ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಅರಿವು ಮೀರಿ ಬರುವ ನಿದ್ದೆಗೆ ಸಿದ್ದು ಪ್ರಾಣಾಯಾಮದ ಮೊರೆ

Vishwanath S
Updated On : 20 Jul 2014, 12:27 pm

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರಿಗೆ ಎಲ್ಲೆಂದರಲ್ಲಿ ನಿದ್ದೆ..!
ಸಭೆ-ಸಮಾರಂಭವಿರಲಿ, ಚುನಾವಣಾ ಪ್ರಚಾರವಿರಲಿ, ಅಧಿಕಾರಿಗಳ ಸಭೆಯಾಗಿರಲಿ, ವಿಧಾನಸಭೆ ಕಲಾಪದ ದೊಡ್ಡ ಗದ್ದಲವಿರಲಿ, ಪಕ್ಕದಲ್ಲಿ ರಾಹುಲ್ ಗಾಂಧಿ, ದಿಗ್ವಿಜಯ್ ಸಿಂಗ್ ಇರಲಿ. ಸಿದ್ದರಾಮಯ್ಯ ಸದ್ದಿಲ್ಲದೇ ನಿದ್ದೆಗೆ ಜಾರಿ ಬಿಡುತ್ತಾರೆ. ಎಷ್ಟೇ ಗದ್ದಲವಿದ್ದರೂ ಸಿದ್ದರಾಮಯ್ಯನವರ ತಲೆ ನಿದ್ದೆಯ ತೂಕ ಮಾಡಲಾರಂಭಿಸುತ್ತದೆ.
ಇದರ ಫಲವಾಗಿ 'ತೂಕಡಿಸಿ ತೂಕಡಿಸಿ ಬೀಳದಿರು ಸಿದ್ದು, ನಮ್ಮ ಸಿದ್ದು ನಿಲ್ಲು ಎದ್ದು' ಎಂದು  ಫೇಸ್‌ಬುಕ್, ಟ್ವಿಟರ್‌ಗಳಲ್ಲಿ ಟೀಕೆಯ ಸುರಿಮಳೆ. ಟಿವಿಗಳಂತೂ ನಿದ್ದೆರಾಮಯ್ಯ ಎಂದರೆ, ಪ್ರತಿಪಕ್ಷಗಳು ನಿದ್ದೆ ಮಾಡುವುದು ಸಿದ್ದರಾಮಯ್ಯನವರಲ್ಲ ಸರ್ಕಾರ ಎಂದು ಕಾಲೆಳೆಯುತ್ತಿವೆ.
ಹಾಗಾದರೆ ಸಿದ್ದರಾಮಯ್ಯ ಹಗಲು ಹೊತ್ತು ಕುಂತಲ್ಲಿ, ನಿಂತಲ್ಲಿ ನಿದ್ದೆ ಮಾಡುವುದೇಕೆ ಎಂಬುದೇ ಈಗ ಸಾರ್ವಜನಿಕರ ಚರ್ಚೆಯ ವಸ್ತು. ಆದರೆ ಮಂದಿಗೇನು ಗೊತ್ತು ಸಿದ್ದರಾಮಯ್ಯನವರ ಕಷ್ಟ! ಏಕೆಂದರೆ ಅವರನ್ನು ಕಾಡುತ್ತಿದೆ ಅಬ್‌ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ. ಸಿದ್ದರಾಮಯ್ಯನವರಿಗೆ ಅಬ್‌ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ ಎಂಬ ಲಘು ಉಸಿರಾಟದ ಸಮಸ್ಯೆ ಕಾಡುತ್ತಿದೆ. ಇದರ ಫಲವಾಗಿಯೇ ಅವರಿಗೆ ರಾತ್ರಿಯ ಬದಲು ಹಗಲು ಸೊಗಸಾಗಿ ನಿದ್ದೆ ಆವರಿಸಿಬಿಡುತ್ತದೆ.
ಓಎಸ್‌ಎ: ವೈದ್ಯ ವಿಜ್ಞಾನದ ಪರಿಭಾಷೆಯಲ್ಲಿ ಈ ಅಬ್‌ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾವನ್ನು ಓಎಸ್‌ಎ ಎಂದು ಕರೆಯುತ್ತಾರೆ. ಚಿತ್ರ ನಟ ಅಂಬರೀಷ್ ಅವರಿಗೂ ಈ ಕಾಯಿಲೆ ಇತ್ತು. ಅಷ್ಟು ಮಾತ್ರವಲ್ಲ ನಮ್ಮ ಹಲವು ಸೆಲಬ್ರಿಟಿಗಳಿಗೂ ಈ ನಿದ್ರಾ ಸಮಸ್ಯೆ ಇದೆ. ಈ ಸಮಸ್ಯೆ ಹಲವು ವರ್ಷಗಳವರೆಗೆ ಗಮನಕ್ಕೆ ಬರುವುದೇ ಇಲ್ಲ. ಉಸಿರಾಟದ ಮೇಲ್ನಾಳದ ಸುತ್ತಲಿನ ಮೃದುವಾದ ಟಿಶ್ಯುಗಳು ಕಿರಿದಾಗುತ್ತಾ ಹೋಗುವುದರಿಂದ ರಾತ್ರಿ ಮಲಗಿದಾಗ ಸಲೀಸಾಗಿ ಉಸಿರಾಡುವುದಕ್ಕೆ ಕಷ್ಟವಾಗುತ್ತದೆ.
ಇದರಿಂದ ರಾತ್ರಿ ಮಲಗಿದರೂ ತುಂಬಾ ಸಮಯದವರೆಗೆ ನಿದ್ದೆಯೇ ಬರುವುದಿಲ್ಲ. ರಾತ್ರಿ ನಿದ್ದೆ ಸರಿಯಾಗಿ ಬಾರದೇ ಇರುವುದರಿಂದ ಈ ಸಮಸ್ಯೆ ಇರುವ ವ್ಯಕ್ತಿಗಳು ಹಗಲು ಹೊತ್ತು ನಿದ್ದೆಗೆ ಜಾರುತ್ತಾರೆ. ಅಷ್ಟೇ ಅಲ್ಲ ಎಚ್ಚರ ಇದ್ದಾಗಲೂ ಒಂದು ತರದ ಮಂಪರು ಆವರಿಸಿರುತ್ತದೆ.
ಇಂಥ ಸಮಸ್ಯೆ ಇರುವ ವ್ಯಕ್ತಿಗಳಿಗೆ ಮಲಗುವಾಗ ಮಾಸ್ಕ್ ಧರಿಸುವಂತೆ ವೈದ್ಯರು ಸಲಹೆ ನೀಡುತ್ತಾರೆ. ಮಾಸ್ಕ್ ಧರಿಸಿ ಮಲಗುವುದರಿಂದ ಆಮ್ಲಜನಕವನ್ನು ಬಲವಾಗಿ ಒಳ ತಳ್ಳುವುದಕ್ಕೆ ಸಹಾಯವಾಗುತ್ತದೆ. ಇದರಿಂದ ನಾಳ ಕಿರಿದಾದರೂ ಉಸಿರಾಟ ಸಲೀಸಾಗುತ್ತದೆ. ಮೂರರಿಂದ ಆರು ತಿಂಗಳ ಕಾಲ ಸರಿಯಾಗಿ ವೈದ್ಯರ ಸಲಹೆ ಪಾಲಿಸಿದರೆ ಈ ಸಮಸ್ಯೆಯಿಂದ ಹೊರಬರಬಹುದು ಎನ್ನುತ್ತಾರೆ ಉಸಿರಾಟ ತಜ್ಞರು.
ಬಳಸುವುದೇ ಇಲ್ಲ: ಸಿದ್ದರಾಮಯ್ಯನವರಿಗೂ ಅವರ ಕುಟುಂಬ ವೈದ್ಯರು ಮಾಸ್ಕ್ ಬಳಸಿ ನಿದ್ದೆಗೆ ಜಾರುವಂತೆ ಈಗಾಗಲೇ ಸಲಹೆ ನೀಡಿದ್ದಾರೆ. ಆದರೆ ಅವರು ಮಾತ್ರ ಮಾಸ್ಕ್ ಬಳಸುವುದೇ ಇಲ್ಲ. ಸಿದ್ದರಾಮಯ್ಯನವರಿಗೆ ಸ್ಕಿನ್ ಅಲರ್ಜಿ ಇದೆ. ಈ ಕಾರಣಕ್ಕಾಗಿಯೇ ಅವರು ಬ್ಲೇಡ್ ಬಳಸಿ ಶೇವಿಂಗ್ ಮಾಡುವುದಿಲ್ಲ. ಯಾವುದೇ ಕ್ರೀಮ್‌ಗಳನ್ನು ಬಳಸುವುದಿಲ್ಲ. ಆದರೆ ವೈದ್ಯರು ಸಲಹೆ ಮಾಡಿರುವ ಸಿ-ಟ್ಯಾಪ್ ಎಂಬ ಮಾಸ್ಕ್‌ನ್ನು ಸಿಂಥೆಟಿಕ್‌ನಿಂದ ತಯಾರಿಸಲಾಗಿದೆ. ಇದನ್ನು ಮೂರು ತಿಂಗಳು ಬಳಸಿದ್ದರಿಂದ ಸಿದ್ದರಾಮಯ್ಯನವರ ಮುಖದ ಭಾಗ ಒರಟಾಗಿ ಹೊರಬಲು ಕಾಣಿಸಿಕೊಂಡಿದ್ದರಿಂದ ಅವರು ಮಾಸ್ಕ್ ಧರಿಸುವುದನ್ನೇ ಬಿಟ್ಟಿದ್ದಾರೆ. ಕ್ಲಾಕ್ ಮಾಸ್ಕ್ ತರಿಸಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದರೂ ಸ್ಕಿನ್ ಅಲರ್ಜಿಯ ಭಯಕ್ಕೆ ಅದರ ಉಸಾಬರಿಯೇ ಬೇಡ ಎನ್ನುತ್ತಿದ್ದಾರೆ ಸಿದ್ದರಾಮಯ್ಯ. ಇದರ ಫಲವಾಗಿ ರಾತ್ರಿ ನಿದ್ದೆಯ ಬರ ಹಗಲು ತೂಕಡಿಕೆಯ ಅಬ್ಬರ.
ಪ್ರಾಣಾಯಾಮ: ಈ ಹಿನ್ನೆಲೆಯಲ್ಲಿ ಅವರ ಹಿತೈಷಿಗಳು ಹಾಗೂ ಆರೋಗ್ಯ ತಜ್ಞರು ಯೋಗ ಹಾಗೂ ಪ್ರಾಣಾಯಾಮದ ಮೊರೆ ಹೋಗುವಂತೆ ಸಿದ್ದರಾಮಯ್ಯನವರಿಗೆ ಸಲಹೆ ನೀಡಿದ್ದಾರೆ. ಆದರೆ ನಿಯಮಿತವಾಗಿ ಪ್ರಾಣಾಯಾಮ ಮಾಡುವುದಕ್ಕೆ ಸಿಎಂ ಸಾಹೇಬ್ರಿಗೆ ಸಮಯದ ಅಭಾವವಿದೆ. ಆದರೂ ಇತ್ತೀಚೆಗೆ ದಿನಕ್ಕೆ ಒಂದು ಗಂಟೆ ಯೋಗ ಹಾಗೂ ಪ್ರಾಣಾಯಾಮ ಮಾಡುತ್ತಿದ್ದಾರೆ ಎನ್ನುತ್ತವೆ ಮುಖ್ಯಮಂತ್ರಿಗಳ ಆರೋಗ್ಯ ತಪಾಸಣೆ ಮಾಡುವ ವೈದ್ಯ ತಂಡ.
ಸಿದ್ದರಾಮಯ್ಯನವರ ಹಗಲು ನಿದ್ದೆ ಸಮಸ್ಯೆಗೆ ಅವರ ಆಪ್ತಮಿತ್ರ ಸಿ.ಎಂ.ಇಬ್ರಾಹಿಂ ಬೇರೆಯದೇ ಆದ ಕಾರಣ ನೀಡುತ್ತಾರೆ. ಸಿದ್ದರಾಮಯ್ಯನವರಿಗೆ ಕಾರ್ಯ ಬಾಹುಳ್ಯ ಜಾಸ್ತಿ. ಜತೆಗೆ ಅವರು ಮಧ್ಯಾಹ್ನ ಊಟದ ಬಳಿಕ ನಿದ್ದೆ ಮಾಡುವುದಿಲ್ಲ.
ಆದರೆ ಅವರು ತೂಕಡಿಸಿದರೂ ಸಭೆಯಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಗ್ರಹಿಸುತ್ತಲೇ ಇರುತ್ತಾರೆ ಎನ್ನುತ್ತಾರೆ.
ಹಿರಿಯ ಐಎಎಸ್ ಅಧಿಕಾರಿಯೊಬ್ಬರ ಪ್ರಕಾರ, ಬಜೆಟ್ ಪೂರ್ವ ಸಭೆಗಳಲ್ಲೂ ಸಿದ್ದರಾಮಯ್ಯ ನಿದ್ದೆಗೆ ಜಾರುತ್ತಿದ್ದರು. ಆದರೆ ಸಭೆಯಲ್ಲಿ ಏನು ಚರ್ಚೆಯಾಗುತ್ತದೆ ಎಂಬುದು ಅವರ ಗ್ರಹಿಕೆಯಲ್ಲಿ ಇರುತ್ತಿತ್ತು. ಇದು ನಮಗೆಲ್ಲ ಆಶ್ಚರ್ಯ ಮೂಡಿಸುತ್ತದೆ ಎನ್ನುತ್ತಾರೆ.



-ರಾಘವೇಂದ್ರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement