ಕಾಶ್ಮೀರ ಮುಕ್ತಿಗೆ ಉಗ್ರ ಆಹ್ವಾನ
ಇರಾಕ್, ಸಿರಿಯಾದಲ್ಲಿ ನಡೆಯುತ್ತಿರುವ ಸಂಘರ್ಷ, ಉಗ್ರರು ನಡೆಸುತ್ತಿರುವ ರಕ್ತಪಾತ ಭಾರತಕ್ಕೂ ವ್ಯಾಪಿಸಲಿದೆಯೇ?...
ನವದೆಹಲಿ: ಇರಾಕ್, ಸಿರಿಯಾದಲ್ಲಿ ನಡೆಯುತ್ತಿರುವ ಸಂಘರ್ಷ, ಉಗ್ರರು ನಡೆಸುತ್ತಿರುವ ರಕ್ತಪಾತ ಭಾರತಕ್ಕೂ ವ್ಯಾಪಿಸಲಿದೆಯೇ?
'ಎಲ್ಲರೂ ಕಾಶ್ಮೀರಕ್ಕೆ ಬನ್ನಿ. ಭಾರತದ ಹಿಡಿತದಿಂದ ಕಾಶ್ಮೀರವನ್ನು ಮುಕ್ತಗೊಳಿಸೋಣ' ಎನ್ನುವ ಮೂಲಕ ಉಗ್ರರ ಬಾಸ್ ಸೈಯ್ಯದ್ ಸಲಾಹುದ್ದೀನ್ ಅಲ್ಖೈದಾ, ತಾಲಿಬಾನ್ನಂತಹ ಸಂಘಟನೆಗಳಿಗೆ ಆಹ್ವಾನ ನೀಡಿದ್ದಾನೆ. ಇದು ಭಾರತದಲ್ಲಿ ಉಗ್ರ ಹಿಂಸೆಯ ಭೀತಿ ಮೂಡಿಸಿದೆ.
ರಣಾಂಗಣ ಸಿದ್ಧವಾಗಿದೆ: ಪಾಕಿಸ್ತಾನ ಮೂಲದ ಹಲವು ಉಗ್ರ ಸಂಘಟನೆಗಳ ಒಕ್ಕೂಟವಾದ 'ಯುನೈಟೆಡ್ ಜಿಹಾದ್ ಕೌನ್ಸಿಲ್'(ಯುಜೆಸಿ)ನ ಮುಖ್ಯಸ್ಥನಾದ ಸಲಾಹುದ್ದೀನ್, 'ಕಾಶ್ಮೀರ ಹೋರಾಟವನ್ನು ಯಾರು ಬೆಂಬಲಿಸಿದರೂ ಅವರನ್ನು ಸ್ವಾಗತಿಸುತ್ತೇನೆ' ಎಂದಿದ್ದಾನೆ. 'ಕಾಶ್ಮೀರವೂ ನಾಗರಿಕ ಯುದ್ಧ ನಡೆಯುತ್ತಿರುವ ರಾಷ್ಟ್ರಗಳಂತೆಯೇ ಆಗಿದೆ. ಇನ್ನೂ ವಿಸ್ತರಿಸಿ ಹೇಳಬೇಕೆಂದರೆ, ಎಲ್ಲ ರೀತಿಯ ಜಿಹಾದಿಗಳೂ ಆಗಮಿಸಲು ಇಲ್ಲಿ ರಣಾಂಗಣ ಸಿದ್ಧವಾಗಿದೆ. ಅಲ್ಖೈದಾ, ತಾಲಿಬಾನ್ ಅಥವಾ ಯಾವುದೇ ಸಂಘಟನೆಯಾಗಲೀ, ರಾಷ್ಟ್ರವಾಗಲೀ ನೊಂದಿರುವ ಕಾಶ್ಮೀರಿಗಳಿಗೆ ನೆರವಾಗಲು ಮುಂದೆ ಬಂದರೆ ನಾವು ಸ್ವಾಗತಿಸುತ್ತೇವೆ' ಎಂದಿದ್ದಾನೆ ಸಲಾಹುದ್ದೀನ್. ಜತೆಗೆ, ಭಾರತೀಯ ಸೇನೆ ಕಾಶ್ಮೀರದಲ್ಲಿ ಭಯೋತ್ಪಾದನೆ ಮಾಡುತ್ತಿದೆ ಎಂದೂ ಹೇಳಿದ್ದಾನೆ.
ಸಲಾಹುದ್ದೀನ್?
ಜಮ್ಮು ಮತ್ತು ಕಾಶ್ಮೀರದ ಅತಿ ದೊಡ್ಡ ಉಗ್ರ ಸಂಘಟನೆಗಳಲ್ಲಿ ಒಂದಾದ ಹಿಜ್ಬುಲ್ ಮುಜಾಹಿದೀನ್ನ ನಾಯಕಸೈಯ್ಯದ್ ಸಲಾಹುದ್ದೀನ್. ಎಲ್ಲ ಉಗ್ರ ಸಂಘಟನೆಗಳನ್ನೂ ಒಂದೇ ವೇದಿಕೆಯಡಿ ತರುವ ಉದ್ದೇಶದಿಂದ 1990ರ ನವೆಂಬರ್ನಲ್ಲಿ ಯುಜೆಸಿಯನ್ನು ಸ್ಥಾಪಿಸಲಾಯಿತು. ಪಾಕ್ ಆಕ್ರಮಿತ ಕಾಶ್ಮೀರದ ಮುಜಾಫರಾಬಾದ್ನಲ್ಲಿ ಇದರ ಪ್ರಧಾನ ಕಚೇರಿ ಇದೆ.
ಸಂಘಟನೆಗಳು
ಹರ್ಕತುಲ್ ಅನ್ಸಾರ್, ಹಿಜ್ಬುಲ್ ಮುಜಾಹಿದೀನ್, ಜಮೀಯ್ಯತುಲ್ ಮುಜಾಹಿದೀನ್, ಅಲ್-ಜಿಹಾದ್, ಅಲ್-ಬರ್ಖ್, ಅಲ್-ಬದ್ರ್, ಇಖ್ವಾನುಲ್ ಮುಸಲ್ಮೀನ್, ತೆಹ್ರಿಕ್-ಉಲ್-ಮುಜಾಹಿದೀನ್.
ನಕ್ಸಲರಿಗೆ ಬೆಂಬಲ
ನವದೆಹಲಿ: ಪಾಕಿಸ್ತಾನ, ಚೀನಾ ಅಲ್ಲದೇ ಯೂರೋಪ್ ದೇಶಗಳಿಂದಲೂ ನಕ್ಸಲರಿಗೆ ನೆರವು ಸಿಗುತ್ತಿದೆ. ದೇಶದ ಆರ್ಥಿಕತೆಯನ್ನು ಹದಗೆಡಿಸಲು ಗ್ರೀನ್ಪೀಸ್ನಂಥ ವಿದೇಶಿ ಸಂಘಟನೆಗಳು ಪ್ರಯತ್ನಿಸುತ್ತಿರುವುದರ ಬಗ್ಗೆ ಗೃಹ ಇಲಾಖೆ ರಾಜ್ಯ ಸಚಿವ ಕಿರೆಣ್ ರಿಜಿಜು ಲೋಕಸಭೆಗೆ ವಿವರಿಸಿದರು. ಇದೇ ವೇಳೆ, ಜರ್ಮನಿ, ಇಟಲಿ, ಹಾಲೆಂಡ್ ಹಾಗೂ ಫ್ರಾನ್ಸ್ಗಳಲ್ಲಿನ ಚಿಕ್ಕಪುಟ್ಟ ಮಾವೋವಾದಿ ಸಂಘಟನೆಗಳಿಂದ ನಕ್ಸಲರಿಗೆ ಸಹಾಯ ಸಿಗುತ್ತಿದೆ. ರಾಜತಾಂತ್ರಿಕ ನೆಲೆಗಟ್ಟಿನಲ್ಲಿ ಈ ಸಮಸ್ಯೆ ಪರಿಹರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು. ಸಿಪಿಎಂ ಪಕ್ಷ ಫಿಲಿಪೈನ್ಸ್, ಟರ್ಕಿಗಳಲ್ಲಿನ ಮಾವೋವಾದಿ ಸಂಘಟನೆಗಳೊಂದಿಗೆ ನೇರ ಸಂಪರ್ಕ ಹೊಂದಿದೆ ಎಂದು ರಿಜಿಜು ತಿಳಿಸಿದರು.
ಬಾಂಧವ್ಯ ಸಲ್ಲ
ಕಾಶ್ಮೀರದ ಮುಜಾಫರಾಬಾದ್ನಲ್ಲಿ ್ಲ ಮಾತನಾಡಿದ್ದ ಸಲಾಹುದ್ದೀನ್, ಪಾಕ್ ಪ್ರಧಾನಿ ನವಾಜ್ ಷರೀಫ್ ಕಾಶ್ಮೀರಿಗಳ ಭಾವನೆ ಮತ್ತು ತ್ಯಾಗವನ್ನು ಅರ್ಥಮಾಡಿಕೊಳ್ಳಬೇಕು. ಬದಲಾಗಿ ಪ್ರಧಾನಿ ಮೋದಿ ಅವರೊಂದಿಗೆ ಪತ್ರ, ಸೀರೆಗಳ ವಿನಿಮಯ ಮಾಡಿಕೊಳ್ಳುತ್ತಾ ಕೂತಿರುವುದು ಕಾಶ್ಮೀರಿಗಳ ಭಾವನೆಗೆ ಧಕ್ಕೆ ತಂದಿದೆ ಎಂದಿದ್ದಾರೆ.