ಪ್ರಕರಣಗಳಿಗೂ ಶಿಕ್ಷೆ ಪ್ರಮಾಣಕ್ಕೂ ಸಂಬಂಧವೇ ಇಲ್ಲ!
ರಾಜ್ಯದಲ್ಲಿ ಮಕ್ಕಳ ಮೇಲೆ ನಡೆಯುವ ಅತ್ಯಾಚಾರ ಪ್ರಕರಣಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ...
ಕನ್ನಡಪ್ರಭ ವಾರ್ತೆ, ಬೆಂಗಳೂರು, ಜು.19
ರಾಜ್ಯದಲ್ಲಿ ಮಕ್ಕಳ ಮೇಲೆ ನಡೆಯುವ ಅತ್ಯಾಚಾರ ಪ್ರಕರಣಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. 2013ರಲ್ಲಿ 270 ಮಕ್ಕಳು ಕಾಮುಕರ ಅಟ್ಟಹಾಸಕ್ಕೆ ತುತ್ತಾಗಿದ್ದಾರೆ.
ಒಂದು ಕಡೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ, ಆದರೆ ಶಿಕ್ಷೆ ಪ್ರಮಾಣ ಮಾತ್ರ ಜಾರಿಯಾಗುತ್ತಲೇ ಇಲ್ಲ.
ರಾಷ್ಟ್ರೀಯ ಅಪರಾಧ ದಾಖಲಾತಿ ಪ್ರಕಾರ 2011ರಲ್ಲಿ 97 ಪ್ರಕರಣ, 2012ರಲ್ಲಿ 142 ಪ್ರಕರಣ ಹಾಗೂ 2013ರಲ್ಲಿ 270 ಪ್ರಕರಣ ದಾಖಲಾಗಿವೆ. ಅದೇ ರೀತಿ ಶಿಕ್ಷೆ ಪ್ರಮಾಣ 2011ರಲ್ಲಿ ಶೇ.21, 2012ರಲ್ಲಿ ಶೇ.17.3 ಹಾಗೂ 2013ರಲ್ಲಿ ಶೇ.11ರಷ್ಟು ಆಗಿದೆ.
ಕಾರಣಗಳೇನು?: ಅಪರಾಧಗಳ ಸಂಖ್ಯೆ ಹೆಚ್ಚುತ್ತಿದ್ದರೂ ಪ್ರಮಾಣ ಇಳಿಮುಖವಾಗಲು ಪ್ರಮುಖವಾಗಿ ವೈಜ್ಞಾನಿಕ ತನಿಖೆ, ಸಾಕ್ಷಿಗಳ ಕೊರತೆ ಕಾರಣವಾಗುತ್ತಿದೆ ಎನ್ನುತ್ತಾರೆ ಅತ್ಯಾಚಾರ ಪ್ರಕರಣಗಳನ್ನು ನಿರ್ವಹಿಸುವ ಹೆಸರು ಹೇಳಲಿಚ್ಛಿಸದ ಸರ್ಕಾರಿ ವಕೀಲರು.
ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳಲ್ಲಿ ಮಕ್ಕಳ ಹೇಳಿಕೆ, ಸಾಂದರ್ಭಿಕ ಸಾಕ್ಷಿ, ಪೋಷಕರ ಹೇಳಿಕೆಗಳು ಹಾಗೂ ಮಕ್ಕಳ ಮೇಲೆ ನಡೆದ ದೌರ್ಜನ್ಯದ ಬಗ್ಗೆ ವೈದ್ಯಕೀಯ ವರದಿ ಹಾಗೂ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸುವ ಪೂರಕ ದಾಖಲೆಗಳು ಮುಖ್ಯ.
ಆದರೆ, ಇವುಗಳಲ್ಲಿ ಮಕ್ಕಳ ಹೇಳಿಕೆಯೇ ಪ್ರಮುಖವಾದರೂ ಸಾಂದರ್ಭಿಕ ಸಾಕ್ಷಿಗಳು ಹಾಗೂ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸುವ ದಾಖಲೆಗಳು ಪ್ರಮುಖ. ಆದರೆ, ಹಲವು ಪ್ರಕರಣಗಳಲ್ಲಿ ಪೊಲೀಸರು ಘಟನೆ ಬಗ್ಗೆ ಮಾಹಿತಿ ಪಡೆದ ಬಳಿಕ ವೈಜ್ಞಾನಿಕವಾಗಿ ತನಿಖೆ ನಡೆಸಿ ಘಟನಾ ಸ್ಥಳದ ಸಾಕ್ಷ್ಯಗಳನ್ನು ಸರಿಯಾಗಿ ಸಂಗ್ರಹಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲು ವಿಫಲರಾಗುತ್ತಾರೆ ಎನ್ನುತ್ತಾರೆ ವಕೀಲರು.
ಇನ್ನು ಘಟನಾ ಸ್ಥಳದಲ್ಲೇ ಪಂಚರ ಸಮಕ್ಷಮದಲ್ಲಿ ಹೇಳಿಕೆಗಳನ್ನು ಪಡೆದುಕೊಳ್ಳಬೇಕಾಗುತ್ತದೆ. ಸಾಕ್ಷಿಗಳು ಘಟನಾ ಸ್ಥಳದಲ್ಲೇ ನೀಡಿದ ಹೇಳಿಕೆಗಳು ಹಾಗೂ ನ್ಯಾಯಾಲಯಕ್ಕೆ ಬಂದಾಗ ನೀಡುವ ಹೇಳಿಕೆಗಳು ಭಿನ್ನವಾಗುತ್ತವೆ. ಕೆಲವೊಮ್ಮೆ ಸಾಕ್ಷಿಗಳು ತಾವು ಬೇರೆಯವರಿಂದ ಕೇಳಿದ ಮಾಹಿತಿಯನ್ನು ಪೊಲೀಸರ ಮುಂದೆ ಹೇಳಿದ್ದೇವೆ.
ಈ ಬಗ್ಗೆ ನಮಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ಹೇಳಿಕೆ ನೀಡುತ್ತಾರೆ. ಇದರಿಂದ ನ್ಯಾಯಾಲಯದಲ್ಲಿ ಆರೋಪಗಳನ್ನು ಸಾಬೀತುಮಾಡಲು ಸಾಧ್ಯವಾಗುವುದಿಲ್ಲ ಎನ್ನುತ್ತಾರೆ ವಕೀಲರು.
ರಾಷ್ಟ್ರೀಯ ಅಪರಾಧ ದಾಖಲಾತಿ
ಘಟಕದ ಅಂಕಿ ಸಂಖ್ಯೆಗಳು
2011 2012 2013
ಪ್ರಕರಣಗಳು 97 142 270
ಆರೋಪ ಪಟ್ಟಿ 96 130 203
ಶಿಕ್ಷೆ 13 17 17
ಬಂಧಿತರು 147 178 330
ಆರೋಪಪಟ್ಟಿಗೆ
ಸೇರಿಸಲ್ಪಟ್ಟವರು 147 156 293
ಶಿಕ್ಷೆಗೊಳಗಾದವರು 16 19 14
ಶಿಕ್ಷೆ ಪ್ರಮಾಣ 21 17.3 11
ಪೋಸ್ಕೋ ಕಾಯ್ದೆ
2012ರಲ್ಲಿ ಜಾರಿಗೆ ಬಂದ
'ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ' (ಪೋಸ್ಕೋ) ಅನ್ವಯ ದಾಖಲಾದ ಪ್ರಕರಣಗಳು ಹಿಂದೆ ದಾಖಲಾದ ಅತ್ಯಾಚಾರ ಪ್ರಕರಣಗಳ ಮೇಲೆ ವಿಧಿಸಲಾಗಿದೆ. ಅದರ ಅನ್ವಯ ಆಗಿರುವ ಶಿಕ್ಷೆ ಪ್ರಮಾಣವನ್ನು ಪ್ರತ್ಯೇಕವಾಗಿ ವಿಂಗಡಿಸಿಲ್ಲ ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗ ಹೇಳುತ್ತಿದೆ. ಆದರೂ ಅಪರಾಧ ಪ್ರಕರಣಗಳ ಹೆಚ್ಚಳ, ಶಿಕ್ಷೆ ಪ್ರಮಾಣ ಇಳಿಮುಖ ಆತಂಕಕಾರಿಯಾಗಿದೆ.
ಪ್ರಕರಣಗಳ ವಿವರ (2013)
ರಾಜ್ಯವಾರು ಪ್ರಕರಣಗಳ ಸಂಖ್ಯೆ
1) ಮಧ್ಯಪ್ರದೇಶ 4335
2) ರಾಜಸ್ಥಾನ 3285
3) ಮಹಾರಾಷ್ಟ್ರ 3063
4) ಉತ್ತರ ಪ್ರದೇಶ 3050
5) ಅಸ್ಸಾಂ 1937
6) ಒಡಿಶಾ 1832
7) ಪಶ್ಚಿಮ ಬಂಗಾಳ 1685
8) ದೆಹಲಿ 1636
9) ಆಂಧ್ರಪ್ರದೇಶ 1635
10) ಛತ್ತೀಸಗಢ 1380
11) ಕೇರಳ 1221
12) ಜಾರ್ಖಂಡ್ 1204
13) ಬಿಹಾರ 1128
14) ಕರ್ನಾಟಕ 1030
15) ಹರ್ಯಾಣ 971
16) ತಮಿಳುನಾಡು 923
17) ಪಂಜಾಬ್ 888
18) ಗುಜರಾತ್ 732
19) ಜಮ್ಮುಕಾಶ್ಮೀರ 378
20) ಹಿಮಾಚಲ ಪ್ರದೇಶ 250
21) ತ್ರಿಪುರಾ 233
22) ಉತ್ತರಾಖಂಡ 228
23) ಮೇಘಾಲಯ 183
24) ಮಿಜೋರಾಂ 89
25) ಗೋವಾ 86
26) ಅರುಣಾಚಲಪ್ರದೇಶ 75
27) ಮಣಿಪುರ 72
28) ಸಿಕ್ಕಿಂ 43
29) ನಾಗಾಲ್ಯಾಂಡ್ 31
30) ಅಂಡಮಾನ್ ನಿಕೋಬಾರ್ 27
31) ಚಂಡೀಗಢ 45
32) ಹವೇಲಿ 05
33) ದಿಯು-ದಮನ 08
34) ಲಕ್ಷದ್ವೀಪ 02
35) ಪಾಂಡಿಚೇರಿ 17
ಒಟ್ಟು 33707