ಐತೀರ್ಪು ಸ್ಪಷ್ಟನೆ ವಿಚಾರಣೆ ತಿರಸ್ಕೃತ, ಮತ್ತೆ ಸುಪ್ರೀಂನತ್ತ ಕಾವೇರಿ ತಗಾದೆ
ಐತೀರ್ಪು ಕುರಿತಂತೆ ಸ್ಪಷ್ಟನೆ ಕೋರಿ ಸಲ್ಲಿಸಿರುವ ಅರ್ಜಿಗಳ...
ಕ.ಪ್ರಭ ಪ್ರತಿನಿಧಿಯಿಂದ, ನವದೆಹಲಿ, ಜು 15
ಐತೀರ್ಪು ಕುರಿತಂತೆ ಸ್ಪಷ್ಟನೆ ಕೋರಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸಬೇಕೆಂಬ ತಮಿಳುನಾಡು ಬೇಡಿಕೆಯನ್ನು ಕಾವೇರಿ ನ್ಯಾಯಾಧಿಕರಣ ತಿರಸ್ಕರಿಸಿದೆ.
ಐತೀರ್ಪು ಪ್ರಶ್ನಿಸಿ ನದಿಪಾತ್ರದ ರಾಜ್ಯಗಳು ಸುಪ್ರೀಂಕೋರ್ಟ್ನಲ್ಲಿ ಸಲ್ಲಿಸಿರುವ ಮೇಲ್ಮನವಿಗಳು ಇನ್ನೂ ಇತ್ಯರ್ಥವಾಗದ ಕಾರಣ ಸ್ಪಷ್ಟನೆ ಕೋರಿ ಸಲ್ಲಿಸಿರುವ ಅರ್ಜಿಗಳ ವಿಲೇವಾರಿ ಮಾಡಲಾಗದು ಎಂದು ನ್ಯಾಯಾಧಿಕರಣ ಸ್ಪಷ್ಟಪಡಿಸಿದೆ.
ಸುಪ್ರೀಂಕೋರ್ಟ್ನಲ್ಲಿರುವ ಮೇಲ್ಮನವಿಗಳು ಇತ್ಯರ್ಥವಾಗದೆ ಸ್ಪಷ್ಟೀಕರಣ ಅರ್ಜಿಗಳ ವಿಚಾರಣೆ ನಡೆಸಬಾರದು ಎಂಬ ಕರ್ನಾಟಕದ ಮನವಿಯನ್ನು ನ್ಯಾಯಾಧಿಕರಣ ಪುರಸ್ಕರಿಸಿದೆ.
ಸ್ಪಷ್ಟನೆ ಕೋರಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸಬೇಕಾದರೆ, ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸುವಂತೆಯೂ ನ್ಯಾಯಾಧಿಕರಣ ತಮಿಳುನಾಡಿಗೆ ಸೂಚಿಸಿದೆ. ತಮಿಳುನಾಡು ಸಲ್ಲಿಸುವ ಮೇಲ್ಮನವಿ ವಿಚಾರಣೆ ನಡೆಸಿ ಸುಪ್ರೀಂಕೋರ್ಟ್ ನೀಡುವ ಮಾರ್ಗಸೂರ್ಚಿ ಅನುಸರಿಸಿ ವಿಚಾರಣೆ ನಡೆಸಬೇಕೇ, ಬೇಡವೇ ಎಂಬುದನ್ನು ನಿರ್ಧರಿಸಲಾಗುವುದು ಎಂದು ನ್ಯಾಯಾಧಿಕರಣದ ಅಧ್ಯಕ್ಷ ನ್ಯಾಯಮೂರ್ತಿ ಬಿ.ಎಸ್. ಚೌವ್ಹಾಣ್ ಹೇಳಿದ್ದಾರೆ. ಹೀಗಾಗಿ ಕಾವೇರಿ ತಗಾದೆ ಮತ್ತೆ ಸುಪ್ರೀಂಕೋರ್ಟ್ ಅಂಗಳಕ್ಕೆ ಬಂದಂತಾಗಿದೆ.
ವಿಚಾರಣೆ ನಡೆಸುವಂತಿಲ್ಲ: ಸ್ಪಷ್ಟನೆ ಕೋರಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ಮಂಗಳವಾರ ಆರಂಭವಾಯಿತು. ಕರ್ನಾಟಕ ಸರ್ಕಾರದ ಪರ ವಕೀಲರಾದ ಅನಿಲ್ ದಿವಾನ್ ಮತ್ತು ಮೋಹನ್ ಕಾತರಕಿ ಅವರು, ಕಾವೇರಿ ನ್ಯಾಯಾಧಿಕರಣ 2007 ಫೆ.5ರಂದು ನೀಡಿರುವ ಐತೀರ್ಪು ಪ್ರಶ್ನಿಸಿ ನದಿಪಾತ್ರದ ರಾಜ್ಯಗಳು ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿವೆ. ಈ ಮೇಲ್ಮನವಿಗಳು ಇನ್ನೂ ಇತ್ಯರ್ಥವಾಗಿಲ್ಲ. ಈ ಕಾರಣಕ್ಕಾಗಿಯೇ 2007ರ ಜುಲೈ 10 ನ್ಯಾಯಾಧಿಕರಣವು ಸ್ಪಷ್ಟನೆ ಕೋರಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸುವುದಿಲ್ಲ ಎಂದು ಆದೇಶ ನೀಡಿದೆ. ಆ ಆದೇಶವನ್ನು ತಮಿಳುನಾಡು ಸರ್ಕಾರ ಸೇರಿದಂತೆ ಯಾರೂ ಪ್ರಶ್ನಿಸಿಲ್ಲ. ಆ ಆದೇಶ ಇನ್ನೂ ಜಾರಿಯಲ್ಲಿರುವುದರಿಂದ ಸ್ಪಷ್ಟೀಕರಣ ಕೋರಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸುವಂತಿಲ್ಲ ಎಂದು ವಾದಿಸಿದರು.
ಸುಪ್ರೀಂಗೆ ಮೇಲ್ಮನವಿ ಸಲ್ಲಿಸಿ: ತಮಿಳುನಾಡು ಪರ ವಕೀಲರು, ಸ್ಪಷ್ಟನೆ ಕೋರಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸಬಾರದು ಎಂದು ಸುಪ್ರೀಂಕೋಟ್ ಎಲ್ಲೂ ಆದೇಶಿಸಿಲ್ಲ. ನ್ಯಾಯಾಧಿಕರಣಕ್ಕೆ ಈ ನಿಟ್ಟಿನಲ್ಲಿ ಯಾವ ನಿರ್ಬಂಧವನ್ನೂ ಹೇರಿಲ್ಲ. ಹೀಗಾಗಿ ನ್ಯಾಯಾಧಿಕರಣವು ಸ್ಪಷ್ಟೀಕರಣ ಅರ್ಜಿಯನ್ನು ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿದರು.
ಉಭಯ ರಾಜ್ಯಗಳ ವಾದ ಆಲಿಸಿದ ನ್ಯಾಯಮೂರ್ತಿ ಬಿ.ಎಸ್. ಚೌವ್ಹಾಣ್, ಸುಪ್ರೀಕೋರ್ಟ್ನಲ್ಲಿರುವ ಮೇಲ್ಮನವಿಗಳು ಇತ್ಯರ್ಥವಾಗದೇ ನ್ಯಾಯಾಧಿಕರಣವು ಸ್ಪಷ್ಟನೆ ಕೋರಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸುವುದು ಸೂಕ್ತವಲ್ಲ. ಆದ್ದರಿಂದ ತಮಿಳುನಾಡು ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿ ನಿರ್ದೇಶನ ಪಡೆಯಬೇಕು ಎಂದು ತಿಳಿಸಿದರು.
ಈಗ ತಮಿಳುನಾಡು ಮತ್ತೆ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಬೇಕು. ಅದರ ವಿಚಾರಣೆ ನಡೆಸಿ ಸುಪ್ರೀಂಕೋರ್ಟ್ ನೀಡುವ ನಿರ್ದೇಶನವನ್ನಾಧರಿಸಿ ನ್ಯಾಯಾಧಿಕರಣ ಸ್ಪಷ್ಟನೆ ಕೋರಿ ಸಲ್ಲಿಸಿರುವ ಅರ್ಜಿಗಳ ವಿಲೇವಾರಿ ಬಗ್ಗೆ ನಿರ್ಧಾರ ಕೈಗೊಳ್ಳುತ್ತದೆ.