ಗೋವಾದಿಂದ 'ಶುಲ್ಕ' ಕ್ಯಾತೆ
ಶ್ರೀಶೈಲ ಮಠದ
ಬೆಳಗಾವಿ: ಗೋವಾ ಸರ್ಕಾರದಿಂದ ಇದೀಗ ಮತ್ತೊಂದು ಕ್ಯಾತೆ ಶುರುವಾಗಿದೆ. ಪ್ರವೇಶ ಶುಲ್ಕದಿಂದ ವಿನಾಯ್ತಿ ನೀಡಲಾಗಿದ್ದ ಗಡಿ ರಾಜ್ಯಗಳ ಜಿಲ್ಲೆಗಳ ವಾಹನಕ್ಕೆ ಶುಲ್ಕ ವಿಧಿಸಲು ಮುಂದಾಗಿದೆ.
ಅಲ್ಲಿ ನಿರ್ಗತಿಕ ಕನ್ನಡಿಗರಿಗೆ ತೊಂದರೆ ಕೊಡುತ್ತಿರುವುದರ ಜತೆಗೆ ಈಗ ಹೊರರಾಜ್ಯಗಳ ವಾಹನಗಳ ಪ್ರವೇಶ ಶುಲ್ಕದಿಂದ ವಿನಾಯ್ತಿ ನೀಡಿದ್ದ ಬೆಳಗಾವಿ, ಕಾರವಾರ ಮತ್ತು ಮಹಾರಾಷ್ಟ್ರದ ಸಿಂಧುದುರ್ಗ ನೋಂದಣಿ ವಾಹನಗಳ ಪ್ರವೇಶ ಶುಲ್ಕ ವಸೂಲಾತಿಗೆ ಮಾಡುವ ಆದೇಶ ಹೊರಡಿಸಿದೆ. 2013ರ ಫೆಬ್ರವರಿಯಲ್ಲಿ ಗೋವಾ ಸರ್ಕಾರ ಹೊರ ರಾಜ್ಯಗಳ ವಾಹನಗಳಿಗೆ ಪ್ರವೇಶ ಶುಲ್ಕ ವಸೂಲಿ ಮಾಡಲು ಆರಂಭಿಸಿತ್ತು. ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸರಕು ಸಾಮಗ್ರಿಗಳನ್ನು ಪೂರೈಸುವ ಕರ್ನಾಟಕದ ಬೆಳಗಾವಿ, ಕಾರವಾರ ಮತ್ತು ಮಹಾರಾಷ್ಟ್ರದ ಸಿಂಧುದುರ್ಗ, ಕೊಲ್ಲಾಪುರ ಜಿಲ್ಲೆಗಳ ವಾಹನಗಳಿಗೆ ಈ ಶುಲ್ಕದಲ್ಲಿ ವಿನಾಯ್ತಿ ನೀಡಲಾಗಿತ್ತು. ಆದರೆ, ಇದೀಗ ಎಲ್ಲ ವಾಹನಗಳಿಗೆ ಪ್ರವೇಶ ಕರ ವಿಧಿಸಲು ನಿರ್ಧರಿಸಿದೆ. ನಾಲ್ಕು ಗಂಟೆಗಳ ಅವಧಿಯಲ್ಲಿ ಗೋವಾ ರಾಜ್ಯದಿಂದ ಮರಳಿ ಹೋದಲ್ಲಿ ಮಾತ್ರ ವಾಹನ ಪ್ರವೇಶ ಕರವನ್ನು ಹಿಂದುರಿಗಿಸುವ ಯೋಜನೆಯನ್ನು ರೂಪಿಸಿದ್ದು, ಈ ವ್ಯವಸ್ಥೆ ಆಗಸ್ಟ್ 22, 2014ರಿಂದ ಜಾರಿಗೆ ಬರಲಿದೆ.
ಎಷ್ಟು ವಸೂಲಿ: ಈ ಬಗ್ಗೆ ಗೋವಾ ಲೋಕೋಪಯೋಗಿ ಸಚಿವ ಧಾವಳೆಕರ ಘೋಷಣೆ ನೀಡಿರುವುದು ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ಈಗಾಗಲೇ ಗೋವಾ ನೋಂದಣಿ ಅಲ್ಲದ ಹೊರ ರಾಜ್ಯಗಳ ದ್ವಿಚಕ್ರ ವಾಹನಗಳಿಗೆ 15, ತ್ರಿಚಕ್ರ ವಾಹನಗಳಿಗೆ 100, ಲಘು ವಾಹನಗಳಿಗೆ 250, ಭಾರಿ ವಾಹನಗಳಿಗೆ 660 ಶುಲ್ಕ ವಸೂಲಿ ಮಾಡಲಾಗುತ್ತಿದೆ. ಆದರೆ, ಕರ್ನಾಟಕದಿಂದ ಹೆಚ್ಚಿನ ವಾಹನಗಳು ಗೋವಾಕ್ಕೆ ತೆರಳುತ್ತವೆ. ಸದ್ಯ ಗೋವಾದಲ್ಲಿ ಬಾಡಿಗೆ ವಾಹನಗಳಿಗೆ ಕರ್ನಾಟಕಕ್ಕೆ ಹೋಲಿಸಿದ್ದಲ್ಲಿ ಮೂರು ಪಟ್ಟು ಹೆಚ್ಚು ತೆರಿಗೆ ಪಡೆಯಲಾಗುತ್ತಿದೆ.