ಗುರುತು ಪತ್ತೆ ಪರೇಡ್ ಬಚಾವಾದ ವಾಸೀಂ, ಅಲಿ
ಬೆಂಗಳೂರು: ಪುಲಕೇಶಿನಗರದಲ್ಲಿ ಯುವತಿ ಮೇಲೆ ಅತ್ಯಾಚಾರ ಪ್ರಕರಣ ಸಂಬಂಧ ಬಂಧಿತ ಆರೋಪಿಗಳಾದ ವಾಸೀಂ ಹಾಗೂ ಅಲಿ ಎಂಬುವರನ್ನು ಯುವತಿ ಗುರುತಿಸದ ಕಾರಣ ಪ್ರಕರಣದಿಂದ ಕೈ ಬಿಡುವ ಸಾಧ್ಯತೆ ಇದೆ. ಆಂಧ್ರಪ್ರದೇಶದಲ್ಲಿ ಬಂಧಿತರಾದ ಇಬ್ಬರು ಆರೋಪಿಗಳಾದ ವಾಸೀಂ ಹಾಗೂ ಮಹ್ಮದ್ ಅಲಿ ಅವರನ್ನು ಶುಕ್ರವಾರ ಯುವತಿ ಮುಂದೆ 'ಐಡೆಂಟಿಫಿಕೇಶನ್ ಪರೇಡ್' ನಡೆಸಲಾಯಿತು. ಈ ವೇಳೆ ಅಪಹರಿಸಿ ಅತ್ಯಾಚಾರ ಎಸಗಿದ ಆರೋಪಿಗಳು ಇವರಲ್ಲ ಎಂದು ಹೇಳಿದ್ದಾಳೆ. ಹೀಗಾಗಿ ಪೊಲೀಸರು ತೀವ್ರ ಗೊಂದಲಕ್ಕೀಡಾಗಿದ್ದು ಮತ್ತೆ ಪ್ರಮುಖ ಆರೋಪಿ ಹೈದರ್ ನಾಸೀರ್ನನ್ನು ವಿಚಾರಣೆಗೆ ಒಳಪಡಿಸಲು ನಿರ್ಧರಿಸಿದ್ದಾರೆ. ಇಬ್ಬರು ಆರೋಪಿಗಳಿಂದ ಮಾಹಿತಿ ಪಡೆದು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೃತ್ಯ ಎಸಗುತ್ತಿದ್ದ ವೇಳೆ ಅತೀಕ್ ಹಾಗೂ ಇಮ್ತಿಯಾಜ್ ಎಂಬುವರು ಜತೆಗಿದ್ದರು ಎಂದು ನಾಸೀರ್ ಹೇಳಿಕೆ ನೀಡಿದ್ದ. ಇದೇ ವೇಳೆ ಅಲಿ ಹಾಗೂ ವಾಸೀಂ ಎಂಬುವರು ಕೃತ್ಯ ಎಸಗುತ್ತಿದ್ದ ವೇಳೆ ಜತೆಗಿದ್ದರು ಎಂದು ನಾಸೀರ್ ಹೇಳಿದ್ದ.
ಇನ್ಸ್ಪೆಕ್ಟರ್ ರಫೀಕ್ ಬಂಧನ, ಬಿಡುಗಡೆ
ಬೆಂಗಳೂರು: ಅತ್ಯಾಚಾರ (ಐಪಿಸಿ 276) ಪ್ರಕರಣ ದಾಖಲಿಸದೇ ಇರುವುದು, ನೊಂದ ಯುವತಿಯ ವೈದ್ಯಕೀಯ ಪರೀಕ್ಷೆ ವಿಳಂಬ ಮಾಡಿರುವುದು, ಆರೋಪಿಗಳ ಬಗ್ಗೆ ಮಾಹಿತಿ ನೀಡಿದರೂ ಬಂಧಿಸದಿರುವುದು, ಹಿರಿಯ ಅಧಿಕಾರಿಗಳಿಗೆ ಘಟನೆ ಬಗ್ಗೆ ಮಾಹಿತಿ ನೀಡದೆ ಇರುವುದು. ಹೀಗೆ ಅತ್ಯಾಚಾರ ಪ್ರಕರಣದಲ್ಲಿ ಹಲವು ಲೋಪಗಳನ್ನು ಎಸಗಿರುವ ಪುಲಕೇಶಿನಗರ ಇನ್ಸ್ಪೆಕ್ಟರ್ ರಫೀಕ್ ವಿರುದ್ದ ಐಪಿಸಿ 166(ಎ) ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಶುಕ್ರವಾರ ಬೆಳಗ್ಗೆ ಬಂಧಿಸಿದ್ದರು. ಹಲಸೂರು ಎಸಿಪಿ ಮಂಜುನಾಥ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ರಫೀಕ್ ಅವರನ್ನು ಸುಮಾರು ಎರಡುವರೆ ತಾಸುಗಳ ಕಾಲ ವಿಚಾರಣೆ ನಡೆಸಿದರು. ಈ ವೇಳೆ ಪ್ರಕರಣ ದಾಖಲಿಸಿಕೊಳ್ಳುವಲ್ಲಿ ಲೋಪ ಆಗಿರುವುದನ್ನು ರಫೀಕ್ ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ದೆಹಲಿ ನಿರ್ಭಯಾ ಪ್ರಕರಣದ ಬಳಿಕ ಮಹಿಳೆಯರ ವಿರುದ್ಧದ ಗಂಭೀರ ಅಪರಾಧ ಪ್ರಕರಣಗಳನ್ನು ಅತ್ಯಾಚಾರಕ್ಕೆ ಸಮನಾದ 376 ಸೆಕ್ಷನ್ ಹಾಕಬೇಕು ಎನ್ನುವ ಬಗ್ಗೆ ನನಗೆ ಅರಿವಿರಲಿಲ್ಲ. ಹೀಗಾಗಿ ಅ ಸೆಕ್ಷನ್ನ್ನು ಹಾಕಿರಲಿಲ್ಲ. ನನ್ನಿಂದ ಲೋಪವಾಗಿದೆ ಎಂದು ರಫೀಕ್ ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ವೈದ್ಯ ಪರೀಕ್ಷೆ ವಿಳಂಬಕ್ಕೆ ಯುವತಿಯೇ ಕಾರಣ ಎಂದು ರಫೀಕ್ ಹೇಳಿದ್ದಾರೆ. ಘಟನೆ ಬಗ್ಗೆ ಯುವತಿ ಠಾಣೆಗೆ ದೂರು ನೀಡಲು ಆಗಮಿಸಿದ್ದಳು. ದೂರು ದಾಖಲಿಸಿಕೊಂಡ ಬಳಿಕ ಆಕೆಯನ್ನು ವೈದ್ಯ ಪರೀಕ್ಷೆಗೆ ಕರೆದೊಯ್ಯುವುದಾಗಿ ಹೇಳಿದೆವು.. ಆದರೆ, ಯುವತಿ ತನಗೆ ಸುಸ್ತಾಗಿದ್ದು ವಿಶ್ರಾಂತಿ ತೆಗೆದುಕೊಂಡು ನಂತರ ವೈದ್ಯ ಪರೀಕ್ಷೆಗೆ ಹಾಜರಾಗುವುದಾಗಿ ಹೇಳಿಕೆ ನೀಡಿದ್ದಳು. ಹೀಗಾಗಿ ವೈದ್ಯ ಪರೀಕ್ಷೆ ವಿಳಂಬವಾಗಿದೆ. ಅದರಲ್ಲಿ ನನ್ನ ಲೋಪವಿಲ್ಲ ಎಂದು ರಫೀಕ್ ತಿಳಿಸಿದ್ದಾರೆ. ಪ್ರಕರಣ ಸಂಬಂಧ ಇನ್ಸ್ಪೆಕ್ಟರ್ ವಿಚಾರಣೆ ಬಳಿಕ ಷರತ್ತು ಬದ್ದ ಪೊಲೀಸ್ ಠಾಣೆ ಜಾಮೀನು ನೀಡಲಾಗಿದೆ ಎಂದು ತನಿಖಾಧಿಕಾರಿ ಮಾಹಿತಿ ನೀಡಿದರು.