ತಮಿಳುನಾಡಿಗೆ ನೀರು: ರೈತ ಸಂಘ ಆಕ್ರೋಶ
ಕೃಷ್ಣರಾಜಸಾಗರ ಜಲಾಶಯದಿಂದ ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವ ಸರ್ಕಾರದ ನಿರ್ಧಾರವನ್ನು...
ಬೆಂಗಳೂರು : ಕೃಷ್ಣರಾಜಸಾಗರ ಜಲಾಶಯದಿಂದ ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವ ಸರ್ಕಾರದ ನಿರ್ಧಾರವನ್ನು ರಾಜ್ಯ ರೈತ ಸಂಘ ತೀವ್ರವಾಗಿ ಖಂಡಿಸಿದೆ.
ರಾಜ್ಯಕ್ಕೆ ನೀರಿನ ಆಗತ್ಯವಿರುವ ಹಿನ್ನೆಲೆಯಲ್ಲಿ ಸರ್ಕಾರ ತಕ್ಷಣ ನೀರು ಬಿಡುಗಡೆ ನಿಲ್ಲಿಸಬೇಕು. ಒಂದು ವೇಳೆ ನಿರ್ಲಕ್ಷ್ಯ ತೋರಿದರೆ, ಲಕ್ಷಾಂತರ ಮಂದಿ ರೈತರೊಂದಿಗೆ ಕೆ.ಆರ್.ಎಸ್ ಜಲಾಶಯಕ್ಕೆ ಮುತ್ತಿಗೆ ಹಾಕುವುದಾಗಿಯೂ ರೈತ ಸಂಘ ಎಚ್ಚರಿಸಿದೆ.
ರೈತ ಸಂಘಟನೆ ಮುಖಂಡ ಹಾಗೂ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಂಘದ ನಿರ್ಧಾರ ಪ್ರಕಟಿಸಿದರು.
ಮಳೆ ಕೊರತೆ ಹಿನ್ನೆಲೆಯಲ್ಲಿ ಕೃಷ್ಣರಾಜಸಾಗರ ಜಲಾಶಯ ಇನ್ನೂ ಭರ್ತಿಯಾಗಿಲ್ಲ. 34 ಅಡಿ ಬಾಕಿಯಿದೆ. ಅಲ್ಲದೆ, ನೀರು ಹರಿಸಲು ಕಾವೇರಿ ನೀರು ನಿರ್ವಹಣೆ ಸಮಿತಿ ತೀರ್ಮಾನವೂ ಆಗಿಲ್ಲ. ಸ್ಥಳೀಯ ಶಾಸಕರ ಗಮನಕ್ಕೂ ತಂದಿಲ್ಲ. ಇಷ್ಟಾಗಿಯೂ ಸರ್ಕಾರ ಎರಡು ದಿನಗಳಿಂದ ತಮಿಳುನಾಡಿಗೆ ಕದ್ದು ಮುಚ್ಚಿ ನೀರು ಹರಿಸುತ್ತಿರುವುದು ರೈತ ವಿರೋಧಿ ಧೋರಣೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾವೇರಿ ನ್ಯಾಯಮಂಡಳಿ ಪ್ರಕಾರ ಜೂನ್ ಮತ್ತು ಜುಲೈ ತಿಂಗಳಲ್ಲಿ ತಮಿಳುನಾಡಿಗೆ ಕೆ.ಆರ್.ಎಸ್‌ನಿಂದ 30 ರಿಂದ 50 ಟಿಎಂಸಿ ನೀರು ಹರಿಸಬೇಕು ನಿಜ. ಆದರೆ ಮಳೆಕೊರತೆಯಿಂದ ಜಲಾಶಯದಲ್ಲಿ ಈಗ ನೀರೇ ಇಲ್ಲ. ಇಷ್ಟಾಗಿಯೂ ಎಲ್ಲಿಂದ ನೀರು ತಂದು ತಮಿಳುನಾಡಿಗೆ ಹರಿಸಬೇಕು ಎಂದು ಪ್ರಶ್ನಿಸಿದರು.
ಭವಿಷ್ಯದಲ್ಲಿ ಮಳೆ ಪರಿಸ್ಥಿತಿ ಹೇಗಿದೆಯೋ ಗೊತ್ತಿಲ್ಲ. ಭರ್ತಿಯಾಗುವುದು ಬಾಕಿ ಇದ್ದಾಗಲೂ ಜಲಾಶಯದಿಂದ ಕದ್ದು ಮುಚ್ಚಿ ನೀರು ಹರಿಸುತ್ತಿರುವುದನ್ನು ನೋಡಿದರೆ, ಕುಡಿಯುವ ನೀರಿಗೂ ತೊಂದರೆಯಾಗುವ ಆತಂಕವಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ರೈತ ಸಂಘವು ಸರ್ಕಾರದ ನಿಲುವು ಖಂಡಿಸಿ ಮತ್ತು ತಕ್ಷಣ ನೀರು ನಿಲ್ಲಿಸುವಂತೆ ಆಗ್ರಹಿಸಿ ಹೋರಾಟ ರೂಪಿಸಲು ನಿರ್ಧರಿಸಿದೆ ಎಂದರು.
ಶುಕ್ರವಾರ ಕಾವೇರಿ ಹಿತರಕ್ಷಣಾ ಸಮಿತಿ ಸಭೆ ಕರೆಯಲಾಗಿದೆ. ಕೆ.ಆರ್.ಎಸ್ ಮುತ್ತಿಗೆ ಕಾರ್ಯಕ್ರಮದ ದಿನ ನಿಗದಿ ಸೇರಿದಂತೆ ಹೋರಾಟದ ರೂಪುರೇಷೆಗಳು ಅಲ್ಲಿ ನಿರ್ಧಾರವಾಗಲಿವೆ ಎಂದ ಅವರು, ಹೋರಾಟದಲ್ಲಿ ಕಾವೇರಿ ಜಲಾಶಯ ವ್ಯಾಪ್ತಿಯ ಎಲ್ಲ ಶಾಸಕರು ಪಾಲ್ಗೊಳ್ಳುವಂತೆ ಮನವಿ ಮಾಡಿದರು. ಗೋಷ್ಠಿಯಲ್ಲಿ ರೈತ ಮುಖಂಡರಾದ ನಾಗರಾಜ್, ಚಂದ್ರಶೇಖರ ಜಮಖಂಡಿ, ಸಣ್ಣೇಗೌಡ ಪಾಂಡವಪುರ, ವಿಜೇಂದ್ರ ಹಾಜರಿದ್ದರು.
ಕೆಆರ್‌ಎಸ್ ಇಂದಿನ ನೀರಿನ ಮಟ್ಟ
ಗರಿಷ್ಠಮಟ್ಟ - 124.80 ಅಡಿ
ಇಂದಿನ ಮಟ್ಟ - 92.30 ಅಡಿ
ಒಳ ಹರಿವು - 26,756 ಕ್ಯುಸೆಕ್
ಹೊರ ಹರಿವು - 10,455 ಕ್ಯುಸೆಕ್