ಕೊಡಚಾದ್ರಿ ಬಳಿ ರಸ್ತೆ ಕುಸಿತ
ಹೊಸನಗರ: ತಾಲೂಕಿನಾದ್ಯಂತ ಸುರಿಯುತ್ತಿರುವ ಮಳೆಗೆ ಪ್ರಸಿದ್ಧ ಕೊಡಚಾದ್ರಿ ಗಿರಿಗೆ ತೆರಳುವ ಗೌರಿಕೆರೆ- ಕಟ್ಟಿನಹೊಳೆ ಮಾರ್ಗ ಮಧ್ಯದಲ್ಲಿ ರಸ್ತೆ ಭಾರಿ ಕುಸಿತ ಕಂಡಿದೆ.
ಶುಕ್ರವಾರ ಬೆಳಗ್ಗೆ ಕುಸಿತ ಕಂಡು ಬಂದಿದ್ದು, ಈ ಮಾರ್ಗದಲ್ಲಿ ವಾಹನ ಸಂಪರ್ಕ ಕಡಿತಗೊಂಡಿದೆ. ರಸ್ತೆ ಕುಸಿತದಿಂದಾಗಿ ಕುಂಬ್ಳೆ, ಮಂಜಗಳಲೆ, ಕಟ್ಟಿನೊಳೆ ಸೇರಿದಂತೆ ಕುಸಿತ ಕಂಡ ರಸ್ತೆ ಮಾರ್ಗದ ಸಂಪರ್ಕ ಹೊಂದಿರುವ ಗ್ರಾಮಗಳಿಗೆ ಸಂಪರ್ಕ ಇಲ್ಲದಂತಾಗಿದೆ. ಬಸ್ಸಿನ ಸಂಪರ್ಕ ಕೂಡ ಸಾಧ್ಯವಾಗದ ಹಿನ್ನಲೆಯಲ್ಲಿ ಶಾಲಾ ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ದಿಕ್ಕು ತೋಚದಂತ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಕುಸಿದಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಸುಮಾರು 8 ಕಿಮೀ ನಡೆದೇ ಬರಬೇಕಾದ ಪರಿಸ್ಥಿತಿ ಇದೆ. ಸುತ್ತಾಕಿ ಸಂಪೇಕಟ್ಟೆ ಮಾರ್ಗದಿಂದ ಬರಬಹುದಾದರು ಬಸ್ಸಿನ ವ್ಯವಸ್ಥೆ ಇಲ್ಲ.
ಪ್ರವಾಸಿಗಳಿಗೆ ತೊಂದರೆ: ವಿಶ್ವ ಪ್ರಸಿದ್ಧ ಕೊಡಚಾದ್ರಿ ಅದರಲ್ಲು ಮಳೆ ಪ್ರಾರಂಭ ಆದ ನಂತರ ಜೀವಕಳೆ ತುಂಬಿಕೊಂಡಿರುವ ಹಿಡ್ಲಮನೆ ಫಾಲ್ಸ್ಗೆ ಹೋಗಲು ಇದೇ ಮಾರ್ಗ ಪ್ರಮುಖವಾಗಿದ್ದು, ಪ್ರವಾಸಿಗರು ಈ ತಾಣಕ್ಕೆ ತೆರಳಲು ಕಷ್ಟಸಾಧ್ಯವಾಗಿದೆ.
ಸ್ಥಳೀಯರ ಆಕ್ರೋಶ: ಕಳೆದ ಎರಡು ವರ್ಷದಿಂದ ರಸ್ತೆ ನಿರ್ವಹಣೆ ಮಾಡದಿರುವುದು ಮತ್ತು ಮುಂಜಾಗ್ರತೆ ವಹಿಸದಿರುವುದು ಈ ದುರಂತಕ್ಕೆ ಕಾರಣವಾಗಿದೆ ಎಂದು ಅಮ್ಲಾಡಿ ಸತೀಶ್ ಸೇರಿದಂತೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.