ಹೈಕೋರ್ಟ್ ಪೀಠ ವಿಸ್ತರಣೆಗಾಗಿ ರಸ್ತೆ ತಡೆ
ಗುಲ್ಬರ್ಗ: ಗುಲ್ಬರ್ಗ ಹೈಕೋರ್ಟ್ ಪೀಠದ ವ್ಯಾಪ್ತಿಗೆ ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳನ್ನೂ ಸೇರಿಸಬೇಕೆಂದು ಆಗ್ರಹಿಸಿ ಕಳೆದ ನಾಲ್ಕು ದಿನಗಳಿಂದ ಕಲಾಪ ಬಹಿಷ್ಕರಿಸಿ, ಮುಷ್ಕರ ನಡೆಸುತ್ತಿರುವ ವಕೀಲರು ಗುರುವಾರ ರಸ್ತೆ ತಡೆ ನಡೆಸಿದರು. ಕೆಎಟಿಯನ್ನು ಗುಲ್ಬರ್ಗದಲ್ಲಿಯೇ ಸ್ಥಾಪಿಸಬೇಕೆಂದು ಆಗ್ರಹಿಸುತ್ತಿರುವ ವಕೀಲರು ಜಿಲ್ಲಾಧಿಕಾರಿ ಖುದ್ದು ಬಂದು ಮನವಿ ಸ್ವೀಕರಿಸಬೇಕೆಂದು ಪಟ್ಟುಹಿಡಿದರು. ವಕೀಲರ ಆಗ್ರಹಕ್ಕೆ ಮಣಿದ ಡಿಸಿ ಖುದ್ದು ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿ, ಬೆಂಗಳೂರಲ್ಲಿರುವ ವಕೀಲರ ನಿಯೋಗ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನು ಕಂಡು ಜಿಲ್ಲಾ ಹಂಚಿಕೆಯಲ್ಲಿನ ಅನ್ಯಾಯದ ಬಗ್ಗೆ ಮನವರಿಕೆ ಮಾಡಿದ್ದಾರೆ. ಇದಲ್ಲದೆ ಕೆಎಟಿ ಸ್ಥಾಪನೆ ಗುಲ್ಬರ್ಗಕ್ಕೆ ಹೇಗೆ ಮಹತ್ವದ್ದು ಎಂಬ ಬಗ್ಗೆಯೂ ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದರು. ನಂತರ ರಸ್ತೆ ತಡೆ ಕೈಬಿಡಲಾಯಿತು.