ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಭೀತ ಬೆಂಗಳೂರಿನಲ್ಲಿ ಆರಕ್ಷಣೆ ಎಲ್ಲಿ?

ಬೇಜವಾಬ್ದಾರಿ 'ಉತ್ತರ' ಪ್ರದೇಶ ಮಾಡ ಹೊರಟ ರಾಜ್ಯ ಸರ್ಕಾರ

Vishwanath S
Updated On : 18 Jul 2014, 10:33 am

ಬೇಜವಾಬ್ದಾರಿ 'ಉತ್ತರ' ಪ್ರದೇಶ ಮಾಡ ಹೊರಟ ಸರ್ಕಾರ
ದೇಶದ ರಾಜಧಾನಿ ದೆಹಲಿಯಲ್ಲಿ ವರ್ಷಕ್ಕೆ 500 ಅತ್ಯಾಚಾರಗಳಾಗುತ್ತವೆ. ಆದ್ದರಿಂದ ರಾಜ್ಯದ ರಾಜಧಾನಿಯಲ್ಲಿ 499 ಅತ್ಯಾಚಾರ ನಡೆದರೆ ಅದು ದೊಡ್ಡ ಸಂಗತಿಯಲ್ಲ! - ಹೀಗೊಂದು ಸಮರ್ಥನೆ ಕೊಡಲು ಹೊರಟರೆ ಅದಕ್ಕಿಂತ ಮೂರ್ಖತನ ಮತ್ತೊಂದಿಲ್ಲ. ದುರದೃಷ್ಟಕ್ಕೆ ನಮ್ಮ ಸರ್ಕಾರ ಅತ್ಯಾಚಾರ ಪ್ರಕರಣಗಳ ಕುರಿತು ಇದೇ ಧಾಟಿಯಲ್ಲೇ ಮಾತನಾಡುತ್ತಿದೆ.

ರಾಜ್ಯದಲ್ಲಿ ಮಹಿಳೆಯರ ಅಸುರಕ್ಷೆ ಬಗ್ಗೆ ಪ್ರಶ್ನಿಸಿದರೆ ನಮ್ಮ ಗೃಹ ಸಚಿವರು 'ಮಧ್ಯಪ್ರದೇಶದಲ್ಲಿ ಆಗಲಿಲ್ಲವೇ?' ಎಂದು ಬಿಜೆಪಿ ಆಡಳಿತದಲ್ಲಿರುವ ರಾಜ್ಯದತ್ತ ಬೆರಳುತೋರಿಸಿದ್ದಾರೆ. ಅಲ್ಲಿ ಅತ್ಯಾಚಾರವಾದರೆ ಇಲ್ಲೂ ಆಗಲಿ ಬಿಡಿ ಎಂದೇ? ಬಿಜೆಪಿ ಆಡಳಿತದಲ್ಲಿರುವ ರಾಜ್ಯದಲ್ಲಿ ಅತ್ಯಾಚಾರ ಆಗಿದ್ದರಿಂದ ಕಾಂಗ್ರೆಸ್ ಸರ್ಕಾರ ಇರುವ ರಾಜ್ಯದಲ್ಲೂ ಅತ್ಯಾಚಾರ ಆದರೆ ತಪ್ಪಿಲ್ಲ ಎಂದೇ? ಇಂತಹ ಸಮರ್ಥನೆಗಳು ಸರ್ಕಾರಕ್ಕೆ ಗೌರವ ತರುತ್ತದೆಯೇ?
ಇನ್ನು 'ಬಿಜೆಪಿ ಸರ್ಕಾರ ಇದ್ದಾಗ ಅತ್ಯಾಚಾರ ಆಗಿಲ್ಲವೇ?' ಎಂದು ಸರ್ಕಾರ ಪ್ರಶ್ನಿಸಿದರೆ ಅದರರ್ಥ ಅವರ ಸರ್ಕಾರ ಇದ್ದಾಗಲೂ ಆಗಿದೆ ಆದ್ದರಿಂದ ನಮ್ಮ ಸರ್ಕಾರ ಇದ್ದಾಗಲೂ ಆಗಲಿಬಿಡಿ ಎಂದೇ? ಹೆದರಿದ, ನಲುಗಿದ ಜನಕ್ಕೆ ಇಂತಹ ಬೇಜವಾಬ್ದಾರಿ ಉತ್ತರ ಖಂಡಿತ ಸಮಾಧಾನ ನೀಡಲಾರದು.         

ಬೆಂಗಳೂರಿನಲ್ಲಿ ಒಂಟಿ ಮಹಿಳೆಯರ ಕೊಲೆ ಸಾಕಷ್ಟು ನಡೆದಿದೆ. ಒಂಟಿ ಬಿಡಿ ಈಗ ಜಂಟಿ ಮಹಿಳೆಯರಿಗೇ ರಕ್ಷಣೆಯಿಲ್ಲ. ಜತೆಗೆ ಗೆಳೆಯ, ಪರಿಚಿತ ಪುರುಷರು ಇರುವಾಗಲೇ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿವೆ. ಮಕ್ಕಳು ಸುರಕ್ಷಿತವೇ? ಎಲ್ಲಿ, ಯಾವ ಹೊತ್ತಿಗೆ, ಯಾರು ಅತ್ಯಾಚಾರ ಎಸಗುತ್ತಾರೋ ಯಾವ ಚಾಲಕನ ಕ್ರೌರ್ಯಕ್ಕೆ ಸಿಲುಕುತ್ತಾರೋ ಗೊತ್ತಿಲ್ಲ.
ಅದೆಲ್ಲ ಹೋಗಲಿ, ನಮ್ಮನ್ನೆಲ್ಲ ಕಾಯಬೇಕಾದ ಪೊಲೀಸರಿಗೇ ರಕ್ಷಣೆ ಇಲ್ಲ ಅಂದ ಮೇಲೆ ಬೇರೆಯವರ ಕತೆ ಕೇಳಬೇಕೆ?

ಶಾಸಕರು ಹೋಗುವ ದಾರಿಯಲ್ಲಿ ಟ್ರಾಫಿಕ್ ಜಾಂ ಆದರೆ ಶಾಸಕರು ಪೊಲೀಸರ ಕಪಾಳಕ್ಕೆ ಭಾರಿಸುತ್ತಾರೆ. ಹೊತ್ತು ಮೀರಿ ಪಾರ್ಟಿ ಮಾಡಿದ್ದನ್ನು ಪ್ರಶ್ನಿಸಿದರೆ ಅದಕ್ಕೂ ಶಾಸಕರಿಂದಲೇ ಪೊಲೀಸರಿಗೆ ಕಪಾಳಮೋಕ್ಷ. ಪೊಲೀಸ್ ಅಧಿಕಾರಿ ಹುಡುಗಿಯ ಅಶ್ಲೀಲ ಫೊಟೊ ತೆಗೆದರೆ, ಜಾತಿಯದ್ದೇ ದೊಡ್ಡ ಸಂಗತಿ. ಕ್ರಮಕೈಗೊಂಡ ಸಬ್‌ಇನ್‌ಸ್ಪೆಕ್ಟರ್ ಅಮಾನತು. ದೊಡ್ಡೋರ ಮಕ್ಕಳು ಅತಿವೇಗ ಮತ್ತು ಅಪಾಯಕಾರಿ ವಾಹನ ಓಡಿಸಿದರೆ ಅದಕ್ಕೂ ಪೊಲೀಸರು ಕ್ರಮಕೈಗೊಳ್ಳುವಂತಿಲ್ಲ. ತಮ್ಮ ಮೇಲೆ ಹಲ್ಲೆ, ದಬ್ಬಾಳಿಕೆ ಮಾಡಿದವರ ಮೇಲೆ ಕ್ರಮಕೈಗೊಳ್ಳಲಾಗದ ಅಸಾಹಯ ಸ್ಥಿತಿ ನಮ್ಮ ಪೊಲೀಸರದ್ದು. ಇನ್ನು ಬೇರೆಯರ ಮೇಲೆ ದೈರ್ಜನ್ಯ ಎಸಗಿದವರ ಮೇಲೆ ಏನು ಕ್ರಮಕೈಗೊಳ್ಳುವುದು?

ಈ ಪರಿಯಾಗಿ ಪೈಲೀಸರನ್ನು ನೈತಿಕ ಅಧಃಪತನಕ್ಕೆ ದೂಡಿದ ಸರ್ಕಾರ, ಅವರಿಂದ ಬೇರೆಯದರಲ್ಲಿ ಉತ್ತಮ ಕೆಲಸ ನಿರೀಕ್ಷಿಸುತ್ತಿದೆ. ಎಲ್ಲ ಪ್ರಕರಣಗಳಲ್ಲೂ ಕಾನೂನು ಪ್ರಕಾರ ಕ್ರಮಕೈಗೊಳ್ಳಲು ಪೊಲೀಸರಿಗೆ ಅಧಿಕಾರ ಕೊಟ್ಟಿದ್ದರೆ ಬಹುಶಃ ಬೆಂಗಳೂರಿನ ಸ್ಥಿತಿ ಹೀಗಾಗುತ್ತಿರಲಿಲ್ಲ. ಆದರೆ ಸರ್ಕಾರ ಕೊಂಚ ಹೆಚ್ಚೇ ಎನ್ನುವಷ್ಟು ಮಧ್ಯಪ್ರವೇಶ ಮಾಡುತ್ತಿದೆ. ಅದರಲ್ಲೂ ರವೀಂದ್ರನಾಥ್ ಪ್ರಕರಣದಲ್ಲಿ ಸರ್ಕಾರ ಪೊಲೀಸ್ ಇಲಾಖೆ ಶಿಸ್ತು ಮತ್ತು ಮಾನ ಎರಡನ್ನೂ ಬಹಿರಂಗವಾಗಿ ಹರಾಜು ಹಾಕಿಯಾಗಿದೆ. ನೈತಿಕವಾಗಿ ಕುಸಿದ ಪೊಲೀಸ್ ಇಲಾಖೆಯಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ?

ಯಾವುದೇ ಸರ್ಕಾರಗಳು ಬರಲಿ ಕೊಲೆ, ಸುಲಿಗೆ, ಅತ್ಯಾಚಾರಗಳನ್ನು ಸಂಪೂರ್ಣ ತಡೆಯುವುದು ಸಾಧ್ಯವಿಲ್ಲ ಎಂಬುದು ಸತ್ಯ. ಆದರೆ ಅದು ಜನಜೀವನದ ಮೇಲೆ ಗಂಭೀರ ಪರಿಣಾಮ ಬೀರುವ, ಸಾರ್ವಜನಿಕರಲ್ಲಿ ಅಸುರಕ್ಷೆಯ ಭಾವನೆ ಮೂಡಿಸುವ ಹಂತ ತಲುಪದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಸರ್ಕಾರದ್ದು. ಆದರೆ ಸರ್ಕಾರ ಪೊಲೀಸರಿಗೆ ಸೂಕ್ತ ಸ್ವಾತಂತ್ರ್ಯವನ್ನೇ ನೀಡಿಲ್ಲ ಎಂಬ ಆರೋಪವಿದೆ. ಮಿತಿಮೀರಿದ ಹಸ್ತಕ್ಷೇಪವೇ ಬೆಂಗಳೂರಿನ ಇಂದಿನ ಸ್ಥಿತಿಗೆ ಕಾರಣ ಎಂಬುದರಲ್ಲಿ ಅನುಮಾನವಿಲ್ಲ. ಸರ್ಕಾರದ ಧೋರಣೆಯಿಂದಾಗಿ ಪೊಲೀಸರು ಕೂಡ ಆರೋಪಿಯ ಜಾತಿ, ಧರ್ಮ, ಆತನ ರಾಜಕೀಯ ಸಂಪರ್ಕಗಳನ್ನು ಗಮನಿಸಿಕೊಂಡು ಕ್ರಮಕೈಗೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಇದು ಪೊಲೀಸರ ಕಾರ್ಯವೈಖರಿಯ ಮೇಲೆ ಪರಿಣಾಮಬೀರಿದೆ.

ಪ್ರತಿ ಪಕ್ಷ ನಾಯಕರಾಗಿದ್ದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಕಸದ ಬಗ್ಗೆ ಸರ್ಕಾರವನ್ನು ಭಾರೀ ತರಾಟೆಗೆ ತೆಗೆದುಕೊಂಡಿದ್ದರು. ಆದರೆ ಅವರು ಅಧಿಕಾರಕ್ಕೆ ಬಂದು ವರ್ಷದ ನಂತರ ಸ್ಥಿತಿ ಹಾಗೇ ಇದೆ. ಬೇರೆ ಬೇರೆ ಸಂಗತಿಗಳಿಗೆ ಹಿಂದಿನ ಬಿಜೆಪಿ ಸರ್ಕಾರವೇ ಹೊಣೆ ಎಂದು ಜಾರಿಕೊಳ್ಳಬಹುದು. ಆದರೆ ಕಾನೂನು ಸುವ್ಯವಸ್ಥೆಗೆ ಏನು ಹೇಳುತ್ತೀರಿ ಮುಖ್ಯಮಂತ್ರಿಗಳೇ?

ವಿನಾಯಕ ಭಟ್ಟ ಮೂರೂರು



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement