ಉತ್ತರ ಕರ್ನಾಟಕದ ಅಲ್ಲಲ್ಲಿ ಮಳೆ ಆರ್ಭಟ
ಬೆಂಗಳೂರು: ರಾಜ್ಯದ ಅಲ್ಲಲ್ಲಿ ಮಳೆಯಾಗಿದ್ದು, ಉತ್ತರ ಕರ್ನಾಟಕದಲ್ಲಿ ಆರ್ಭಟ ತುಸು ಹೆಚ್ಚಾಗಿದೆ. ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ವರ್ಷಧಾರೆಯಾಗುತ್ತಿದ್ದು, ಮಹಾರಾಷ್ಟ್ರದ ವಿವಿಧ ನದಿ ಮೂಲಗಳಿಂದ ಹಾಗೂ ಬಾಗಲಕೋಟೆಯ ಹಲವೆಡೆ ಮಳೆ ಸುರಿಯುತ್ತಿರುವ ಕಾರಣ ರಾಜ್ಯದಲ್ಲಿ ಹರಿಯುವ ಕೃಷ್ಣಾ ನದಿ ನೀರಿನ ಮಟ್ಟ ಏರುತ್ತಿದೆ.
ರಾಜಾಪುರ ಬ್ಯಾರೇಜ್‌ನಿಂದ 14000 ಕ್ಯುಸೆಕ್, ದೂಧಗಂಗಾ ನದಿಯಿಂದ 6711 ಕ್ಯುಸೆಕ್, ಪಂಚಗಂಗಾ ನದಿಯಿಂದ 18392, ಸಾಂಗ್ಲಿಯಿಂದ 1000 ಸಾವಿರ ಕ್ಯುಸೆಕ್ ನೀರು ಬರುತ್ತಿದೆ. ಆದರೆ ಘಟಪ್ರಭಾ ನದಿಗೆ ಹರಿಯುವ ನೀರಿನ ಪ್ರಮಾಣ ಅತ್ಯಂತ ಕಡಿಮೆಯಾಗಿದೆ. ಗ್ರಾಮ ಸಂಪರ್ಕ ಕಡಿತ: ಮಹಾರಾಷ್ಟ್ರ ಮತ್ತು ಬೆಳಗಾವಿ ತಾಲೂಕು ಹಾಗೂ ಖಾನಾಪುರ ಭಾಗದಲ್ಲಿ ನಿತ್ಯ ಮಳೆ ಸುರಿಯುತ್ತಿದೆ. ಈ ಕಾರಣದಿಂದ ಬೆಳಗಾವಿ ಜಿಲ್ಲೆಯ ಖಾನಾಪುರ, ಅಥಣಿ, ಚಿಕ್ಕೋಡಿ, ರಾಯಬಾಗ ತಾಲೂಕಿನ ಸೇತುವೆಗಳು ಮುಳಗಿ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ರಾಜ್ಯಕ್ಕೆ 'ಮಹಾ' ನೀರು: ಮಹಾರಾಷ್ಟ್ರದ ಕೃಷ್ಣಾ ಕಣಿವೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಮತ್ತು ಕೋಯ್ನಾ, ರಾಜಾಪುರ ಜಲಾಶಯಗಳಿಂದ ಬಿಟ್ಟ ನೀರು ಕರ್ನಾಟಕಕ್ಕೆ ಹರಿದು ಬರುತ್ತಿದೆ. ಹಿಪ್ಪರಗಿ ಅಣೆಕಟ್ಟೆ ಹಿನ್ನೀರು ಮತ್ತು ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ಹೆಚ್ಚಳಗೊಂಡಿದ್ದರಿಂದ ರಬಕವಿ ಸಮೀಪದ ಮಹಿಷವಾಡಗಿ ಬ್ಯಾರೇಜು ತುಂಬಿದೆ. ಬ್ಯಾರೇಜ್ ಮೇಲ್ಭಾಗದಲ್ಲಿ ಸಂಚರಿಸುತ್ತಿದ್ದ ದ್ವಿಚಕ್ರ ವಾಹನಗಳ ಸಂಚಾರ ಸೋಮವಾರ ರಾತ್ರಿಯಿಂದ ಸ್ಥಗಿತಗೊಂಡಿದ್ದು, ದೋಣಿ ಸೇವೆಯನ್ನು ಆರಂಭಿಸಲಾಗಿದೆ. ಹಾಸನ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಹಲವೆಡೆಯೂ ಉತ್ತಮ ಮಳೆಯಾಗಿದೆ.