ನವದಂಪತಿಗಿಲ್ಲ ಶಯನಗೃಹ!
ಅಯ್ಯೋ... ಉತ್ತರ ಕನ್ನಡ... ನೀ ಹಿಂಗ ತೀಡಡ...(ಅಳುವುದು). ಏಕೆಂದರೆ ಇಲ್ಲಿನ್ನೂ ಮದುವೆಯ...
ಕಾರವಾರ: ಅಯ್ಯೋ... ಉತ್ತರ ಕನ್ನಡ... ನೀ ಹಿಂಗ ತೀಡಡ...(ಅಳುವುದು). ಏಕೆಂದರೆ ಇಲ್ಲಿನ್ನೂ ಮದುವೆಯ ಸಂಭ್ರಮ ಆಚರಿಸಿದ ಶೇ.40ರಷ್ಟು ದಂಪತಿಗೆ ಮಲಗಲು ಪ್ರತ್ಯೇಕ ಕೊಠಡಿಗಳೇ ಇಲ್ಲ. ಶೇ.6ರಷ್ಟು ಮನೆಗಳಲ್ಲಿ ಅಡುಗೆ ಕೋಣೆ ಇಲ್ಲ. ಶೇ.9ರಷ್ಟು ಮನೆಗಳಲ್ಲಿ ಸ್ನಾನಗೃಹವೂ ಇಲ್ಲ. ಶೇ.48ರಷ್ಟು ಮನೆಗಳಲ್ಲಿ ಟಿವಿಗಳೇ ಇಲ್ಲ!
2011ರ ಜನಗಣತಿಯಲ್ಲಿ ಕಂಡು ಬಂದ ಅಂಶಗಳು ಅಚ್ಚರಿ ಹುಟ್ಟಿಸಿದರೂ ಜಿಲ್ಲೆಯ ಜನತೆ ಇನ್ನೂ ಹಿಂದಿಳಿದಿದ್ದಾರೆ ಎನ್ನುವುದಕ್ಕೆ ಸ್ಪಷ್ಟ ನಿದರ್ಶನವಾಗಿದೆ. ಇಂಥ ಇಲ್ಲಗಳು ಗ್ರಾಮೀಣ ಪ್ರದೇಶದಲ್ಲಿಯೇ ಹೆಚ್ಚು.
ಒಂದೇ ಕೋಣೆ: ಜಿಲ್ಲೆಯ ಶೇ.8ರಷ್ಟು ಮನೆಗಳಿಗೆ ಅಡುಗೆ ಮನೆಯೇ ಇಲ್ಲ. ಇರುವ ಒಂದೇ ಕೋಣೆ ಬೇಕಾದಾಗ ಅಡುಮೆ ಮನೆಯಾದರೆ, ನಂತರ ಹಾಲ್ ಆಗುತ್ತದೆ. ರಾತ್ರಿಯಾಯಿತೆಂದರೆ ಅದೇ ಶಯನಗೃಹವಾಗಿ ಪರಿವರ್ತತವಾಗುತ್ತದೆ. ಇನ್ನು ಗ್ರಾಮೀಣ ಪ್ರದೇಶದ ಶೇ.12ರಷ್ಟು ಮನೆಗಳಲ್ಲಿ, ನಗರ ಪ್ರದೇಶದಲ್ಲಿಯೂ ಶೇ.4ರಷ್ಟು ಮನೆಗಳಿಗೆ ಸ್ನಾನದ ಕೋಣೆಗಳೇ ಇಲ್ಲ.
ಈ ಕಾಲದಲ್ಲಿಯೂ ಜಿಲ್ಲೆಯಲ್ಲಿ ಟಿವಿ, ರೇಡಿಯೋಗಳಿಲ್ಲದ ಮನೆಗಳು ಶೇ.48ರಷ್ಟಿವೆ. ಜಿಲ್ಲೆಯಲ್ಲಿ ಶೇ.8ರಷ್ಟು ಕುಟುಂಬಗಳು ಮಾತ್ರ ಕಾರು, ಜೀಪು ಮತ್ತಿತರ ವಾಹನಗಳನ್ನು ಹೊಂದಿವೆ. ಜಿಲ್ಲೆಯ ಶೇ.48ರಷ್ಟು ಕುಟುಂಬಗಳು ಮಾತ್ರ ಶಾಶ್ವತ ಕಟ್ಟಡದಲ್ಲಿ ವಾಸಿಸುತ್ತಿವೆ. ಉಳಿದ ಕುಟುಂಬಗಳು ಅರೆ ಶಾಶ್ವತ ಹಾಗೂ ಗುಡಿಸಲುಗಳಲ್ಲಿ ವಾಸಿಸುತ್ತಿವೆ. ಶೇ.85ರಷ್ಟು ಕುಟುಂಬಗಳಿಗೆ ಮಾತ್ರ ಸ್ವಂತ ಮನೆಗಳಿವೆ. ಶೇ.11ರಷ್ಟು ಕುಟುಂಬಗಳು ಬಾಡಿಗೆ ಮನೆಯಲ್ಲಿ ವಾಸಿಸುತ್ತಿವೆ. ಉತ್ತರ ಕನ್ನಡ ಜಿಲ್ಲೆಯ ಗ್ರಾಮೀಣ ಪ್ರದೇಶಗಳು ಗುಡ್ಡಗಾಡುಗಳಿಂದ ಆವೃತವಾಗಿರುವುದರಿಂದ ಸೌಲಭ್ಯಗಳಿನ್ನೂ ತಲುಪಿಯೇ ಇಲ್ಲ. ಜನಸಂಖ್ಯೆ ಹೆಚ್ಚಿರುವ ಗ್ರಾಮೀಣ ಪ್ರದೇಶದಲ್ಲಿನ್ನು ಆಧುನೀಕತೆ ಎಂಬುವುದು ಇಣುಕಿಯೂ ನೋಡಿಲ್ಲ.
ಉನ್ನತ ಶಿಕ್ಷಣಕ್ಕೂ ಇಲ್ಲ ಬೆಲೆ
ಉತ್ತರ ಕನ್ನಡ ಜಿಲ್ಲೆಯ ಪ್ರತಿಭಾವಂತರು ಜಗತ್ತಿನ ವಿವಿಧ ದೇಶಗಳಲ್ಲಿ ಉದ್ಯೋಗದಲ್ಲಿದ್ದಾರೆ. ಆದರೆ ಜಿಲ್ಲೆ ಮಾತ್ರ ಇನ್ನೂ ಹಿಂದುಳಿದಿದೆ. ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜ್ ಮಂಜೂರಾಗಬೇಕಾದರೆ 2012ರ ತನಕ ಜನತೆ ಕಾಯಬೇಕಾಯಿತು. ಇನ್ನೂ ಮೆಡಿಕಲ್ ಕಾಲೇಜ್ ಆರಂಭವಾಗಿಲ್ಲ. ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಮಂಜೂರಾಗಬೇಕಾದರೆ 2008ರ ತನಕವೂ ಹೋರಾಟ ನಡೆದಿತ್ತು.
ಕತ್ತಲಲ್ಲಿ ಕುಗ್ರಾಮಗಳು
ಇಲ್ಲಿ ಕೈಗಾದಲ್ಲಿ ಅಣು ವಿದ್ಯುತ್ ಸ್ಥಾವರವಿದೆ. ಕದ್ರಾ, ಕೊಡಸಳ್ಳಿ, ಸುಪಾ, ಗೇರಸೊಪ್ಪಗಳಲ್ಲಿ ಜಲ ವಿದ್ಯುತ್ ಯೋಜನೆಗಳಿವೆ. ಆದರೆ ಶೇ.10ರಷ್ಟು ಪ್ರದೇಶಗಳಿಗಿನ್ನೂ ವಿದ್ಯುತ್ ಸೌಲಭ್ಯವಿಲ್ಲ. ಯಾವುದೇ ಸೌಲಭ್ಯಗಳಿಲ್ಲದ ಗ್ರಾಮಗಳ ಜನತೆ ಊರಿಗೆ ಊರನ್ನೇ ಬಿಟ್ಟು ಹೋಗುತ್ತಿದ್ದಾರೆ. ಈಗ ಜನವಸತಿ ಇಲ್ಲದಿರುವ ಗ್ರಾಮಗಳ ಸಂಖ್ಯೆ ಜಿಲ್ಲೆಯಲ್ಲಿ 43ಕ್ಕೇರಿದೆ. ಎಲ್ಲೊ ಕೆಲವು ಕೆಲವು ಮನೆಗಳು ಮಾತ್ರ ಇವೆ. ನಮ್ಮ ಜನಪ್ರತಿನಿಧಿಗಳು ಈ ಬಗ್ಗೆ ಗಂಭೀರವಾಗಿ ಆಲೋಚಿಸಬೇಕಾಗಿದೆ. ಜಿಲ್ಲೆಯಾದ್ಯಂತ ಮೂಲಸೌಕರ್ಯ ಕಲ್ಪಿಸಲು ಮುಂದಾಗಬೇಕಿದೆ.
-ವಸಂತಕುಮಾರ್ ಕತಗಾಲ