ಗೋವಾ ನಿರಾಶ್ರಿತರಿಗೆ ಸಾಂಕ್ರಾಮಿಕ ಭೀತಿ
ಬೈನಾದಲ್ಲಿ ಮನೆ ಕಳೆದುಕೊಂಡ ನಿರಾಶ್ರಿತ ಕನ್ನಡಿಗರಿಗೀಗ ಸಾಂಕ್ರಾಮಿಕ ರೋಗದ ಭೀತಿಯೂ ಕಾಡುತ್ತಿದೆ.
ವಾಸ್ಕೋ: ಬೈನಾದಲ್ಲಿ ಮನೆ ಕಳೆದುಕೊಂಡ ನಿರಾಶ್ರಿತ ಕನ್ನಡಿಗರಿಗೀಗ ಸಾಂಕ್ರಾಮಿಕ ರೋಗದ ಭೀತಿಯೂ ಕಾಡುತ್ತಿದೆ. ವಾಂತಿ, ಭೇದಿ, ಶೀತ ಹಾಗೂ ಜ್ವರ ಕಾಣಿಸಿಕೊಂಡಿದೆ. ಕಡಲತೀರದ ಶೀತಗಾಳಿ ಇವರನ್ನು ಮತ್ತಷ್ಟು ಕಂಗೆಡುವಂತೆ ಮಾಡಿದೆ. 200ಕ್ಕೂ ಹೆಚ್ಚು ಜನ ಈಗ ಕಲುಷಿತ ನೀರನ್ನೇ ಸೇವಿಸುತ್ತಿದ್ದಾರೆ. ಹೂತಿರುವ ಕಾಯಿಪಲ್ಲೆಗಳು, ಧವಸ ಧಾನ್ಯಗಳು, ಬಟ್ಟೆಗಳು ಕೊಳೆತು ದುರ್ವಾಸನೆ ಹಬ್ಬಿದೆ. ಚಿತ್ರದುರ್ಗ ಮರುಘಾಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಇತ್ತೀಚೆಗೆ ಔಷಧಿಗಳನ್ನೂ ವಿತರಿಸಿದ್ದರು. ವೈದ್ಯರಿಂದ ಕೆಲವರಿಗೆ ಚಿಕಿತ್ಸೆಯನ್ನೂ ನೀಡಲಾಗಿತ್ತು. 4-5 ಜನರು ಜ್ವರದಿಂದ ಬಳಲುತ್ತಿದ್ದರೆ, 15ಕ್ಕೂ ಹೆಚ್ಚು ಜನರು ಶೀತ ಬಾಧೆಗೊಳಗಾಗಿದ್ದಾರೆ. 5-6 ಜನರು ವಾಂತಿ-ಭೇದಿಯಿಂದ ನರಳುತ್ತಿದ್ದಾರೆ.
ಶಾಲೆ, ಕೂಲಿಯೂ ಇಲ್ಲ
ಇಲ್ಲಿನ ಮಹಿಳೆಯರು ಹಾಗೂ ಪುರುಷರು ಪ್ರತಿದಿನ ಕೂಲಿಗೆ ಹೋಗುತ್ತಿದ್ದರು. ಅಂದಿನ ದುಡಿಮೆ ಅಂದೇ ಖರ್ಚಾಗುತ್ತಿತ್ತು. ಆದರೆ ಜು.11ರಂದು ಮನೆ ಕೆಡವಿದ ಮೇಲೆ ಇವರು ಕೂಲಿಗೂ ಹೋಗಿಲ್ಲ. ದಿನದ ಊಟಕ್ಕೂ ತೊಂದರೆ ಎದುರಾಗಿದೆ. ಗೃಹ ಬಳಕೆ ವಸ್ತುಗಳು, ಧವಸ-ಧಾನ್ಯಗಳು, ಬಟ್ಟೆ ಬರೆಗಳು, ಪಾತ್ರೆಗಳು ಎಲ್ಲವೂ ಮಣ್ಣನಡಿಯಲ್ಲಿ ಸಿಲುಕಿದ್ದರಿಂದ ಭವಿಷ್ಯದ ಚಿಂತೆ ಇವರನ್ನು ಕಾಡುತ್ತಿದೆ. ಬೈನಾದ 20ಕ್ಕೂ ಹೆಚ್ಚು ಮಕ್ಕಳು ಸಮೀಪದಲ್ಲಿರುವ ಬೈನಾ ಕನ್ನಡ ಶಾಲೆಯ ವಿದ್ಯಾರ್ಥಿಗಳು. ಆದರೆ, ಅವರಿಗೀಗ ಕೇವಲ ಮನೆಯಷ್ಟೇ ಅಲ್ಲ, ಪಠ್ಯಪುಸ್ತಕ, ಸಮವಸ್ತ್ರವೂ ಇಲ್ಲ. ಶಾಲೆಗೂ ಹೋಗುತ್ತಿಲ್ಲ. ವೃದ್ಧರು, ಬಾಣಂತಿಯರು, ಗರ್ಭಿಣಿಯರ ಪರದಾಟವಂತೂ ಎಲ್ಲರಲ್ಲಿಯೂ ಮರುಕ ಹುಟ್ಟಿಸುತ್ತದೆ. ಈಗ ನಿರಾಶ್ರಿತರು ಸಾಮೂಹಿಕವಾಗಿ ಬಯಲಿನಲ್ಲೇ ಮೇಲೆ ಪ್ಲಾಸ್ಟಿಕ್ ಶೀಟ್ ಹಾಕಿಕೊಂಡು ಅಡುಗೆ ತಯಾರಿಸುತ್ತಾರೆ. ಅಕ್ಕಿ, ಬೇಳೆಯನ್ನು ಪರಿಚಯದವರಲ್ಲಿ ಕಾಡಿ ಬೇಡಿ ತಂದು ಅಡುಗೆ ತಯಾರಿಸುತ್ತಿದ್ದಾರೆ. ಅದೂ ದಿನಕ್ಕೆ ಒಂದೇ ಊಟ!
ಸಿಎಂ ಭೇಟಿ: ಭರವಸೆ: ಈ ನಿಟ್ಟಿನಲ್ಲಿ ನಿರಾಶ್ರಿತರಿಗೆ ನೆರವಾಗಬೇಕು ಎಂದು ಆಗ್ರಹಿಸಿ ಕರ್ನಾಟಕ ನವ ನಿರ್ಮಾಣ ವೇದಿಕೆಂು ನೇತೃತ್ವದಲ್ಲಿ ಶನಿವಾರ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಂ್ಯು ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಗೋವಾ ಮುಖ್ಯಮಂತ್ರಿಗೆ ಪತ್ರ ಬರೆದು ಹಿತ ಕಾಪಾಡಲು ಯತ್ನಿಸುತ್ತೇನೆ ಎಂದು ಸಿಎಂ ಭರವಸೆ ನೀಡಿದ್ದಾರೆ.
-ವಸಂತಕುಮಾರ್ ಕತಗಾಲ