ಬಿರಿಯಾನಿಗೆ ವಿಶ್ವನಾಥ್ ಪುತ್ರನ ದಾಂದಲೆ
ಬಿರಿಯಾನಿ ಕೊಡದ್ದಕ್ಕೆ ಮಾಜಿ ಸಂಸದ ಎಚ್. ವಿಶ್ವನಾಥ್ ಪುತ್ರ ಪೂರ್ವಜ್ ಮತ್ತು ಸ್ನೇಹಿತರು ಹುಣಸೂರಿನ...
ಹುಣಸೂರು/ಮೈಸೂರು: ಬಿರಿಯಾನಿ ಕೊಡದ್ದಕ್ಕೆ ಮಾಜಿ ಸಂಸದ ಎಚ್. ವಿಶ್ವನಾಥ್ ಪುತ್ರ ಪೂರ್ವಜ್ ಮತ್ತು ಸ್ನೇಹಿತರು ಹುಣಸೂರಿನ ಹೋಟೆಲ್ವೊಂದರಲ್ಲಿ ದಾಂದಲೆ ನಡೆಸಿದ ಘಟನೆ ಸೋಮವಾರ ರಾತ್ರಿ ನಡೆದಿದೆ.
ಮೈಸೂರು- ಮಂಗಳೂರು ರಸ್ತೆಯ ಬೈಪಾಸ್ನಲ್ಲಿರುವ ಹಳ್ಳಿಮನೆ ಹೋಟೆಲ್ನಲ್ಲಿ ರಾತ್ರಿ 10.30ಕ್ಕೆ ಪೂರ್ವಜ್ ಮತ್ತು ಸ್ನೇಹಿತರ ಗುಂಪು ಬಿರಿಯಾನಿ ಕೇಳಿದೆ. ಖಾಲಿಯಾಗಿದೆ ಎಂದು ನೌಕರರು ಹೇಳಿದಾಗ ಊಟ ಕೇಳಿದ್ದಾರೆ. ಊಟದ ಸಮಯ ಮುಗಿದಿದಿದ್ದರಿಂದ ನೌಕರರು ಇಲ್ಲ ಎಂದಿದ್ದಾರೆ. ಆಗ ಈ ವಿಚಾರವಾಗಿ ಪೂರ್ವಜ್ ಗೆಳೆಯರು ಮತ್ತು ನೌಕರರ ನಡುವೆ ಮಾತಿನ ಚಕಮಕಿ ನಡೆದಿದೆ. ನಂತರ ಹೋಟೆಲ್ ಒಳಗೆ ನುಗ್ಗಿದ ಪೂರ್ವಜ್ ಮತ್ತು ಗೆಳೆಯರು ಕುರ್ಚಿ, ಹೂವಿನ ಕುಂಡಗಳನ್ನು ಒಡೆದು ಹಾಕಿದ್ದಾರೆ.
ಆವರಣದಲ್ಲಿದ್ದ ಹುಲ್ಲಿನ ಹಟ್ಟಿಗೆ ಬೆಂಕಿ ಹಚ್ಚಿದ್ದಾರೆ. ತಡೆಯಲು ಹೋದ ಕ್ಯಾಶಿಯರ್ ಮಹೇಶ್, ಸರ್ವರ್ ಕಿರಣ್ ಮೇಲೂ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಹುಣಸೂರು ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಣಕಾಸು ವ್ಯವಹಾರ: ಹಳ್ಳಿಮನೆ ಮಾಲೀಕ ಸಂದೇಶ್, ಹೋಟೆಲ್ನಲ್ಲೇ ಅಂಗಡಿ ಇರಿಸಿದ್ದ ಸಂಜಯ್ ಹಾಗೂ ಪೂರ್ವಜ್ ನಡುವೆ ಹಣಕಾಸು ವ್ಯವಹಾರವಿತ್ತು. ಈ ಹಿನ್ನೆಲೆಯಲ್ಲಿ ಗಲಾಟೆ ನಡೆದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ನನ್ನ ಮಗ ಕಾನೂನು ಉಲ್ಲಂಘಿಸಿದ್ದರೆ ಕ್ರಮ ಜರುಗಿಸಲು ನನ್ನ ವಿರೋಧವಿಲ್ಲ. ಕಾನೂನು ಎಲ್ಲರಿಗೂ ಒಂದೇ. ದೂರು ದಾಖಲಾಗಿದ್ದರೆ ಪೊಲೀಸರು ವಿಚಾರಣೆ ನಡೆಸಲಿ.
- ವಿಶ್ವನಾಥ್, ಮಾಜಿ ಸಂಸದ