ಅತ್ಯಾಚಾರ: ರಾಜ್ಯ ಸಂಸದರ ಮೌನ
ಅತ್ತ ಕರ್ನಾಟಕದಲ್ಲಿ ಅತ್ಯಾಚಾರ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ..
ನವದೆಹಲಿ: ಅತ್ತ ಕರ್ನಾಟಕದಲ್ಲಿ ಅತ್ಯಾಚಾರ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆಗಳು ನಡೆಯುತ್ತಿದ್ದರೆ, ಇತ್ತ ಲೋಕಸಭೆಯಲ್ಲಿ ಕರ್ನಾಟಕ ಪ್ರತಿನಿಧಿಸುತ್ತಿರುವ ಯಾವೊಬ್ಬ ಸದಸ್ಯರೂ ಈ ಬಗ್ಗೆ ಚಕಾರ ಎತ್ತಲಿಲ್ಲ.
ಸಾಮಾನ್ಯವಾಗಿ ಸಾರ್ವಜನಿಕ ಹಿತಾಸಕ್ತಿಯ ತುರ್ತು ವಿಷಯಗಳ ಬಗ್ಗೆ ಪ್ರಸ್ತಾಪಿಸಿ ಚರ್ಚಿಸಲು ಶೂನ್ಯ ವೇಳೆಯನ್ನು ಮೀಸಲಿಡಲಾಗಿದೆ. ಆದರೆ, ಈ ಅವಧಿಯಲ್ಲಿ ಕರ್ನಾಟಕದ ಯಾವ ಸದಸ್ಯರೂ ಮಹಿಳಾ ದೌರ್ಜನ್ಯ ವಿಷಯವನ್ನು ಪ್ರಸ್ತಾಪಿಸಲೇ ಇಲ್ಲ.
ಗುರುವಾರವಷ್ಟೆ ಅತ್ಯಾಚಾರ ತಡೆಗೆ ಕ್ರಮಕೈಗೊಳ್ಳಲು ಕರ್ನಾಟಕಕ್ಕೆ ನಿರ್ದೇಶಿಸುವಂತೆ ಕೇಂದ್ರ ಗೃಹ ಸಚಿವರು ಹಾಗೂ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದ ಶೋಭಾ ಕರಂದ್ಲಾಜೆ ಕೂಡ ಪ್ರಸ್ತಾಪಿಸಲಿಲ್ಲ. ಇವರು ರಾಜ್ಯದಿಂದ ಆಯ್ಕೆ ಆಗಿರುವ ಏಕೈಕ ಮಹಿಳಾ ಸದಸ್ಯೆಯೂ ಹೌದು.
ರಾಜ್ಯದ ವಿಷಯದ ಪ್ರಸ್ತಾಪ: ಆದರೂ, ಕರ್ನಾಟಕದಲ್ಲಿ ನಡೆದಿರುವ ಅತ್ಯಾಚಾರಗಳ ವಿಷಯ ಶೂನ್ಯ ವೇಳೆಯಲ್ಲಿ ತುಸು ಪ್ರಸ್ತಾಪವಾಯಿತು. ಅದೂ ಬಿಹಾರದ ಸದಸ್ಯರ ಮೂಲಕ. ಬಿಹಾರದಲ್ಲಿ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿ ದೌರ್ಜನ್ಯ ನಡೆಸಿದ ಪ್ರಕರಣವನ್ನು ಬಿಜೆಪಿ ಸದಸ್ಯ ರಾಮ್‌ಕೃಪಾಲ್ ಯಾದವ್ ಪ್ರಸ್ತಾಪಿಸಿದರು.
ಇಂಥ ಪ್ರಕರಣಗಳ ತಡೆಗೆ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಟೀಕಿಸಿ, ಇಂಥ ಸರ್ಕಾರಕ್ಕೆ ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ಬೆಂಬಲ ನೀಡಿದೆ ಎಂದೂ ಕುಹಕವಾಡಿದರು. ಇದರಿಂದ ಕೆರಳಿದ ಆರ್‌ಜೆಡಿ ಸದಸ್ಯ ಪಪ್ಪು ಯಾದವ್, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ ರಾಜಕೀಕರಣಗೊಳಿಸುವುದು ಸರಿಯಲ್ಲ. ಈ ಪ್ರಕರಣ ಕರ್ನಾಟಕದಲ್ಲಾಗಲೀ, ಬಿಹಾರದಲ್ಲಾಗಲೀ ನಾಗರಿಕರು ತಲೆ ತಗ್ಗಿಸುವಂಥವು. ದುಷ್ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
ರಾಜಕೀಯ ಬೆರೆಸುವುದರಿಂದ ಯಾವುದೇ ಪರಿಹಾರ ಸಿಗುವುದಿಲ್ಲ ಎಂದರು. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದ ಬಿ.ಎಸ್.ಯಡಿಯೂರಪ್ಪ ಈ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸುವುದಾಗಿ ತಿಳಿಸಿದ್ದರೂ, ವಿಷಯವನ್ನು ಪ್ರಸ್ತಾಪಿಸಲೇ ಇಲ್ಲ.
ಕಣ್ಣೀರಿಟ್ಟ ಜಯಶ್ರೀ
ಕರ್ನಾಟಕದ ಅತ್ಯಾಚಾರ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಿಂದಾಗಿ ತೀವ್ರ ನೊಂದಿರುವ ಹಿರಿಯ ಕಲಾವಿದೆ, ರಾಜ್ಯಸಭಾ ಸದಸ್ಯೆ ಬಿ. ಜಯಶ್ರೀ ಕಣ್ಣೀರಿಟ್ಟಿದ್ದಾರೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಅತ್ಯಾಚಾರ ಪ್ರಕರಣಗಳ ಬಗ್ಗೆ ಮಾತನಾಡುತ್ತಿದ್ದ ಜಯಶ್ರೀ ಭಾವುಕರಾದರು. ಕಣ್ಣೀರು ತಡೆಯಲು ಸಾಧ್ಯವಾಗಲೇ ಇಲ್ಲ. ಸೋದರಿಯಾಗಿ, ತಾಯಿಯಾಗಿ, ಅಜ್ಜಿಯಾಗಿ ನನಗೆ ತುಂಬಾ ನೋವು ತಂದಿದೆ. ದುಃಖ ಉಮ್ಮಳಿಸಿ ಬರುತ್ತಿದೆ. ಅತ್ಯಾಚಾರ ಹೆಚ್ಚಾಗುತ್ತಿರುವುದು ಅತ್ಯಂತ ನೋವಿನ ಸಂಗತಿ. ಮೊದಲು ಹೆಣ್ಣು ಭ್ರೂಣ ಹತ್ಯೆ ಮಾಡುತ್ತಿದ್ದರು. ಹೆಣ್ಣು ಭ್ರೂಣ ಹತ್ಯೆ ಬಗ್ಗೆ ಜಾಗೃತಿ ಮೂಡಿಸಿದ ನಂತರವೂ ಸಮಾಜ ಹೆಣ್ಣನ್ನು ನಿಕೃಷ್ಟವಾಗಿ ಕಾಣ್ತಾ ಇದೆ. ಮಾನಸಿಕವಾಗಿ ಮಹಿಳೆಯರನ್ನು ಹಿಂಸಿಸುತ್ತಿದೆ. ದುಷ್ಕರ್ಮಿಗಳ ವಿರುದ್ಧ ಸಂಬಂಧ ಪಟ್ಟವರು ಕಠಿಣ ಕ್ರಮ ಕೈಗೊಳ್ಳಬೇಕು. ತೊಂದರೆಗಳು ನಮ್ಮ ಬುಡಕ್ಕೆ ಬಂದಾಗ ಮಾತ್ರ ಕಷ್ಟ ಏನು ಅನ್ನೋದು ಗೊತ್ತಾಗೋದು, ನಿಮ್ಮ ಮನೆಯ ಮಕ್ಕಳಿಗೆ ಹೀಗೆ ಆಗಿದ್ದರೆ ಏನು ಮಾಡುತ್ತಿದ್ದಿರಿ ಎಂದು ಪ್ರಶ್ನಿಸಿದರು.
ನೆರವಿಗೆ ಬನ್ನಿಶಾಸಕಿಯರ ಮೊರೆ
ಬೆಂಗಳೂರು: ಮಹಿಳೆಯರು ಮತ್ತು ಮಕ್ಕಳ ಮೇಲೆ ರಾಜ್ಯದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ಪ್ರಕರಣ ತಡೆಯಲು ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ವಿಧಾನಸಭೆಯ ಮಹಿಳಾ ಸದಸ್ಯರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ. ಕಾಂಗ್ರೆಸ್‌ನ ಶಕುಂತಲಾ ಶೆಟ್ಟಿ, ವಿನಿಶಾ ನೆರೊ, ಶಾರದಾ ಶೆಟ್ಟಿ, ಬಿಜೆಪಿಯ ಶಶಿಕಲಾ ಜೊಲ್ಲೆ, ರಾಮಕ್ಕ, ಜೆಡಿಎಸ್‌ನ ಶಾರದಾ ಪೂರ್ಯ ನಾಯ್ಕ ಅವರು ಈ ಮನವಿ ಪತ್ರ ಸಲ್ಲಿಸಿದ್ದಾರೆ.
ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವುದು ಸಾರ್ವಜನಿಕ ವಲಯದಲ್ಲಿ ಭಯ-ಭೀತಿ ಸೃಷ್ಟಿಸಿದೆ. ಜನರು ಕಾನೂನು ಮತ್ತು ಸುವ್ಯವಸ್ಥೆ ಮೇಲೆ ನಂಬಿಕೆ ಕಳೆದುಕೊಳ್ಳುವಂತಾಗಿದೆ. ಚಿಕ್ಕಮಕ್ಕಳು ಹಾಗೂ ವಿದ್ಯಾರ್ಥಿನಿಯರ ಮೇಲೆ ನಡೆಯುತ್ತಿರುವ Ú ದೌರ್ಜನ್ಯ ಗಮನಿಸಿದರೆ ಪೋಷಕರು ತಮ್ಮ ಮಕ್ಕಳನ್ನು ಶಾಲಾ- ಕಾಲೇಜಿಗೆ ಕಳುಹಿಸದೇ ಇರುವಂಥ ಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.ಇಂಥ ಪ್ರಕರಣಗಳನ್ನು ಗಮನಿಸಿದಾಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಯಲ್ಲಿರುವ ನಮ್ಮಂಥವರಿಗೂ ಆತಂಕ ಕಾಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ಮಹಿಳಾ ರಕ್ಷಣೆಗೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು. ಆರೋಪಿಗಳನ್ನು ತಕ್ಷಣ ಬಂಧಿಸುವ ಜತೆಗೆ ಕಾನೂನು ಕ್ರಮ ಬಿಗಿಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
-ಕನ್ನಡಪ್ರಭ ಪ್ರತಿನಿಧಿಯಿಂದ