ಸೀಟ್ ಬ್ಲಾಕಿಂಗ್ ದಂಧೆಗೆ ಸರ್ಕಾರದ ಕೃಪಾಕಟಾಕ್ಷ: ಲಿಂಬಾವಳಿ ಆರೋಪ
ರಾಜ್ಯ ಸರ್ಕಾರದ ಕೃಪಾ ಪೋಷಣೆಯಿಂದ ರಾಜ್ಯದ ವೈದ್ಯ ಕಾಲೇಜುಗಳಲ್ಲಿ ಕಾಮೆಡ್-ಕೆ ಹಾಗೂ ಸಿಇಟಿಯಲ್ಲಿ ...
ವಿಧಾನಸಭೆ: ರಾಜ್ಯ ಸರ್ಕಾರದ ಕೃಪಾ ಪೋಷಣೆಯಿಂದ ರಾಜ್ಯದ ವೈದ್ಯ ಕಾಲೇಜುಗಳಲ್ಲಿ ಕಾಮೆಡ್-ಕೆ ಹಾಗೂ ಸಿಇಟಿಯಲ್ಲಿ ಅವ್ಯಾಹತವಾಗಿ ಸೀಟ್ ಬ್ಲಾಕಿಂಗ್ ದಂಧೆ ನಡೆಯುತ್ತಿದೆ ಎಂದು ಮಾಜಿ ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ಆರೋಪಿಸಿದ್ದಾರೆ.
ಎರಡು ವರ್ಷಗಳಿಂದ ಸಿಇಟಿ ಪ್ರಕ್ರಿಯೆ ಹದಗೆಟ್ಟಿದೆ. ಆಯುರ್ವೇದ ಮತ್ತು ಹೋಮಿಯೋಪತಿ ವಿಷಯವನ್ನು ಸೀಟ್ ಮ್ಯಾಟ್ರಿಕ್ಸ್ ಪ್ರಕ್ರಿಯೆಯಿಂದ ಹೊರಗಿಡಲಾಗಿದೆ. ಅಷ್ಟು ಮಾತ್ರವಲ್ಲ, ಯಾವ ಕಾಲೇಜಿನಲ್ಲಿ ಎಷ್ಟು ಸೀಟು ಇದೆ, ಯಾವ ಪ್ರವರ್ಗದ ಸೀಟು ಎಷ್ಟಿದೆ ಇತ್ಯಾದಿ ಕೋಷ್ಟಕಗಳನ್ನು ಸರ್ಕಾರ ಪ್ರಕಟಿಸುತ್ತಿಲ್ಲ. ಇದರಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಸೀಟ್ ಬ್ಲಾಕಿಂಗ್ ಬಗ್ಗೆ ಸರ್ಕಾರದ ನಿಯಂತ್ರಣವೇ ಇಲ್ಲದಂತಾಗಿದೆ ಎಂದು ಅವರು ವಿಧಾನಸಭೆಯಲ್ಲಿ ನಿಲುವಳಿ ಸೂಚನೆ ಮಂಡಿಸುವಾಗ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಈ ಬಾರಿಯ ಕೌನ್ಸೆಲಿಂಗ್ನಲ್ಲಿ ಕೇವಲ 31 ವೈದ್ಯ ಕಾಲೇಜುಗಳ ಸೀಟುಗಳ ವಿವರ ಪ್ರಕಟಿಸಲಾಗಿದೆ. ಆದರೆ ರಾಜ್ಯದಲ್ಲಿ 46 ಕಾಲೇಜುಗಳಿವೆ. ಇದರಿಂದ ಖಾಸಗಿ ಕಾಲೇಜು ಆಡಳಿತ ಮಂಡಳಿಗೆ ರು. 500ರಿಂದ ರು. 600 ಕೋಟಿ ಲಾಭ ಮಾಡಿಕೊಡಲು ಸರ್ಕಾರ ಹೊರಟಿದೆ. ವೈದ್ಯ ಶಿಕ್ಷಣ ಸಚಿವರು ಪ್ರಾಮಾಣಿಕರಾಗಿರಬಹುದು. ಆದರೆ ಅಕ್ರಮ ತಡೆಗಟ್ಟಲುವ ಅಸಹಾಯಕತೆ ವ್ಯಕ್ತಪಡಿಸುವುದೂ ಅಪ್ರಾಮಾಣಿಕತೆಯಾಗುತ್ತದೆ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ತೀವ್ರ ಭಾವಾವೇಶಕ್ಕೆ ಒಳಗಾದ ಶರಣಪ್ರಕಾಶ್ ಪಾಟೀಲ್, 'ಈ ಕಾಯ್ದೆಯನ್ನು ನಾನು ಜಾರಿಗೆ ತಂದೇ ತರುತ್ತೇನೆ, ನನ್ನ ಇಲಾಖೆಯಲ್ಲಿ ಅನ್ಯಾಯವಾಗುವುದಕ್ಕೆ ನಾನು ಬಿಡುವುದಿಲ್ಲ' ಎಂದು ಮೇಜು ಕುಟ್ಟಿ ಹೇಳಿದರು. ಆದರೆ ಸಚಿವರು ನಾವು ಎತ್ತಿದ ಪ್ರಶ್ನೆಗಳಿಗೆ ಉತ್ತರ ನೀಡದೇ ಕೂಗಾಡಿ ನುಣುಚಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು. ಸೀಟ್ ಬ್ಲಾಕಿಂಗ್ ದಂಧೆ ಬಗ್ಗೆ ಸರ್ಕಾರ ಸ್ಪಷ್ಟ ನಿಲುವು ಪ್ರಕಟಿಸಬೇಕು. ಇದರಲ್ಲಿ ಪ್ರಭಾವಿಗಳು ಭಾಗಿಯಾಗಿದ್ದಾರೆ. ಸಿಸಿಬಿ ತನಿಖೆಯಿಂದ ಇದರ ಮೂಲವನ್ನು ಪತ್ತೆ ಹಚ್ಚಲು ಸಾಧ್ಯವಿಲ್ಲ. ಸೀಟ್ ಬ್ಲಾಕಿಂಗ್ಗಾಗಿ ಹೊರ ರಾಜ್ಯಗಳಿಂದ ಪ್ರತಿವರ್ಷ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಈ ಕುರಿತ ಎಲ್ಲ ಮಾಹಿತಿ ಹೊಂದಿರುವ ರಾಜ್ಯ ಸರ್ಕಾರ ಖಾಸಗಿ ಕಾಲೇಜುಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಿಲ್ಲ. ಇದರ ಹಿಂದೆ ರಾಜಕೀಯ ಕಾರಣಗಳಿವೆ ಎಂದು ಲಿಂಬಾವಳಿ ಆರೋಪಿಸಿದರು.
ಇದಲ್ಲದೇ ವರ್ಗೀಕೃತ ಸೀಟು ಲಭ್ಯತೆ ಪಟ್ಟಿಯನ್ನು ಸರ್ಕಾರ ಪ್ರಕಟಿಸುತ್ತಿಲ್ಲ. ಉದ್ದೇಶಪೂರ್ವಕವಾಗಿ ಬಚ್ಚಿಡಲಾಗುತ್ತಿದೆ. ಸೀಟು ಸರೆಂಡರ್ ಪ್ರಕ್ರಿಯೆ ಅನೇಕ ವಿದ್ಯಾರ್ಥಿಗಳಿಗೆ ಗೊತ್ತಿಲ್ಲ. ಆನ್ಲೈನ್ನಲ್ಲಿ ಶುಲ್ಕ ಪಾವತಿಸಿಕೊಂಡವರಿಂದಲೂ ಮತ್ತೆ ಶುಲ್ಕ ಪಡೆಯಲಾಗುತ್ತಿದೆ ಎಂದು ದೂರಿದರು. ವೃತ್ತಿ ಶಿಕ್ಷಣದ ಎಲ್ಲ ಕೋರ್ಸ್ಗಳಿಗೂ ಸರ್ಕಾರ ಶುಲ್ಕ ನಿಗದಿಮಾಡಿದೆ. ಆದರೆ ಎಲ್ಲ ಕಾಲೇಜುಗಳಲ್ಲಿ ಹೆಚ್ಚುವರಿ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಈ ಬಗ್ಗೆ ಸರ್ಕಾರವನ್ನು ಪ್ರಶ್ನಿಸಿದರೆ 2006ರ ಕಾಯಿದೆ ಹೆಸರು ಹೇಳಿಕೊಂಡು ಜಾರಿಕೊಳ್ಳುತ್ತಿದೆ. ಶುಲ್ಕಕ್ಕೆ ಸಂಬಂಧಿಸಿದ ಆತಂಕ ಹೋಗಲಾಡಿಸಿ ತಿದ್ದುಪಡಿ ತಂದು ಕಾಯಿದೆ ಜಾರಿ ಮಾಡಲು ಬಿಜೆಪಿ ಬೆಂಬಲ ನೀಡುತ್ತದೆ ಎಂದು ಅವರು ಹೇಳಿದರು.
ಕಾಯಿದೆ ಜಾರಿ ಮಾಡಿಯೇ ಸಿದ್ಧ
ಪ್ರತಿಕ್ರಿಯೆ ನೀಡಿದ ವೈದ್ಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, 2006ರ ವೃತ್ತಿ ಶಿಕ್ಷಣ ಹಾಗೂ ಪ್ರವೇಶ ನಿಯಂತ್ರಣ ಕಾಯಿದೆಯನ್ನು ಕೆಲ ತಿದ್ದುಪಡಿಯೊಂದಿಗೆ ಜಾರಿಗೆ ತಂದೇ ತರುತ್ತೇನೆ ಎಂದರು. ಆದರೆ ಈ ಸಂದರ್ಭದಲ್ಲಿ ತಾಳ್ಮೆ ಕಳೆದುಕೊಂಡು ಪಾಟೀಲ್ ಕೂಗಾಡ ತೊಡಗಿದಾಗ ಆಡಳಿತ ಪಕ್ಷದ ಸದಸ್ಯರು ಅವರಿಗೆ ಧ್ವನಿ ಸೇರಿಸಿದರು. ಬಿಜೆಪಿ ಶಾಸಕರು ಪ್ರತ್ಯಾರೋಪದಲ್ಲಿ ತೊಡಗಿದರು. ಹೀಗಾಗಿ ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು. ಸ್ಪೀಕರ್ ಕಾಗೋಡು ಎಷ್ಟೇ ಪ್ರಯತ್ನ ಪಟ್ಟರೂ ಗದ್ದಲ ನಿಯಂತ್ರಣಕ್ಕೆ ಬಾರದೇ ಇದ್ದರಿಂದ ಎದ್ದುನಿಂತು ಪ್ರತಿಯೊಬ್ಬರ ಹೆಸರು ಹೇಳಿ ಕೂರಿಸಬೇಕಾಯಿತು. ಸಚಿವ ಶರಣ ಪ್ರಕಾಶ್ರತ್ತ ತಿರುಗಿ 'ನೀವು ಏನು ಮಾಡಲು ಹೊರಟಿದ್ದೀರಿ ಎಂದು ಹೇಳಿ. ಅದನ್ನು ಬಿಟ್ಟು ಮೇಜು ಕುಟ್ಟಿ ಕೂಗಾಡಬಾರದು. ಉತ್ತರ ನೀಡುವಾಗ ಸಮಾಧಾನ ಇರಬೇಕು' ಎಂದು ಹೇಳಿದರು.