ನ್ಯಾಯಮೂರ್ತಿ ಮೇಲೆ ವಕೀಲರೇ ಗರಂ
ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರ ವರ್ತನೆಗೆ ವಕೀಲರ ಸಮುದಾಯ...
ಕ.ಪ್ರ. ವಾರ್ತೆ | ಬೆಂಗಳೂರು | ಜು.17
ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರ ವರ್ತನೆಗೆ ವಕೀಲರ ಸಮುದಾಯ ಗುರುವಾರ ಬಹಿರಂಗವಾಗಿಯೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಮುಖ್ಯ ನ್ಯಾಯಮೂರ್ತಿಗಳಿಗೂ ಮೌಖಿಕ ದೂರು ಸಲ್ಲಿಸಿದೆ.
ರಾಜ್ಯ ಉಚ್ಚ ನ್ಯಾಯಾಲಯದ ಕೊಠಡಿ ಸಂಖ್ಯೆ 26ರಲ್ಲಿ ಇಂತಹ ಘಟನೆ ನಡೆದಿದೆ. ಪ್ರಕರಣವೊಂದರ ವಿಚಾರಣೆ ಸಂದರ್ಭದಲ್ಲಿ ಹಿರಿಯ ವಕೀಲರ ಬಗ್ಗೆ ಲಘುವಾಗಿ ಮಾತನಾಡಿದ ಪರಿಣಾಮ ಪರಿಸ್ಥಿತಿ ವಿಕೋಪಕ್ಕೆ ಹೋಯಿತು. ತೆರೆದ ಕೋರ್ಟ್‌ನಲ್ಲೇ 'ನ್ಯಾಯಮೂರ್ತಿಗಳನ್ನು ಗುಲ್ಬರ್ಗ ಅಥವಾ ಧಾರವಾಡ ಪೀಠಕ್ಕೆ ವರ್ಗಾಯಿಸಬೇಕು' ಎಂದು ವಕೀಲರು ಒತ್ತಾಯಿಸಿದರು. ಈ ಸಂಧರ್ಭ 150-200 ನ್ಯಾಯವಾದಿಗಳು ಸೇರಿದ್ದರು.
ಈ ಘಟನೆ ಹೈಕೋರ್ಟ್‌ನಲ್ಲಿ ದಿನವಿಡೀ ಚರ್ಚೆಗೀಡಾಯಿತು. ಬೆಳಗ್ಗೆ 10.30ಕ್ಕೆ ಕೋರ್ಟ್ ಆರಂಭವಾಗುತ್ತಿದ್ದಂತೆ ಗಲಾಟೆ ಆರಂಭವಾಯಿತು. ಕ್ಷಣ ಕ್ಷಣಕ್ಕೂ ಪರಿಸ್ಥಿತಿ ನಿಯಂತ್ರಣ ಮೀರಿ, ನೆರೆದಿದ್ದ ಬಹುತೇಕ ವಕೀಲರು ನ್ಯಾಯಮೂರ್ತಿಗಳ ವರ್ತನೆ ಕುರಿತಂತೆ ತಮ್ಮ ಅಸಮಾಧಾನ ಹೊರಹಾಕಿದರು.
ಹಿರಿಯ ವಕೀಲರು ಗರಂ!: ನಿತ್ಯಾನಂದನ ಪ್ರಕರಣ ಕುರಿತ ವಿಚಾರಣೆಗೆ ಅನಾರೋಗ್ಯ ಕಾರಣದಿಂದ ಹಿರಿಯ ವಕೀಲರೊಬ್ಬರು ಗೈರಾಗಿದ್ದರು. ವಿಚಾರಣೆಗೆ ಕಾಲಾವಕಾಶ ಕೋರಿದ್ದರೂ ಆದೇಶ ನೀಡಲಾಗಿದೆ, ಆದ್ದರಿಂದ ಆದೇಶ ಮರುಪರಿಶೀಲಿಸಬೇಕು ಎಂದು ಗುರುವಾರ ಬೆಳಗ್ಗೆ ವಕೀಲರು ಮನವಿ ಮಾಡಿಕೊಂಡರು.
ಇದನ್ನು ಪುರಸ್ಕರಿಸದೇ ಹಿರಿಯ ವಕೀಲರನ್ನು ನ್ಯಾಯಮೂರ್ತಿ ತರಾಟೆಗೆ ತೆಗೆದುಕೊಂಡರು. ನ್ಯಾಯಮೂರ್ತಿಗಳ ಈ ವರ್ತನೆ ವಿರೋಧಿಸಿ ಹಿರಿಯ ವಕೀಲರೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.
'ಕೋರ್ಟ್‌ಗೆ ಪ್ರತಿಯೊಬ್ಬರೂ ನ್ಯಾಯಕ್ಕಾಗಿ ಬರುತ್ತಾರೆ. ಇಲ್ಲಿ ಬರುವ ಪ್ರತಿ ಕಕ್ಷಿದಾರ ಗೌರವಯುತ ವರ್ತನೆ ಬಯಸುತ್ತಾರೆ. ಆದರೆ ಅವರನ್ನು ಏಕವಚನದಲ್ಲಿ ಸಂಬೋಧಿಸುವುದು, ಅನುಚಿತ ವರ್ತನೆ ಮಾಡುವುದು ಹಾಗೂ ವಕೀಲರೊಂದಿಗೆ ಉತ್ತಮ ಸಂಬಂಧ ಹೊಂದದಿರುವುದು ಒಳ್ಳೆಯದಲ್ಲ. ಕೋರ್ಟ್ ಘನತೆ ಕಾಪಾಡುವಲ್ಲಿ ಪ್ರತಿಯೊಬ್ಬರೂ ಸಹಕಾರ ನೀಡಬೇಕು' ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಕೋರ್ಟ್‌ಗೆ ಪ್ರವೇಶಿಸಿದ ವಕೀಲರ ತಂಡ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯಿಂದ ಹಿಂದೆ ಸರಿಯುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ನ್ಯಾಯಮೂರ್ತಿ, 'ರೋಸ್ಟರ್ ಬದಲಿಸುವುದು ಮುಖ್ಯನ್ಯಾಯಮೂರ್ತಿಗಳಿಗೆ ಬಿಟ್ಟ ವಿಚಾರ, ನಾನು ಈ ರೀತಿ ವರ್ತಿಸಿಲ್ಲ' ಎಂದು ಸಮಜಾಯಿಷಿ ನೀಡಿದ್ದಾರೆ.
ವಕೀಲರ ಸಂಘದ ಅಧ್ಯಕ್ಷ ಸುಬ್ಬಾರೆಡ್ಡಿ ಕೂಡ ಆಗಮಿಸಿ ನ್ಯಾಯಮೂರ್ತಿಗಳ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿದರು. ನಿಮ್ಮ ಬಗ್ಗೆ ಈ ಹಿಂದೆಯೂ ಧ್ವನಿಯೆತ್ತಿದ್ದೆ, ವಕೀಲರು ಹಾಗೂ ಪೊಲೀಸ್ ಅಧಿಕಾರಿಗಳನ್ನು ಗೌರವದಿಂದ ನಡೆಸಿಕೊಳ್ಳಿ ಎಂದು ಒತ್ತಾಯಿಸಿದರು.
ಹೈ.26 ವಿರುದ್ಧ ಸಿಜೆಗೆ ದೂರು
ಹೈಕೋರ್ಟ್ ಕೊಠಡಿ 26ರ ನ್ಯಾಯಮೂರ್ತಿಗಳ ವಿರುದ್ಧ ಮುಖ್ಯನ್ಯಾಯಮೂರ್ತಿಗೆ ಬೆಂಗಳೂರು ವಕೀಲರ ಸಂಘ ಮೌಖಿಕ ದೂರು ನೀಡಿದೆ. ಅವರನ್ನು ಕ್ರಿಮಿನಲ್ ಪ್ರಕರಣಗಳಿಂದ ಬೇರೆಡೆ ವರ್ಗಾಯಿಸಬೇಕು. ವಕೀಲರಿಗೆ ಗೌರವ ನೀಡುವ ಗುಣ ಬೆಳೆಸಿಕೊಳ್ಳಬೇಕು. ಇಲ್ಲವಾದಲ್ಲಿ ಆ ಕೋರ್ಟ್ ಕಲಾಪ ಬಹಿಷ್ಕರಿಸಬೇಕಾಗುತ್ತದೆ ಎಂದು ತಿಳಿಸಿರುವುದಾಗಿ ಸಂಘದ ಅಧ್ಯಕ್ಷ ಸುಬ್ಬಾರೆಡ್ಡಿ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ. ಈ ನ್ಯಾಯಮೂರ್ತಿಗಳ ವರ್ಗಾವಣೆಗೆ ಈ ಹಿಂದೆಯೂ ವಕೀಲರ ಸಂಘದಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಈಗ ಮತ್ತೆ ಮುಂದಿನ ವಾರ ವಿಶೇಷ ಸಾಮಾನ್ಯ ಸಭೆ ಕರೆಯಲಾಗಿದೆ ಎಂದು ತಿಳಿಸಿದ್ದಾರೆ.