ಗೋವಾ 'ತೀರದ' ರಾಜಕೀಯ ಮತ ಮಥನಕ್ಕೆ ಕನ್ನಡಿಗರು ಬಲಿ
ಕ.ಪ್ರ.ವಾರ್ತೆ, ವಾಸ್ಕೋ, ಜು. 17
ಗೋವಾ ಹಾಗೂ ಕರ್ನಾಟಕ ಸರ್ಕಾರದ ರಾಜಕೀಯ ದ್ವೇಷ, ಲಾಭದ ಲೆಕ್ಕಾಚಾರಕ್ಕೆ ಬೈನಾ ಕನ್ನಡಿಗರು ಬಲಿಯಾಗಿದ್ದಾರೆಯೇ ಎಂಬ ಪ್ರಶ್ನೆ ಇದೀಗ ಮೂಡುತ್ತಿದೆ.
ಇವರು ನಮ್ಮ ಪಕ್ಷದ ಪರ ಇದ್ದಾರೆ ಎಂಬ ದ್ವೇಷದಿಂದ ಬಾಂಬೆ ಹೈಕೋರ್ಟ್ ಗೋವಾ ಬೆಂಚ್ನ ಆದೇಶವನ್ನೂ ಪರಿಗಣಿಸದೆ ಸರ್ಕಾರ ಎತ್ತಂಗಡಿ ಮಾಡಿದೆ ಎಂದು ಗೋವಾ ಕಾಂಗ್ರೆಸ್ ಮುಖಂಡರು ಆರೋಪಿಸಿದ್ದರೆ, ಸಿಆರ್ಝಡ್ ವಲಯದಲ್ಲಿ ಬರುವುದರಿಂದ ಮನೆಗಳನ್ನು ತೆರವುಗೊಳಿಸಲಾಗಿದೆ. ಆರೋಪದಲ್ಲಿ ಹುರುಳಿಲ್ಲ ಎಂದು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಹೇಳಿದ್ದಾರೆ.
ಮುರುಘ ರಾಜೇಂದ್ರ ಶರಣರ ಭೇಟಿ
ವಾಸ್ಕೊ: ಅಥಣಿ ಮುರುಘಾಮಠದ ಪೀಠಾಧಿಪತಿ, ಚಿತ್ರದುರ್ಗದ ಮುರುಘ ರಾಜೇಂದ್ರ ಶಿಮಂೋಗಿ ಸ್ವಾಮೀಜಿ ಬೈನಾ ನಿರಾಶ್ರಿತ ಕನ್ನಡಿಗರನ್ನು ಗುರುವಾರ ಭೇಟಿ ಮಾಡಿ ರೊಟ್ಟಿ, ಔಷಧ, ಬಟ್ಟೆ ವಿತರಿಸಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸ್ವಾಮೀಜಿ, ಈ ಕೃತ್ಯ ಖಂಡನೀಯ, ನಿರಾಶ್ರಿತ ಕನ್ನಡಿಗರಿಗೆ ಶೀಘ್ರ ಗೋವಾ ಸರ್ಕಾರ ಪುನರ್ವಸತಿ ಕಲ್ಪಿಸಬೇಕು. ಕರ್ನಾಟಕ ಸರ್ಕಾರ ಪ್ರಕರಣದ ಮಧ್ಯಸ್ಥಿಕೆ ವಹಿಸಿ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು. 4 ಸಾವಿರಕ್ಕೂ ಅಧಿಕ ಜೋಳದ ರೊಟ್ಟಿ, 20 ಕೆ.ಜಿ. ಶೇಂಗಾಪುಡಿ, ಕಡಲೆ ಪುಡಿ, 200 ಸೀರೆ, 100 ರಗ್ಗು, ಬಟ್ಟೆಗಳು ಹಾಗೂ ಹಾಗೂ ಔಷಧ ವಿತರಿಸಲಾಯಿತು.
ಅಸಲಿ ಕಥೆ ಏನು?
ಈಗ ಗೋವಾದಲ್ಲಿರುವುದು ಬಿಜೆಪಿ ಸರ್ಕಾರ. ಹಾಗಾಗಿ ಅಧಿವೇಶನ ನಡೆಯುತ್ತಿದ್ದರೂ ನಮ್ಮ ರಾಜ್ಯದ ಬಿಜೆಪಿ ಮುಖಂಡರು ತೆಪ್ಪಗೆ ಕುಳಿದ್ದಾರೆ. ತಮ್ಮದೆ ಪಕ್ಷದ ವಿರುದ್ಧ ಸಮರ ಸಾರುವುದು ಹೇಗೆಂದು ತಿಳಿಯದೆ ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ. ಇವರಿಗೆ ನಿರ್ಗತಿಕ ಕನ್ನಡಿಗರಿಗಿಂತ ರಾಜಕೀಯ ಹಿತಾಸಕ್ತಿಯೇ ಹೆಚ್ಚಾದಂತಿದೆ.
'ಕೈ' ಕಟ್ಟಿದೆ ಏಕೆ?
ಗೋವಾ ಕನ್ನಡಿಗರು ಕಾಂಗ್ರೆಸ್ ಮತದಾರರು ಎಂದು ಅಲ್ಲಿನ ಕಾಂಗ್ರೆಸ್ ಮುಖಂಡರು ಬಹಿರಂಗವಾಗಿ ಹೇಳಿಕೆ ನೀಡಿದ್ದರೂ ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಮುಖಂಡರು ತುಟಿ ಬಿಚ್ಚುತ್ತಿಲ್ಲ. ಪಕ್ಷ ರಾಜಕೀಯ ಒತ್ತಟ್ಟಿಗಿರಲಿ, ಅವರು ಕರ್ನಾಟಕದವರು. ಅವರನ್ನು ರಕ್ಷಿಸುವ ಜವಾಬ್ದಾರಿ ತಮ್ಮ ಮೇಲಿದೆ ಎಂಬ ಪ್ರಜ್ಞೆಯೂ ಇವರಿಗೆ ಇದ್ದಂತಿಲ್ಲ. ಪ್ರತಿಪಕ್ಷದವರೇ ತಕರಾರು ಮಾಡುತ್ತಿಲ್ಲ ಎಂದಾದರೆ ತಮಗೇಕೆ ಈ ಉಸಾಬರಿ? ಎಂದು ಕೈಕಟ್ಟಿಕೊಂಡು ಕುಳಿತಿದ್ದಾರೆ.
ಬೆಂಗಳೂರಿಗೆ ಬೈನಾ ನಿರಾಶ್ರಿತರ ನಿಯೋಗ
ಗೋವಾ ಕನ್ನಡಿಗರ ಮುಖಂಡ ಸಿದ್ದಣ್ಣ ಮೇಟಿ ನೇತೃತ್ವದಲ್ಲಿ ಬೈನಾ ನಿರಾಶ್ರಿತರ ನಿಯೋಗ ಶುಕ್ರವಾರ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲಿದೆ. ಈ ನಡುವೆ ಗೃಹ ಇಲಾಖೆ ಸೂಚನೆ ಮೇರೆಗೆ ಕಾರವಾರದ ಪೊಲೀಸ್ ಅಧಿಕಾರಿಗಳ ತಂಡ ಬೈನಾಕ್ಕೆ ಭೇಟಿ ನೀಡಿದ್ದಕ್ಕೆ ದಕ್ಷಿಣ ಗೋವಾ ಕಲೆಕ್ಟರ್ ವೆನಾಸಿಯೋ ಪುಡ್ತಾಡೋ ಆಕ್ಷೇಪಿಸಿದ್ದಾರೆ. ತಮ್ಮ ಅನುಮತಿ ಪಡೆಯದೆ, ಮಾಹಿತಿಯನ್ನೂ ನೀಡದೆ ಕರ್ನಾಟಕದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದು ಸರಿಯಾದ ಕ್ರಮವಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆಧಾರವಿಲ್ಲ
ಇವರು ಕಾಂಗ್ರೆಸ್ನ ಮತದಾರರು ಎನ್ನಲು ಆಧಾರವಿಲ್ಲ. 2004ರಲ್ಲಿ ಮನೋಹರ್ ಪರಿಕ್ಕರ್ ನೇತೃತ್ವದ ಬಿಜೆಪಿ ಸರ್ಕಾರ ಬೈನಾದಲ್ಲಿ ಬೃಹತ್ ಪ್ರಮಾಣದಲ್ಲಿ ಕನ್ನಡಿಗರ ಮನೆಗಳನ್ನು ತೆರವುಗೊಳಿಸಿತ್ತು. ನಂತರ ಬಂದ ದಿಗಂಬರ ಕಾಮತ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಯಾವುದೇ ಮನೆಗಳನ್ನು ಮುಟ್ಟಿರಲಿಲ್ಲ. ಈಗ ಮತ್ತೆ ಕ್ಯಾತೆ ಶುರುವಾಗಿದೆ.
ವಸಂತಕುಮಾರ್ ಕತಗಾಲ