ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ನೀರಾ ಇಲ್ಲಿ ಅನಾರೋಗ್ಯಕ್ಕೆ ಮೂಲ ಕೇರಳದಲ್ಲಿ ಆರೋಗ್ಯವರ್ಧಕ!

ನಮ್ಮಲ್ಲಿ ನಿಷೇಧ, ಪಕ್ಕದ ಕೇರಳದಲ್ಲಿ...

Vishwanath S
Updated On : 16 Jul 2014, 1:27 am

ಬೆಂಗಳೂರು: ನಮ್ಮಲ್ಲಿ ನಿಷೇಧ, ಪಕ್ಕದ ಕೇರಳದಲ್ಲಿ ಅದೇ ವೆಲ್ಕಮ್ ಡ್ರಿಂಕ್! ನಮ್ಮಲ್ಲಿ ಅನಾರೋಗ್ಯದ ಪಾನೀಯ, ಕೇರಳದಲ್ಲಿ ಅದು ಆರೋಗ್ಯವರ್ಧಕ!! ನಮ್ಮಲ್ಲಿ ನೀರಾ ಅಂದರೆ ನೀರಾ ರಾಡಿಯಾಳನ್ನು ನೋಡಿದ ಹಾಗೆ ನೋಡ್ತಾರೆ. ಅದೇ ಕೇರಳದಲ್ಲಿ ನೀರು ಬೇಕಾ, ನೀರಾ ಆಗಬಹುದಾ ಅಂತ ಕೇಳ್ತಾರೆ!
ನಾವಿನ್ನೂ ನೀರಾ ಕುಡಿದು ಇಬ್ಬರು ಮೃತಪಟ್ಟಿದ್ದನ್ನೇ ನೆಪ ಮಾಡಿಕೊಂಡು, ನೆನಪು ಮಾಡಿಕೊಂಡು ಕುಳಿತಿದ್ದೇವೆ. ಆದರೆ, ಕೇರಳದವರು ನೀರಾದಿಂದ ಫ್ರೂಟ್ ಸ್ಪ್ರೆಡ್, ನೀರಾ ಲೆಮೆನ್ ಸ್ಕ್ವೇಸ್, ಕೋಕೋನಟ್ ಸ್ಪೈಸಿ ಜಾಗರಿ, ಚಾಕಲೇಟ್ಗಳು, ಸಿಹಿತಿನಿಸುಗಳನ್ನು ತಯಾರು ಮಾಡಿ ಮಾರಾಟ ಮಾಡುತ್ತಿದ್ದಾರೆ.
ಕೇರಳದಲ್ಲಿ ತೆಂಗು ಬೆಳೆಯಿಂದ 40 ಸಾವಿರ ಕೋಟಿ ಆದಾಯವಿದ್ದು ಲಕ್ಷಾಂತರ ರೈತರ ಬದುಕು ಸಿಹಿ ನೀರಾ ಉತ್ಪನ್ನಗಳಿಂದ ಆರ್ಥಿಕವಾಗಿ ಸದೃಢವಾಗಿದೆ. ನಾವಿನ್ನೂ ನೀರಾ ಇಳಿಸಬೇಕೋ ಬೇಡವೋ ಎಂಬ ಚಿಂತನೆಯಲ್ಲೇ ತೊಡಗಿದ್ದೇವೆ.
ನೀರಾವನ್ನು ಆರೋಗ್ಯವರ್ಧಕ ಪಾನೀಯವಾಗಿ ಉತ್ತೇಜಿಸುವ ಕೇರಳ ಸರ್ಕಾರದ ತೀರ್ಮಾನದಿಂದ ಕೊಬ್ಬರಿ ಬೆಳೆ ಕುಸಿತ ಹಾಗೂ ರೋಗ ಬಾಧೆಯಿಂದ ಕಂಗಾಲಾಗಿರುವ ತೆಂಗು ಬೆಳೆಗಾರರಲ್ಲಿ ಹೊಸ ಭರವಸೆ ಮೂಡಿದೆ.
ಔಷಧೀಯ ಗುಣ ಹಾಗೂ ಪುಷ್ಟಿದಾಯಕ ಅಂಶ ಒಳಗೊಂಡ ನೀರಾ ಶಕ್ತಿ ಮತ್ತು ಆರೋಗ್ಯವರ್ಧಕ. ಇದರಿಂದ ಬೆಲ್ಲ, ಸಕ್ಕರೆ ಸೇರಿದಂತೆ ಹಲವು ಉಪ ಉತ್ಪನ್ನಗಳನ್ನು ತಯಾರಿಸಬಹುದು.             
ಬೇಕರಿ ತಿನಿಸುಗಳಾದಚಾಕಲೇಟ್ಗಳು, ಕೇಕ್, ಬಿಸ್ಕೆಟ್ಗಳು, ಜಾಮ್, ಗುಲಾಬ್ ಜಾಮೂನ್, ಜಿಲೇಬಿಯಲ್ಲಿ ನೀರಾ ಹನಿ, ಸಿರಪ್ಗಳನ್ನು ಬಳಸುವಷ್ಟರ ಪ್ರಮಾಣದಲ್ಲಿ ಬಳಕೆ ಮುಂದುವರಿದಿದೆ.
ನೀರಾ ಹಾಗೂ ಅದರ ಉಪ ಉತ್ಪನ್ನಗಳು ಜೀರ್ಣಶಕ್ತಿಗೆ ಸಹಾಯಕಾರಿ, ಕಾಮಾಲೆಗೆ ರಾಮಬಾಣ. ಜತೆಗೆ ಮಧುಮೇಹಿಗಳಿಗೂ ವರದಾನ ಎಂಬುದನ್ನೂ ಪತ್ತೆ ಮಾಡಲಾಗಿದೆ. ನಾವಿನ್ನೂ ಅದು ಹೆಂಡ ಎಂಬ ಮೂಢನಂಬಿಕೆಯಲ್ಲೇ ಇದ್ದೇವೆ.
ನಮಗೆ ಮತ್ತು ನಮ್ಮನ್ನಾಳುವ ಸರ್ಕಾರಕ್ಕೆ ನೀರಾ ಬಗ್ಗೆ ಇರುವ ಅಭಿಪ್ರಾಯವೇ ಬೇರೆ. ತೆಂಗಿನಕಾಯಿ ಅಂದರೆ ಅಡುಗೆಗೆ, ತಲೆಗೆ ಹಾಕಲು ಎಣ್ಣೆ, ಹೆಚ್ಚೆಂದರೆ ಎಳನೀರು ಇಷ್ಟೇ. ಅದಕ್ಕಿಂತ ಮುಂದೆ ವಿಚಾರ ಮಾಡಿಲ್ಲ. ಈ ಮನಸ್ಥಿತಿಯಿಂದಾಗಿಯೇ ರಾಜ್ಯ ಸರ್ಕಾರ ನೀರಾ ಉತ್ಪಾದನೆಗೆ ಅನುಮತಿ ನೀಡಿಲ್ಲ. ರಾಜ್ಯದಲ್ಲಿ ಐದು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದ್ದು, ಸಿಹಿ ನೀರಾ ನೀತಿ ಜಾರಿಗೆ ತರುವುದರಿಂದ 22.5 ಕೋಟಿ ವಾರ್ಷಿಕ ಆದಾಯ ಗಳಿಸಬಹುದು! ಸಿಹಿ ನೀರಾ ನೀತಿ ಮೂಲಕ 5 ಲಕ್ಷಕ್ಕೂ ಹೆಚ್ಚು  ಉದ್ಯೋಗ ಸೃಷ್ಟಿಸಬಹುದು ಎಂಬ ಲೆಕ್ಕ ಕೂಡ ಸರ್ಕಾರದ ಬಳಿ ಇಲ್ಲ.
ನೀರಾದಲ್ಲಿ ಆಲ್ಕೋಹಾಲ್ ಪ್ರಮಾಣ ಶೇ.0ರಷ್ಟಿದ್ದರೂ ಅದು ಹೆಂಡ ಎಂಬ ತಪ್ಪು ತಿಳಿವಳಿಕೆ ಜನರಲ್ಲಿದೆ. ಕೇರಳದಲ್ಲಿ ನಡೆದ ಪ್ರಯೋಗ ಮತ್ತು ಅಭಿವೃದ್ಧಿ ಗಮನಿಸಿ, ನೀರಾವನ್ನು ಇನ್ನೂ ಹೆಂಡ ಎಂದು ಹೇಳಿಕೊಂಡು ಕೂಪಮಂಡೂಕವಾಗುವ ಬದಲು ನೀರಾದ ವಾಣಿಜ್ಯ ಉಪಯೋಗಗಳ ಕುರಿತು ಸರ್ಕಾರ ಗಮನಹರಿಸಬೇಕಿದೆ.
ಕರ್ನಾಟಕದಲ್ಲಿ ಶೇ.35 ರಿಂದ ಶೇ.40ರಷ್ಟು ಕೃಷಿ ಹಾಗೂ ತೋಟಗಾರಿಕೆ ಉತ್ಪನ್ನಗಳು ವಿನಾಕಾರಣ ಹಾಳಾಗುತ್ತಿವೆ ಎಂಬ ಅಂದಾಜಿದೆ. ಇವುಗಳ ಸದುಪಯೋಗ ಮತ್ತು ವಾಣಿಜ್ಯ ಬಳಕೆ ಬಗ್ಗೆ ಸರ್ಕಾರ ಮತ್ತು ಜನರಲ್ಲಿರುವ ಜ್ಞಾನದ ಕೊರತೆಯೇ ಹಾಳಾಗುವುದಕ್ಕೆ ಕಾರಣ ಎನ್ನಲಾಗಿದೆ.
ನೀರಾ ಬೆಂಬಲಿಸಿದ್ದ ಗಾಂಧೀಜಿ
ಮಹಾತ್ಮ ಗಾಂಧಿ ನೀರಾ ಇಳಿಸುವುದನ್ನು ಸಮರ್ಥಿಸಿಕೊಂಡಿದ್ದರು. ಅವರ ಹರಿಜನ ಪತ್ರಿಕೆಯಲ್ಲೂ ಡಿ.ಗಜಾನನ ನಾಯಕ್ 1939ರ ಜನವರಿ 7ರ ಸಂಚಿಕೆಯಲ್ಲಿ ಗರ್ಭಿಣಿಯರು ವಾರಕ್ಕೆ 2 ಅಥವಾ 3 ಬಾರಿ ನೀರಾ ಸೇವಿಸಿದರೆ ಮಗು ದೈಹಿಕವಾಗಿ, ಮಾನಸಿಕವಾಗಿ ಆರೋಗ್ಯಪೂರ್ಣವಾಗಿ ಹುಟ್ಟುತ್ತದೆ ಎಂದು ಬರೆದಿದ್ದರು.
ಕರ್ನಾಟಕದಲ್ಲಿ ನೀರಾ ಚಳವಳಿ ನಡೆದು 13 ವರ್ಷಗಳಾಗುತ್ತಿದೆ. 2001 ಅಕ್ಟೋಬರ್ 9ರಂದು ಈ ಚಳವಳಿಗೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ವಿಠಲೇನ ಹಳ್ಳಿಯ ಇಬ್ಬರು ರೈತರು ಬಲಿಯಾಗಿದ್ದರು. ಅದನ್ನೇ ನೆಪವಾಗಿಟ್ಟುಕೊಂಡು ನೀರಾಕ್ಕೆ ಸರ್ಕಾರ ಎಳ್ಳುನೀರು ಬಿಟ್ಟಿದೆ. ಆದರೆ ಪಕ್ಕದ ರಾಜ್ಯ ಇಂತಹ ಪೂರ್ವಗ್ರಹಗಳಿಗೆ ಮಣೆಹಾಕದೆ ಅಭಿವೃದ್ಧಿ ಸಾಧಿಸಿದೆ.
ಲಕ್ಷಾಂತರ ರೈತರ ಬದುಕನ್ನು ಹಸನುಗೊಳಿಸುವ ಕಲ್ಪವೃಕ್ಷಕ್ಕೆ ನುಸಿ ಪೀಡೆ ಎದುರಾದ ನಂತರ ಕಂಡುಕೊಂಡಿದ್ದು ನೀರಾ ಉತ್ಪನ್ನವನ್ನು. ನೀರಾ ಚಳವಳಿ ಆರಂಭವಾದ ನಂತರ ಚಾಮರಾಜನಗರ, ಮೈಸೂರು ಜಿಲ್ಲೆಗಳಲ್ಲಿ ವಿಶ್ವವೇ ಬೆರಗಾಗುವ ರೀತಿಯಲ್ಲಿ ನೀರಾದಿಂದ ಸಕ್ಕರೆ ತಯಾರಿಸುವ ಪ್ರಶಿಕ್ಷಣ ತರಬೇತಿ ನೀಡಲಾಯಿತು. ಅನಂತರ ಮಾರುಕಟ್ಟೆ ಸಮಸ್ಯೆ ಹಾಗೂ ಸರ್ಕಾರದ ನಿರುತ್ಸಾಹದಿಂದ ಯೋಜನೆ ಸ್ಥಗಿತಗೊಂಡಿದೆ.
ನೀರಾ ಹೆಂಡವಲ್ಲ
ನೀರಾ ಎಂದರೆ ಹೆಂಡವಲ್ಲ, ಎಲ್ಲಾ ವಯೋವಾನದವರು ಸೇವಿಸಬಲ್ಲ ಪಾನೀಯ. ನೀರಾವನ್ನು ಇಳಿಸಿದ ನಂತರ 3 ಗಂಟೆಯವರೆಗೆ ಹಾಗೇ ಇಟ್ಟರೂ ಮತ್ತಿನ ಅಂಶವಿರುವುದಿಲ್ಲ. 12 ಗಂಟೆ ನಂತರವಷ್ಟೇ ಶೇ.0.7 ಇಂದ ಶೇ.0.8ರಷ್ಟು ಅಲ್ಕೋಹಾಲ್ ಅಂಶ ಅದರಲ್ಲಿ ಕಾಣಿಸಿಕೊಳ್ಳುತ್ತದೆ. ಇದನ್ನು ವೈಜ್ಞಾನಿಕವಾಗಿ ಸಂಸ್ಕರಿಸಿದರೆ 6ತಿಂಗಳ ಕಾಲ ರುಚಿ ಕೆಡದಂತೆ ಮತ್ತು ಅಲ್ಕೋಹಾಲ್ ಅಂಶ ಕಾಣಿಸಿಕೊಳ್ಳದಂತೆ ಹಾಗೇ ಇಡಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕೇರಳ ರಾಜ್ಯದಲ್ಲಿ ತಯಾರಾಗುವ ನೀರಾದ ವಿವಿಧ ಉತ್ಪನ್ನಗಳು ಇದನ್ನು ಸಾಬೀತುಮಾಡಿವೆ.


-ನಯನಾ ಬಿ.ಜೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement