ಅಂಕುಶವಿಲ್ಲದ ಅತ್ಯಾಚಾರ ಅರಿವಿಲ್ಲದ ಆರಕ್ಷಕ
ರಾಜಧಾನಿ ಸೇರಿ ರಾಜ್ಯಾದ್ಯಂತ ವರ್ಷದಿಂದ ವರ್ಷಕ್ಕೆ ಅತ್ಯಾಚಾರ, ಮಹಿಳೆಯರು, ಮಕ್ಕಳ ಮೇಲಿನ...
ಬೆಂಗಳೂರು: ರಾಜಧಾನಿ ಸೇರಿ ರಾಜ್ಯಾದ್ಯಂತ ವರ್ಷದಿಂದ ವರ್ಷಕ್ಕೆ ಅತ್ಯಾಚಾರ, ಮಹಿಳೆಯರು, ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೆ ಇದ್ದು, ಮಹಿಳೆಯರಲ್ಲಿ ಅಸುರಕ್ಷೆಯ ಭಾವನೆ ಮೂಡಿಸಿದೆ.
ಕಳೆದ ಮೂರುವರೆ ವರ್ಷಗಳಲ್ಲಿ ರಾಜ್ಯದಲ್ಲಿ ಬರೋಬ್ಬರಿ 2965 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಅರ್ಧಕ್ಕಿಂತ ಹೆಚ್ಚು ಅಂದರೆ 1542 ಮಂದಿ ಅಪ್ರಾಪ್ತರಾಗಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಇನ್ನು 2013ರಲ್ಲಿ ಮಹಿಳೆಯರ ಮೇಲೆ 8,983 ಲೈಂಗಿಕ ದೌರ್ಜನ್ಯ ಪ್ರಕರಣಗಳು ವರದಿಯಾಗಿವೆ. ಇದರಿಂದಾಗಿ ಮನೆಯಿಂದ ಹೊರ ಬಂದ ಮಹಿಳೆಯರು, ಯುವತಿಯರು, ಪುಟ್ಟ ಕಂದಮ್ಮಗಳು ಸುರಕ್ಷಿತರಾಗಿ ಮರಳುವ ಬಗ್ಗೆಯೇ ಆತಂಕ ಪೋಷಕರನ್ನು ಕಾಡುತ್ತಿದೆ. ಒಂದೂವರೆ ವರ್ಷದ ಕಂದಮ್ಮಗಳಿಂದ ಹಿಡಿದು 8 ರಿಂದ 10 ವರ್ಷದ ಪುಟ್ಟ ಮಕ್ಕಳನ್ನೂ ಕಾಮುಕರು ಬಿಡುತ್ತಿಲ್ಲ.
ಬೆಂಗಳೂರಿನಲ್ಲಿ ಕಳೆದ ಜನವರಿಯಲ್ಲಿ ವರ್ತೂರು ಬಳಿ ಪ್ರತಿಷ್ಠಿತ ಪ್ರೀ ನರ್ಸರಿಯ ಬಸ್ ಚಾಲಕ ಲೈಂಗಿಕ ದೌರ್ಜನ್ಯ ಎಸಗಿದ್ದ. ಮಾರ್ಚ್ ತಿಂಗಳಲ್ಲಿ ಚಂದ್ರ ಬಡಾವಣೆಯಲ್ಲಿ ಅರೆಬಿಕ್ ಪಾಠ ಮಾಡುವ ಶಿಕ್ಷಕನಿಂದ, ಜುಲೈ 2 ರಂದು ತೂಬರಹಳ್ಳಿ ಬಳಿ ಅಂತಾರಾಷ್ಟ್ರೀಯ ಶಾಲೆಯಲ್ಲಿ 1ನೇ ತರಗತಿ ವಿದ್ಯಾರ್ಥಿನಿ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಶಾಲಾ ಮಕ್ಕಳ ಪೋಷಕರನ್ನು ಆತಂಕಕ್ಕೀಡು ಮಾಡಿದೆ. ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸುವುದಾದರೂ ಹೇಗೆ ಎನ್ನುವಂತಾಗಿದೆ.
ಕರಾವಳಿಯಲ್ಲಿ ಸೌಜನ್ಯ ಅತ್ಯಾಚಾರ ಕೊಲೆ, ಕಳೆದ ವಾರ ಬೈಂದೂರು ಬಳಿ ಯುವತಿಯ ಅತ್ಯಾಚಾರ ಕೊಲೆ, ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ವಾಹನ ಚಾಲಕರು, ತಂದೆಯಿಂದಲೇ ಮಗಳ ಮೇಲೆ, ಅಜ್ಜನಿಂದ ಮೊಮ್ಮಗಳ ಮೇಲೆ, ಸಂಬಂಧಿಕರಿಂದ, ಸ್ನೇಹಿತರಿಂದ ಅತ್ಯಾಚಾರ, ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ವಂಚನೆ, ಕೆಲಸದ ಸ್ಥಳದಲ್ಲಿ ಅತ್ಯಾಚಾರ ಹೀಗೆ ಸಾವಿರಾರು ಸಂಖ್ಯೆಯಲ್ಲಿ ರಾಜ್ಯದಲ್ಲಿ ಅತ್ಯಾಚಾರ ಪ್ರಕರಣಗಳು ನಡೆಯುತ್ತಲೇ ಇವೆ.
ಬಹುತೇಕ ಪ್ರಕರಣಗಳಲ್ಲಿ ಆರೋಪಿಗಳು ಒಂದಲ್ಲ ಒಂದು ರೀತಿಯಲ್ಲಿ ಪರಿಚಿತರೇ ಆಗಿರುತ್ತಾರೆ. ಮಹಿಳೆಯರೊಂದಿಗೆ ಸಲುಗೆ, ವಿಶ್ವಾಸ ಬೆಳೆಸಿಕೊಂಡು ಕೃತ್ಯಗಳನ್ನು ಎಸಗುತ್ತಾರೆ.
ಇನ್ನು ಅಪ್ರಾಪ್ತರ ಮೇಲೆ ನಡೆಯುವ ಬಹುತೇಕ ಪ್ರಕರಣಗಳಲ್ಲೂ ಆರೋಪಿಗಳು ಪರಿಚಿತರೇ ಆಗಿರುತ್ತಾರೆ. ಹೀಗಾಗಿ ನೊಂದ ಹೆಣ್ಣು ಮಕ್ಕಳಿಗೆ ಅನಿರೀಕ್ಷಿತ ಆಘಾತಗಳಿವು.
ಕಠಿಣ ಕಾನೂನಿಗೂ ಜಗ್ಗಲಿಲ್ಲ
ದೆಹಲಿ ನಿರ್ಭಯಾ ಪ್ರಕರಣ ಬಳಿಕ ಅತ್ಯಾಚಾರಿಗಳ ವಿರುದ್ಧ ಕಠಿಣ ಕಾನೂನು ತರಲಾಗಿದ್ದು. ಗಂಭೀರ ಪ್ರಮಾಣದ ಲೈಂಗಿಕ ಕಿರುಕುಳ ಪ್ರಕರಣಗಳನ್ನು ಅತ್ಯಾಚಾರ ಪ್ರಕರಣಗಳಾಗಿ ಪರಿಗಣಿಸುವಂತೆ ತಿದ್ದುಪಡಿ ಮಾಡಲಾಗಿದೆ. ಈ ಮೂಲಕ ಕಾಮುಕರಿಗೆ ಎಚ್ಚರಿಕೆ ನೀಡುವ ಉದ್ದೇಶವಾಗಿತ್ತು. ದುರದೃಷ್ಟವಶಾತ್ ಇದರಿಂದ ಅತ್ಯಾಚಾರಿಗಳಿಗೆ ಯಾವುದೇ ಪಾಠವಾಗಿಲ್ಲ. ಅಲ್ಲದೇ ಕೇಂದ್ರ ಸರ್ಕಾರ ಮಾಡಿರುವ ತಿದ್ದುಪಡಿಯ ಬಗ್ಗೆ ಎಷ್ಟೋ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ಜ್ಞಾನವಿಲ್ಲ. ಹೀಗಾಗಿ ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರಕ್ಕೆ ಸಮನಾದ ಕೃತ್ಯಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿಲ್ಲ. ಪುಲಕೇಶಿನಗರ ಯುವತಿ ಪ್ರಕರಣದಲ್ಲಿ ಪೊಲೀಸರು ಕೂಡಲೇ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ತೋರಿರುವುದು ಪೊಲೀಸರಿಗೆ ಅತ್ಯಾಚಾರ ಹಾಗೂ ದೌರ್ಜನ್ಯ ಪ್ರಕರಣಗಳ ಬಗ್ಗೆ ಸೂಕ್ತ ಜ್ಞಾನ ಇಲ್ಲದಿರುವುದು ಕಂಡು ಬರುತ್ತಿದೆ.
8983 ವರ್ಷದಲ್ಲಿ ದೌರ್ಜನ್ಯ..!
ಇನ್ನು 2013ರಲ್ಲಿ ರಾಜ್ಯದಲ್ಲಿ ಒಟ್ಟು 8983 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. ಈ ಪೈಕಿ 7726 ಪ್ರಕರಣಗಳಲ್ಲಿ ಮಾತ್ರ ಆರೋಪಿಗಳ ಬಂಧನವಾಗಿದೆ. ಉಳಿದ ಪ್ರಕರಣಗಳಲ್ಲಿ ಆರೋಪಿಗಳ ಬಗ್ಗೆ ಯಾವುದೇ ಸುಳಿವು ಲಭ್ಯವಾಗಿಲ್ಲ.
2965 ಮೂರುವರೆ ವರ್ಷಗಳಲ್ಲಿ ರಾಜ್ಯದಲ್ಲಿ ಪ್ರಕರಣ
2011ರಿಂದ 2014ರ ಜೂನ್ ಅಂತ್ಯದ ವೇಳೆಗೆ ರಾಜ್ಯದಲ್ಲಿ 2965 ಅತ್ಯಾಚಾರಗಳು ವರದಿಯಾಗಿವೆ. ಈ ಪೈಕಿ ಅರ್ಧಕ್ಕಿಂತ ಹೆಚ್ಚು ಅಂದರೆ 1542 ಪ್ರಕರಣಗಳಲ್ಲಿ ಅಪ್ರಾಪ್ತರೆ ನೊಂದವರಾಗಿದ್ದಾರೆ. ಹಿಂದಿನ ವರ್ಷಗಳಿಗೆ ಹೋಲಿಸಿದ್ದಲ್ಲಿ 2014ರಲ್ಲಿ ಅತ್ಯಾಚಾರಗಳ ಸಂಖ್ಯೆಯಲ್ಲಿ ಆತಂಕಕಾರಿ ರೀತಿಯಲ್ಲಿ ಏರಿಕೆ ಕಂಡು ಬಂದಿದ್ದು ಆರು ತಿಂಗಳಲ್ಲಿ 325 ಹೆಣ್ಣು ಮಕ್ಕಳು ಅತ್ಯಾಚಾರಕ್ಕೊಳಗಾಗಿದ್ದಾರೆ.
-ಮಂಜುನಾಥ್ ನಾಗಲೀಕರ್