ರೇಪ್: ಅಸಹಾಯಕ ಸಚಿವರ ರಾಜಿನಾಮೆಗೆ ಬಿಜೆಪಿ ಬಿಗಿಪಟ್ಟು, ಇನ್ನಿಬ್ಬರು ಆರೋಪಿಗಳ ಸೆರೆ
ಯುವತಿ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಇನ್ಸ್ಪೆಕ್ಟರ್ನನ್ನು ರಕ್ಷಿಸಲು ಸಗಣಿ ಸಾರಿಸುವ ಕೆಲಸವನ್ನಷ್ಟೇ...
ವಿಧಾನಸಭೆ: ಯುವತಿ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಇನ್ಸ್ಪೆಕ್ಟರ್ನನ್ನು ರಕ್ಷಿಸಲು ಸಗಣಿ ಸಾರಿಸುವ ಕೆಲಸವನ್ನಷ್ಟೇ ಸರ್ಕಾರ ಮಾಡುತ್ತಿದ್ದು, ಇಲಾಖೆ ಮೇಲೆ ಹಿಡಿತ ಇಲ್ಲದ ಗೃಹ ಸಚಿವ ಕೆ.ಜೆ. ಜಾರ್ಜ್ ಅವರು ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದ ಬಿಜೆಪಿ, ಸಚಿವರ ಉತ್ತರವನ್ನು ವಿರೋಧಿಸಿ ಗುರುವಾರ ಸಭಾತ್ಯಾಗ ಮಾಡಿತು.
ಅತ್ಯಾಚಾರ ಪ್ರಕರಣದಲ್ಲಿ ದೂರು ದಾಖಲಿಸಿಕೊಳ್ಳದ ಇನ್ಸ್ಪೆಕ್ಟರ್ ಅಪರಾಧಿಯಾಗಿದ್ದರೂ ಆತನ ಮೇಲೆ ಕಠಿಣ ಕ್ರಮ ಕೈಗೊಂಡು ಬಂಧಿಸುತ್ತಿಲ್ಲ. ಅಲ್ಲದೆ, ದೂರು ಕೊಟ್ಟಿರುವ ಯುವತಿ, ಸ್ನೇಹಿತನಿಗೆ ಬೆದರಿಕೆ ಕರೆಗಳು ಬರುತ್ತಿದ್ದರೂ ಅವರ ರಕ್ಷಣೆಗೆ ಪೊಲೀಸ್ ಇಲಾಖೆ ಮುಂದಾಗಿಲ್ಲ. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಜನರಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸವನ್ನೇ ಮಾಡುತ್ತಿಲ್ಲ. ಗೃಹ ಸಚಿವರು ಅಸಹಾಯಕತೆ ಪ್ರದರ್ಶಿಸುತ್ತಾರೆ. ಇಂತಹವರು ಗೃಹಸಚಿವರಾಗಿರುವುದು ಬೇಡ ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ವಿಧಾನಸಭೆಯಲ್ಲಿ ಗುಡುಗಿದರು.
ಅತ್ಯಾಚಾರ ಪ್ರಕರಣದಲ್ಲಿ ಇನ್ನಿಬ್ಬರನ್ನು ಬಂಧಿಸಿ, ಐಪಿಸಿ 166ಎ ಪ್ರಕಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಗೃಹ ಸಚಿವರು ಉತ್ತರ ನೀಡಿದರೂ ಅವರ ಉತ್ತರವನ್ನು ಬಿಜೆಪಿ ಸದಸ್ಯರು ವಿರೋಧಿಸಿದರು. ಇದಕ್ಕಿಂತಲೂ ಕಠಿಣ ಕ್ರಮ ಕೈಗೊಳ್ಳಬಹುದಾದ ಐಪಿಸಿ 217 ಪ್ರಕಾರ ಪ್ರಕರಣ ದಾಖಲು ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ಅರ್ಧ ಗಂಟೆ ವಾಕ್ಸಮರ ನಡೆಯಿತು. ಗೃಹ ಸಚಿವರಿಗೆ ಇಲಾಖೆ ಮೇಲೆ ಹಿಡಿತವೇ ಇಲ್ಲ. ಅವರ ದೌರ್ಬಲ್ಯವನ್ನು ಎತ್ತಿ ತೋರಿಸಿದರೆ ಚೀರಾಡುತ್ತಾರೆ ಎಂದು ಬಿಜೆಪಿ ಸದಸ್ಯರು ಆರೋಪಿಸಿ ಸಭಾತ್ಯಾಗ ಮಾಡಿದರು.
ಇನ್ಸ್ಪೆಕ್ಟರ್ ಮೇಲೆ ಅಪರಾಧ ಪ್ರಕರಣ
ಯುವತಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ಸ್ಪೆಕ್ಟರ್ ಮೊಹಮದ್ ರಫೀಕ್ ಅವರನ್ನು ಅಮಾನತು ಮಾಡಲಾಗಿದ್ದು, ಹಿರಿಯ ಅಧಿಕಾರಿಗಳು ಪ್ರಕರಣ ಪರಿಶೀಲಿಸಿ ಜು.16ರಂದು ಅವರ ಮೇಲೆ ಐಪಿಸಿ 166ಎ ಪ್ರಕಾರ ಅಪರಾಧ ಮೊಕದ್ದಮೆಯನ್ನು ಪುಲಿಕೇಶಿನಗರ ಠಾಣೆಯಲ್ಲಿ ದಾಖಲಿಸಿದ್ದಾರೆ. ಪ್ರಕರಣದ ಸಂಬಂಧ ಇನ್ನಿಬ್ಬರು ಆರೋಪಿಗಳಾದ ಮೊಹಮದ್ ಅಲಿ (ಶೇಖ ಅಲಿ) ಮತ್ತು ವಸೀಮ್ ಖಾನ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನಿಬ್ಬರನ್ನು ಬಂಧಿಸಲು ಪ್ರಯತ್ನ ಮುಂದುವರಿದಿದೆ ಎಂದು ಗೃಹ ಸಚಿವ ಕೆ.ಜೆ. ಜಾರ್ಜ್ ವಿಧಾನಸಭೆಯಲ್ಲಿ ಉತ್ತರ ನೀಡಿದರು.
ನಾನು ಪೊಲೀಸ್ ಅಲ್ಲ. ಅವರ ಮೇಲೆ ಯಾವ ಸೆಕ್ಷನ್ನಲ್ಲಿ ಪ್ರಕರಣ ದಾಖಲಿಸಬೇಕು ಎಂದು ಹೇಳಲು ಆಗಲ್ಲ. ಹಿರಿಯ ಪೊಲೀಸ್ ಅಧಿಕಾರಿಗಳು ವಿಚಾರಣೆ ನಡೆಸಿ ಮೊಕದ್ದಮೆ ಹಾಕಿದ್ದಾರೆ. ನಾನು ಏನೂ ಸೂಚಿಸಲು ಸಾಧ್ಯ ಇಲ್ಲ. ನಾನು ಈ ಇಲಾಖೆಗೆ ಹೊಸಬ. ಒಂದು ಲಕ್ಷ ಸಿಬ್ಬಂದಿ ನನಗಿಂತ ಅನುಭವಸ್ಥರು.
-ಕೆ.ಜೆ. ಜಾರ್ಜ್, ಗೃಹ ಸಚಿವ