ಬರುತ್ತಿದೆ. ತಂತ್ರಜ್ಞಾನ ಬಳಕೆ ಹೆಚ್ಚಿದಂತೆಲ್ಲ ರೈಲ್ವೆ ಕಾರ್ಯಕ್ಷಮತೆ ಹೆಚ್ಚುತ್ತದೆ.
ಸಂಪನ್ಮೂಲ ಕೊರತೆ: ಎಲ್ಲ ಘೋಷಿತ ಯೋಜನೆಗಳ ಅನುಷ್ಠಾನಕ್ಕೆ 5 ಲಕ್ಷ ಕೋಟಿ ರು.ಗಳ ಅಗತ್ಯವಿದೆ. ಆದರೆ, ಕಳೆದ ಮೂರು ದಶಕಗಳಲ್ಲಿ ಘೋಷಿತ 674 ಯೋಜನೆಗಳ ಪೈಕಿ 317 ಯೋಜನೆ ಮಾತ್ರ ಪೂರ್ಣಗೊಂಡಿವೆ. ರೈಲ್ವೆ ಆದಾಯ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. 2007-08ರಲ್ಲಿ 11,754 ಕೋಟಿಗೂ ಹೆಚ್ಚುವರಿ ಇದ್ದದ್ದು ಪ್ರಸಕ್ತ ಸಾಲಿನಲ್ಲಿ ಈ ಮೊತ್ತ 602 ಕೋಟಿ ರುಪಾಯಿಗೆ ಕುಸಿದಿದೆ. ಈ ಹಿನ್ನೆಲೆಯಲ್ಲೇ ದರ ಪರಿಷ್ಕರಣೆ ಜತೆ ಜತೆಗೆ ಪ್ರಯಾಣಿಕರ ಮತ್ತು ಸರಕು ಸಾಗಣೆ ರೈಲುಗಳ ಸಮರ್ಥ ಬಳಕೆಗೆ ಹೆಚ್ಚು ಒತ್ತು ನೀಡಲಾಗಿದೆ. ಪ್ರತಿ ರೈಲಿನ ಸರಾಸರಿ ವೆಚ್ಚ ತಗ್ಗಿಸಿ ಆದಾಯ ಹಿಗ್ಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ.
ಸುರಕ್ಷತೆಗಾಗಿ ರೈಲು ಮೇಲು ಮತ್ತು ಕೆಳಸೇತುವೆ ನಿಮಾರ್ಣಕ್ಕೆ 1785 ಕೋಟಿ ರುಪಾಯಿ ಮೀಸಲಿಡಲಾಗಿದೆ. ರೈಲು ಅಪಘಾತಗಳನ್ನು ತಡೆಯಲು ಅಲ್ಟ್ರಾ ಸೋನಿಕ್ ಫ್ಲಾ ಟೆಕ್ಷನ್ ಸಿಸ್ಟಮ್ ಜಾರಿಯಿಂದ ಅಪಘಾತಗಳ ಪ್ರಮಾಣ ಗಣನೀಯವಾಗಿ ತಗ್ಗುವ ಸಾಧ್ಯತೆ ಇದೆ. ಮೆಟ್ರೋಗಳಲ್ಲಿರುವಂತೆ
ಸ್ವಯಂಚಾಲಿತ ಬಾಗಿಲು ವ್ಯವಸ್ಥೆಯಿಂದ ಸಾಕಷ್ಟು ಸುರಕ್ಷತೆ ಒದಗಲಿದೆ. ಸದಾನಂದಗೌಡರ ತಂತ್ರಜ್ಞಾನ ಅಳವಡಿಕೆ ವೇಗ ಎಷ್ಟಿದೆ ಎಂದರೆ- ಮುಂದಿನ ಐದು ವರ್ಷಗಳಲ್ಲಿ ಅವರು ರೈಲ್ವೆಯಲ್ಲಿ ಕಾಗದ ರಹಿತ ಕಚೇರಿ ವ್ಯವಸ್ಥೆ ಜಾರಿಗೊಳಿಸಲಿದ್ದಾರೆ.
ಸ್ಮಾರ್ಟ್ಫೋನ್ ಬಳಕಗೆ ವೈ-ಫೈ ಸೌಲಭ್ಯ, ರೈಲು ಸಂಚಾರದ ತಕ್ಷಣದ ಮಾಹಿತಿ ಸೇರಿದಂತೆ ಮೆಟ್ರೋ ಟೈನ್ಗಳ ಮಟ್ಟದಲ್ಲಿ ತಂತ್ರಜ್ಞಾನ ಜಾರಿಗೆ ಸದಾನಂದಗೌಡರು ಮುಂದಾಗಿದ್ದಾರೆ.
ಸಂಪನ್ಮೂಲ ಕ್ರೋಡೀಕರಣಕ್ಕೆ ಅವರು ಮತ್ತಷ್ಟು ಒತ್ತು ನೀಡಬೇಕಿದೆ. ರೈಲ್ವೆ ಆಸ್ತಿಗಳ ಸಮರ್ಥ ಬಳಕೆ ಪ್ರಸ್ತಾಪಕ್ಕೆ ಅವರು ಮರುಜೀವ ನೀಡಬೇಕಿದೆ. ಬುಲೆಟ್ ಟ್ರೈನ್ಗಾಗಿ ಅವರು 100 ಕೋಟಿ ಒದಗಿಸಿದ್ದಾರೆ. ಯೋಜನೆಯ ಬೃಹದಾಕಾರ ನೋಡಿದರೆ, ಒದಗಿಸಿರುವ ಹಣ ಏನೇನೂ ಸಾಲದು. ಆದರೆ, ಉತ್ತಮ ಆರಂಭವಾದರೆ, ಅರ್ಧ ಕಾರ್ಯ ಮುಗಿದಂತೆ, ಈ ವರ್ಷ ಶಭಾರಂಭ ಮಾಡಿದ್ದಾರೆ, ಮುಂದಿನ ವರ್ಷ ಈ ಯೋಜನೆಗೆ ಅವರು 10000 ಕೋಟಿ ಒದಗಿಸಿದರೂ ಅಚ್ಚರಿ ಪಡಬೇಕಿಲ್ಲ. ಕಾರ್ಯಸಾಧ್ಯವಲ್ಲದ ಯಾವೊಂದು ಯೋಜನೆಯನ್ನೂ ಅವರು ಪ್ರಕಟಿಸಿಲ್ಲ. ಮೊದಲ ಹೆಜ್ಜೆಯಲ್ಲೇ ಸದಾನಂದಗೌಡರು ದಾಪುಗಾಲು ಹಾಕುವ ಮುನ್ಸೂಚನೆ ನೀಡಿದ್ದಾರೆ.