ನಿಮ್ಮಭಾಷಣ ನಮಗೆ ಬೇಡ, ಆರೋಪಿಗಳ ಬಂಧನಕ್ಕೆ ಏನು ಕ್ರಮ ಕೈಗೊಂಡಿದ್ದೀರಿ, ತಿಳಿಸಿ
ಬಾಲಕಿ ಮೇಲೆ ಅತ್ಯಾಚಾರ ಎಸಗಿದ...
ಕೃಷ್ಣರಾಜಪುರ: ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳದ ವಿಬ್‌ಗ್ಯೊರ್ ಶಾಲೆ ವಿರುದ್ಧ ಪಾಲಕರಿಗಿದ್ದ ಆಕ್ರೋಶ ಶನಿವಾರ ಪೊಲೀಸರ ವಿರುದ್ಧ ತಿರುಗಿತು. ಆರೋಪಿಗಳನ್ನು ಬಂಧಿಸದ ಕ್ರಮ ಸಮರ್ಥಿಸಿಕೊಳ್ಳಲಾಗದೇ ಪೊಲೀಸ್ ಆಯುಕ್ತರಿಗೇ ಅದರ ಬಿಸಿ ನೇರವಾಗಿ ತಟ್ಟಿತು.
ಶನಿವಾರವೂ ಮುಂದುವರಿದಿತ್ತು ಪೋಷಕರ ಪ್ರತಿಭಟನೆ. ಅದಕ್ಕೆ ಮತ್ತಷ್ಟು ಬಲ ತುಂಬಿದವರು ಸಾವಿರಾರು ಸಂಖ್ಯೆಯಲ್ಲಿ ಸೇರಿದ ಟೆಕಿಗಳು, ಕನ್ನಡಪರ ಸಂಘಟನೆ ಮತ್ತು ರಾಜಕೀಯ ಪಕ್ಷಗಳ ಕಾರ್ಯಕರ್ತರು. ಸ್ಥಳೀಯ ಶಾಸಕ ಅರವಿಂದ ಲಿಂಬಾವಳಿ ನೇತೃತ್ವದಲ್ಲಿ ಬಿಜೆಪಿ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ನಾಯ್ಡು ನೇತೃತ್ವದಲ್ಲಿ ಕಾಂಗ್ರೆಸ್, ಜಯಕರ್ನಾಟಕ ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಶಾಲೆ ಬಳಿ ಜಮಾಯಿಸಿದರು. ಅಲ್ಲಿಂದ ಹೆಚ್‌ಎಎಲ್ ಪೊಲೀಸ್ ಠಾಣೆ ಹಿಂಭಾಗದ ಮೈದಾನದವರೆಗೆ ಜಾಥಾದಲ್ಲಿ ತೆರಳಿದರು.
ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ನಗರ ಪೊಲೀಸ್ ಆಯುಕ್ತರು ಸ್ಥಳಕ್ಕೆ ಬರಬೇಕು ಎಂದು ಪಟ್ಟುಹಿಡಿದರು. 12.50ರ ಸುಮಾರಿಗೆ ಆಗಮಿಸಿದ ರಾಘವೇಂದ್ರ ಔರಾದ್ಕರ್ ಮೈಕ್ ಕೈಗೆತ್ತಿಕೊಂಡು ಮಾತು ಆರಂಭಿಸಿದರು. ಅದು ಪ್ರತಿಭಟನಾಕಾರರನ್ನು ಇನ್ನಷ್ಟು ರೊಚ್ಚಿಗೆಬ್ಬಿಸಿತು. 'ಭಾಷಣ ಬೇಡ. ಆರೋಪಿಗಳ ಬಂಧನಕ್ಕೆ ಕೈಗೊಂಡಿರುವ ಕ್ರಮದ ಬಗ್ಗೆ ಮಾತ್ರ ವಿವರಿಸಿ' ಎಂದು ಒತ್ತಾಯಿಸಿದರು. 'ಆರೋಪಿಗಳನ್ನು ಶೀಘ್ರ ಬಂಧಿಸುವ' ಭರವಸೆ ನೀಡಿದ ಆಯುಕ್ತರು ಸ್ಥಳದಿಂದ ತೆರಳಲು ಮುಂದಾದರು. ಆಗ ಪ್ರತಿಭಟನಾಕಾರರು ಅವರ ಕಾರಿಗೆ ಮುತ್ತಿಗೆ ಹಾಕಿ ದಿಗ್ಬಂಧನ ವಿಧಿಸಿದರು. ಪೊಲೀಸರು ಹರಸಾಹಸ ಮಾಡಿ ಆಯುಕ್ತರು ತೆರಳಲು ಅನುವು ಮಾಡಿಕೊಟ್ಟರು.
ಆಡಳಿತ ಮಂಡಳಿಯೂ ಆರೋಪಿ: ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಸ್ಥಳೀಯ ಶಾಸಕ ಅರವಿಂದ ಲಿಂಬಾವಳಿ ಸರ್ಕಾರ ಮತ್ತು ಶಾಲಾ ಆಡಳಿತ ಮಂಡಳಿ ವಿರುದ್ಧ ಕಿಡಿಕಾರಿದರು. ಖಾಸಗಿ ವಿದ್ಯಾಸಂಸ್ಥೆಗಳು ಕೇಳಿದಷ್ಟು ಹಣ ನೀಡಿ ಶಾಲೆಗೆ ಸೇರಿಸಿದರೆ ಮಕ್ಕಳಿಗೆ ರಕ್ಷಣೆಯೇ ಇಲ್ಲದಂತಾಗಿದೆ. ಇಂತಹ ವಿದ್ಯಾಸಂಸ್ಥೆಗಳಿಗೆ ನೀಡಿರುವ ಅನುಮತಿ ರದ್ದುಪಡಿಸಬೇಕು. ಆರೋಪಿಗಳನ್ನು ರಕ್ಷಿಸುತ್ತಿರುವ ಆಡಳಿತ ಮಂಡಳಿಯವರನ್ನೂ ಆರೋಪಿಗಳೆಂದು ಘೋಷಿಸಿ ಜೈಲಿಗಟ್ಟಬೇಕು ಎಂದು ಒತ್ತಾಯಿಸಿದರು.
ಕೆಪಿಸಿಸಿ ಮಹಿಳಾ ವಿಭಾಗದ ಅಧ್ಯಕ್ಷೆ ಮಂಜುಳಾ ನಾಯ್ಡು ಮಾತನಾಡಿ, ಶಾಲಾ ಆವರಣದಲ್ಲೇ ಅಮಾನವೀಯವಾಗಿ ಮುಗ್ಧ ಮಗುವಿನ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಶಾಲೆ ಸಿಬ್ಬಂದಿಗಳನ್ನು ಗಲ್ಲಿಗೇರಿಸಬೇಕು. ಆಡಳಿತ ಮಂಡಳಿ ವಿರುದ್ಧವೂ ಕ್ರಿಮಿನಲ್ ಪ್ರಕರಣ ದಾಖಲಿಸಿ ಶಾಲೆಯ ಅನುಮತಿ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ಮಾಜಿ ಶಾಸಕ ನಂದೀಶ್ ರೆಡ್ಡಿ ಕೂಡಲೆ ಅರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.
ವಿಬ್‌ಗ್ಯೊರ್ ಶಾಲೆ ಭದ್ರತೆಗೆ 4 ಕೆಎಸ್‌ಆರ್‌ಪಿ ತುಕಡಿ, ಮಹಿಳಾ ಸಿಬ್ಬಂದಿ ಸೇರಿದಂತೆ ಸುಮಾರು 250 ಪೊಲೀಸರನ್ನು ನಿಯೋಜಿಸಲಾಗಿದೆ. ವಿಬ್‌ಗ್ಯೊರ್ ಶಾಲೆಯ ವಿವಿಧ ಶಾಖೆಗಳಲ್ಲಿ ಮುಂಜಾಗೃತೆಯಾಗಿ ಪೋಷಕರ ಸಭೆ ನಡೆಸಲಾಗಿದೆ.