ಶೀಲಾ, 'ಮಹಾ' ರಾಜ್ಯಪಾಲ ಈಶಾನ್ಯಕ್ಕೆ ಎತ್ತಂಗಡಿ?
ರಾಜಿನಾಮೆ ನೀಡಬೇಕು ಎಂದು ನರೇಂದ್ರ ಮೋದಿ ಸರ್ಕಾರದ ಆದೇಶಕ್ಕೆ ಸೊಪ್ಪು ಹಾಕದ ರಾಜ್ಯಪಾಲರಿಗೆ ..
ನವದೆಹಲಿ: ರಾಜಿನಾಮೆ ನೀಡಬೇಕು ಎಂದು ನರೇಂದ್ರ ಮೋದಿ ಸರ್ಕಾರದ ಆದೇಶಕ್ಕೆ ಸೊಪ್ಪು ಹಾಕದ ರಾಜ್ಯಪಾಲರಿಗೆ ಈಶಾನ್ಯ ರಾಜ್ಯಗಳಿಗೆ ವರ್ಗಾವಣೆ ಶಿಕ್ಷೆ ಮುಂದುವರಿಯುವ ಸಾಧ್ಯತೆ ಇದೆ. ಈಗಾಗಲೇ ರಾಜಿನಾಮೆ ನೀಡದೆ ಕೇಂದ್ರಕ್ಕೆ ಸವಾಲೊಡ್ಡಿದ್ದ ಗುಜರಾತ್ ರಾಜ್ಯಪಾಲ ಡಾ.ಕಮಲಾ ಬೇನಿವಾಲ್ ಅವರನ್ನು ಮಿಜೋರಾಮ್ಗೆ ವರ್ಗಾಯಿಸಲಾಗಿದೆ. ಅದೇ ನೀತಿಯನ್ನು ಕೇರಳ ರಾಜ್ಯಪಾಲ ಶೀಲಾ ದೀಕ್ಷಿತ್ ಮತ್ತು ಮಹಾರಾಷ್ಟ್ರ ರಾಜ್ಯಪಾಲ ಕೆ.ಶಂಕರನಾರಾಯಣನ್ ಅವರಿಗೂ ಮೋದಿ ಸರ್ಕಾರ ಅನ್ವಯಿಸಲಿದೆ ಎಂದು ಹೇಳಲಾಗುತ್ತಿದೆ.
ಹೊಸ ರಾಜ್ಯಪಾಲರ ಪಟ್ಟಿಯನ್ನು ಬುಧವಾರ ಪ್ರಕಟಿಸುವ ಸೂಚನೆಗಳು ವ್ಯಕ್ತವಾಗುತ್ತಿದ್ದಂತೆ ದೆಹಲಿ ರಾಜಕೀಯ ವಲಯದಲ್ಲಿ ಇಂಥದ್ದೊಂದು ವದಂತಿ ಹರಿದಾಡಲಾರಂಭಿಸಿದೆ. ಬಿಜೆಪಿ ನಾಯಕರಾದ ರಾಮ್ ನಾಯಕ್, ಕೇಸರಿನಾಥ್ ತ್ರಿಪಾಠಿ, ಲಾಲ್ಜಿ ಟಂಡನ್, ಓ.ರಾಜಗೋಪಾಲ್, ಶಾಂತಾಕುಮಾರ್, ಕೈಲಾಶ್ ಜೋಶಿ ರಾಜ್ಯಪಾಲರ ಹುದ್ದೆಗಳಿಗೆ ಕೇಳಿ ಬರುತ್ತಿರುವ ಪ್ರಮುಖ ನಾಯಕರ ಹೆಸರುಗಳು.
ಕರ್ನಾಟಕ, ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಗೋವಾ, ಛತ್ತೀಸ್ಗಡ, ನಾಗಾಲ್ಯಾಂಡ್, ತ್ರಿಪುರಾ ರಾಜ್ಯಗಳಿಗೆ ಇನ್ನಷ್ಟೇ ರಾಜ್ಯಪಾಲರನ್ನು ನೇಮಕ ಮಾಡಬೇಕಾಗಿದೆ.