ನಿತ್ಯಾ ಪುರುಷತ್ವ ಪರೀಕ್ಷೆ: ತಡೆಯಾಜ್ಞೆ ತೆರವು
ಕನ್ನಡಪ್ರಭ ವಾರ್ತೆ , ಬೆಂಗಳೂರು , ಜು.16
ಸ್ವಯಂಘೋಷಿತ ದೇವಮಾನವ ನಿತ್ಯಾನಂದನ ವಿರುದ್ಧ ಸಿಐಡಿ ತನಿಖೆ ಮತ್ತು ಪುರುಷತ್ವ ಪರೀಕ್ಷೆಗೆ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಹೈಕೋರ್ಟ್ ತೆರವುಗೊಳಿಸಿದೆ.
ಜು.28ರಂದು ನಿತ್ಯಾನಂದನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುವಂತೆ ನ್ಯಾ.ಎಸ್. ಎನ್. ಸತ್ಯನಾರಾಯಣ ಅವರ ಪೀಠ ಪೊಲೀಸರಿಗೆ ಸೂಚಿಸಿದೆ.
ಧ್ಯಾನ ಪೀಠದ ಭಕ್ತಾದಿಗಳಾದ ಆರತಿ ಹಾಗೂ ಇತರರು ನಿತ್ಯಾನಂದನ ವಿರುದ್ಧ ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ್ದರು. ರಾಮನಗರ ಸೆಷನ್ಸ್ ಕೋರ್ಟ್ನಲ್ಲಿ ನಡೆದ ವಿಚಾರಣೆ ವೇಳೆ ಆರೋಪವನ್ನು ತಳ್ಳಿಹಾಕಿದ ನಿತ್ಯಾನಂದ, ತನಗೆ ಲೈಂಗಿಕ ಚಟುವಟಿಕೆಯಲ್ಲಿ ತೊಡಗುವ ಸಾಮರ್ಥ್ಯವಿಲ್ಲ. ಅಷ್ಟೇ ಅಲ್ಲದೆ ತಾನು ಆರು ವರ್ಷದ ಬಾಲಕನ ದೇಹ ಸ್ಥಿತಿ ಹೊಂದಿರುವುದಾಗಿ ಪ್ರತಿಪಾದಿಸಿದ್ದನು. ಆದರೆ ಇದನ್ನು ಒಪ್ಪದ ಸೆಷನ್ಸ್ ಕೋರ್ಟ್ ಪುರುಷತ್ವ ಪರೀಕ್ಷೆಗೆ ಒಳಪಡಿಸುವಂತೆ 2012ರ ಜೂ.12ರಂದು ಆದೇಶಿಸಿತ್ತು. ಈ ಆದೇಶವನ್ನು ರದ್ದುಪಡಿಸುವಂತೆ ನಿತ್ಯಾನಂದ ಹೈಕೋರ್ಟ್ ಮೆಟ್ಟಲೇರಿದ್ದನು.
ಈ ಸಂಬಂಧ ನಿತ್ಯಾನಂದನ ಪುರುಷತ್ವ ಪರೀಕ್ಷೆಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಬುಧವಾರ ವಿಚಾರಣೆ ನಡೆಸಿದ ಏಕಸದಸ್ಯ ಪೀಠ ತಡೆಯಾಜ್ಞೆ ತೆರವುಗೊಳಿಸಿ ತನಿಖೆಗೆ ಆದೇಶಿಸಿದೆ.
ಅಷ್ಟೇ ಅಲ್ಲದೆ, ರಾಸಲೀಲೆ ಪ್ರಕರಣದಲ್ಲಿ ಉಳಿದ ನಾಲ್ವರು ಆರೋಪಿಗಳಾದ ಗೋಪಾಲ್ ರೆಡ್ಡಿ, ಶಿವವಲ್ಲಭ ನೇನಿ, ರಾಗಿಣಿ ಮತ್ತು ಧನಶೇಖರನ್ ವಿರುದ್ಧ ಲೆನಿನ್ ನೀಡಿದ್ದ ದೂರನ್ನು ರದ್ದುಪಡಿಸುವಂತೆ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಅವಶ್ಯವಾಗಿದ್ದು ಇದರಲ್ಲಿ ಕೋರ್ಟ್ ಮಧ್ಯಪ್ರವೇಶಿಸುವುದಿಲ್ಲ ಎಂದು ಪೀಠ ಹೇಳಿದೆ.